ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?

ಹಾಲಿ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ಹಿರಿಯ ಉದ್ಯೋಗಸ್ಥರ ಗ್ರಾಚ್ಯುಟಿ ಮೊತ್ತವನ್ನು 10 ರಿಂದ 30 ಲಕ್ಷ ರೂಗಳಿಗೆ ಏರಿಕೆ ಮಾಡಿದೆ. ಇಷ್ಟಕ್ಕೂ ಗ್ರಾಚ್ಟುಟಿ ಎಂದರೇನು..?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹಾಲಿ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ಹಿರಿಯ ಉದ್ಯೋಗಸ್ಥರ ಗ್ರಾಚ್ಯುಟಿ ಮೊತ್ತವನ್ನು 10 ರಿಂದ 30 ಲಕ್ಷ ರೂಗಳಿಗೆ ಏರಿಕೆ ಮಾಡಿದೆ. ಇಷ್ಟಕ್ಕೂ ಗ್ರಾಚ್ಟುಟಿ ಎಂದರೇನು..?
ಗ್ರಾಚ್ಟುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನೀಡಲಾಗುವ ಗೌರವಧನವೇ ಗ್ರಾಚ್ಟುಟಿ.. ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ ಇದಾಗಿದೆ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು. ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ. 
ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚ್ಯುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ.
ಗ್ರಾಚ್ಯುಟಿ ಲೆಕ್ಕಾಚಾರ  ಹೇಗೆ?
ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ಹಲವು ವಿಧಾನಗಳಲ್ಲಿ  ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾ ಹಾಕಲಾಗುತ್ತದೆ. ಈಗ ಒಬ್ಬ ಉದ್ಯೋಗಿ  ಗ್ರಾಚ್ಯುಟಿ ಪೇಮೆಂಟ್ ಕಾಯ್ದೆ 1972ಗೆ ಒಳಪಟ್ಟಿದ್ದರೆ, 15 ದಿನಗಳ ಸಂಬಳದ  ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜೊತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ. ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ. ನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ. 
ಉದಾಹರಣೆಗೆ:
ಉದ್ಯೋಗಿಗೆ ಮೂಲ ಸಂಬಳ(basic pay) ಪ್ರತಿ ತಿಂಗಳು 10,000 ರೂ ಸಂಬಳ ಬರುತ್ತಿದೆ ಎಂದಿಟ್ಟುಕೊಳ್ಳೋಣ. ಇದರ ಜೊತೆಗೆ ತುಟ್ಟಿಭತ್ಯೆ(dearness allowance) ಸೇರಿಸಬೇಕು. ಜೊತೆಗೆ 10 ವರ್ಷದ ಅನುಭವ ಸೇರಿಸಿಕೊಳ್ಳಿ.  ಗ್ರಾಚ್ಯುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು ಈ ಉದಾಹರಣೆಯಂತೆ= 10000x15/26x10 = Rs 57,692 ಒಂದು ವೇಳೆ ಉದ್ಯೋಗಿಯ ಅನುಭವ 4.5 ಅಥವಾ ನಾಲ್ಕು ಮುಕ್ಕಾಲು ವರ್ಷ ಇದ್ದರೆ ಅದನ್ನು ಹತ್ತಿರದ ಸಂಖ್ಯೆಗೆ ರೌಂಡ್ ಆಫ್ ಮಾಡಲಾಗುತ್ತದೆ. 
