ನವದೆಹಲಿ: ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ.
ಅಮೆರಿಕ, ಚೀನಾ, ಭಾರತ ಅನುಕ್ರಮವಾಗಿ ಜಗತ್ತಿನ ಟಾಪ್ 3 ರಾಷ್ಟ್ರಗಳಾಗಿದ್ದು ಮಾರುಕಟ್ಟೆ ಬಂಡವಾಳದಲ್ಲಿ ಒಟ್ಟಾರೆ 839 ಅಮೆರಿಕನ್ ಡಾಲರ್ ಹೊಂದಿರುವ 111 ಕಂಪನಿಗಳನ್ನು ಭಾರತ ಹೊಂದಿದೆ. ಚೀನಾ 159 ಸಂಸ್ಥೆಗಳನ್ನು ಹೊಂದಿದ್ದರೆ ಅಮೆರಿಕ 121 ಸಂಸ್ಥೆಗಳನ್ನು ಹೊಂದಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.
ಕ್ರೆಡಿಟ್ ಸ್ಯೂಸ್ಸೆ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ, ಕ್ರೆಡಿಟ್ ಸ್ಯೂಸ್ ಫ್ಯಾಮಿಲಿ, 1000, 2018 ರ ವರದಿಯ ಪ್ರಕಾರ ಜಪಾನ್ ಯೇತರ ಏಷ್ಯನ್ ಪ್ರದೇಶದ ಕುಟುಂಬ ಒಡೆತನದ ಪಟ್ಟಿಯಲ್ಲಿ ಚೀನಾ, ಭಾರತ ಹಾಗೂ ಹಾಂಕ್ ಕಾಂಗ್ ಪ್ರಾಬಲ್ಯ ಮೆರೆದಿದೆ.
ಸಿಎಸ್ಆರ್ ಐ ಡೇಟಾಬೇಸ್ ನ ಪ್ರಕಾರ ಭಾರತ, ಚೀನಾ, ಹಾಂಗ್ ಕಾಂಗ್ ಪ್ರದೇಶಗಳು ಜಪಾನ್ ಯೇತರ ಏಷ್ಯನ್ ಪ್ರದೇಶದ ಕುಟುಂಬ ಒಡೆತನದ ಶೇ.65 ರಷ್ಟು ಸಂಸ್ಥೆಗಳನ್ನು ಹೊಂದಿದ್ದು, ಒಟ್ಟಾರೆ ಮಾರುಕಟ್ಟೆಯ ಪಾಲುದಾರಿಕೆಯಲ್ಲಿ 2.85 ಟ್ರಿಲಿಯನ್ ಡಾಲರ್ (ಶೇ.71) ರಷ್ಟನ್ನು ಹೊಂದಿದೆ.
ಭಾರತದ ನಂತರದ ಸ್ಥಾನದಲ್ಲಿ ಕೊರಿಯಾ ಇದ್ದು, ಮಾರುಕಟ್ಟೆ ಬಂಡವಾಳ 434.1 ಬಿಲಿಯನ್ ನಷ್ಟಿರುವ 43 ಸಂಸ್ಥೆಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಥಾಯ್ಲ್ಯಾಂಡ್ ತಲಾ 26 ಸಂಸ್ಥೆಗಳನ್ನು ಹೊಂದಿದೆ.