ಉದ್ಯೋಗಿ ನಡೆದುಕೊಂಡ ರೀತಿ ಕೂಡ ಗಣನೆಗೆ ಬರುತ್ತದೆ
ಇದರ ಜೊತೆಗೆ ಸಂಸ್ಥೆಯಯಲ್ಲಿ ಉದ್ಯೋಗಿ ನಡೆದುಕೊಂಡ ರೀತಿ, ಉದ್ಯೋಗಿಯ ಪ್ರಗತಿ ವರದಿ ಕೂಡ ಗ್ರಾಚ್ಯುಟಿ ನೀಡಿಕೆಯ ಗಣನೆಗೆ ಬರುತ್ತದೆ. ಇದಲ್ಲದೆ ಒಂದು ವೇಳೆ ಉದ್ಯೋಗಿಯು ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚ್ಯುಟಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.  ಗ್ರಾಚ್ಯುಟಿ ಮೊತ್ತವನ್ನು ಪಡೆಯಲು ಕನಿಷ್ಠ 5 ವರ್ಷಗಳ ಒಂದೇ ಸಂಸ್ಥೆಯನ್ನು ಔದ್ಯೋಗಿಕ ಅನುಭವ ಪಡೆದಿರಬೇಕಾಗುತ್ತದೆ. ಆದರೆ, ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ. ನಿವೃತ್ತಿ ಹೊಂದುವ ತನಕ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಉತ್ತಮವಾದ ಸೌಲಭ್ಯವಾಗಿ ಗ್ರಾಚ್ಯುಟಿ ಬಳಕೆಯಲ್ಲಿದೆ. ಗ್ರಾಚ್ಯುಟಿ ಮೊತ್ತವನ್ನು ಕಂಪನಿಯಲ್ಲಿ ಸೇವೆಯಲ್ಲಿದ್ದಾಗಲೇ ಪಡೆಯುವ ಹಾಗಿಲ್ಲ. 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕಡ್ಡಾಯವಾಗಿ ಗ್ರಾಚ್ಯುಟಿ ನೀಡಬೇಕೆಂಬ ನಿಯಮವಿದೆ. ಉದ್ಯೋಗಿಯು ದಿನಗೂಲಿ ನೌಕರನಾಗಿದ್ದಲ್ಲಿ ಆತ ಸೇವೆಯಿಂದ ಮುಕ್ತನಾಗುವ ಮುನ್ನ ಪಡೆದಿದ್ದ ಮೂರು ತಿಂಗಳ ಕೂಲಿಯನ್ನು ಒಂದು ದಿನದ ವೇತನವೆಂದು ಪರಿಗಣಿಸುವ ನಿಯಮವಿದೆ. ಈ ಮೊತ್ತ ಪಡೆಯಲು ನೌಕರನು ತನಗೆ ಸಂಬಂಧಪಟ್ಟ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳನ್ನಾದರೂ ಸತತವಾಗಿ ಸೇವೆ ಸಲ್ಲಿಸಿರಬೇಕು. 
ವಿಶೇಷ ಸಂದರ್ಭಗಳಲ್ಲಿ ನಿಯಮ ಅನ್ವಯವಾಗುವುದಿಲ್ಲ 
ಕೆಲ ವಿಶೇಷ ಸಂದರ್ಭಗಳಲ್ಲಿ ಗ್ರಾಚ್ಯುಟಿ ನೀಡುವಾಗ ಈ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ . ಅಂದರೆ ಉದ್ಯೋಗಿಯು ಕಂಪನಿಯ ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಈ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ. ಉದ್ಯೋಗಿಯು ಮರಣ ಹೊಂದಿದ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ  ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಯ ನಾಮಿನಿಗೆ ಅಥವಾ ಕಾನೂನಾತ್ಮಕವಾಗಿ ಯಾರಿಗೆ ಸಲ್ಲಬೇಕೋ ಅವರಿಗೆ ನೀಡಲಾಗುವುದು. ಇದಕ್ಕೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಸಾಮಾನ್ಯವಾಗಿ ಇದು ತೆರಿಗೆ ರಹಿತ ಸವಲತ್ತಾಗಿರುತ್ತದೆ. ಆದರೆ,  ಗ್ರಾಚ್ಯುಟಿಗಾಗಿ ನೀಡುವ ಮೊತ್ತವನ್ನು ಉದ್ಯೋಗಿಯು ಹೆಚ್ಚಿಸಿದಲ್ಲಿ ಆ ಹೆಚ್ಚಳವಾಗುವ ಹಣಕ್ಕೆ ತೆರಿಗೆ ಇರುತ್ತದೆ. ಉದ್ಯೋಗಿಯಿಂದ ಕಂಪನಿಗೆ ಯಾವುದಾದರೂ ಆರ್ಥಿಕ ನಷ್ಟವಾದರೆ ಆ ನಷ್ಟದ ಹಣವನ್ನು ಸಂಬಂಧಪಟ್ಟ ಉದ್ಯೋಗಿಯ  ಗ್ರಾಚ್ಯುಟಿ ಮೊತ್ತದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಕಂಪನಿಗೆ ಅಧಿಕಾರವಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com