ಸುಳ್ಳು ಜಾಹೀರಾತು ನೀಡಿ ಜನರನ್ನು ಹಾದಿ ತಪ್ಪಿಸಿದರೆ ಮಾಲೀಕರ ಜೊತೆ ಸೆಲೆಬ್ರಿಟಿಗಳಿಗೂ ದಂಡ, ಜೈಲು ಶಿಕ್ಷೆ!

ಕೆಲವೊಮ್ಮೆ ಸೆಲೆಬ್ರಿಟಿಗಳು, ಖ್ಯಾತ ವ್ಯಕ್ತಿಗಳು ಪ್ರಚಾರ ಮಾಡುವ ಜಾಹೀರಾತುಗಳು ಜನರನ್ನು ಹಾದಿತಪ್ಪಿಸುವಂತಿರುತ್ತವೆ. ಮುಗ್ಧ ಜನರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೆಲವೊಮ್ಮೆ ಸೆಲೆಬ್ರಿಟಿಗಳು, ಖ್ಯಾತ ವ್ಯಕ್ತಿಗಳು ಪ್ರಚಾರ ಮಾಡುವ ಜಾಹೀರಾತುಗಳು ಜನರನ್ನು ಹಾದಿತಪ್ಪಿಸುವಂತಿರುತ್ತವೆ. ಮುಗ್ಧ ಜನರು ಅದನ್ನು ನಂಬಿ ಖರೀದಿಸಿ ಅಥವಾ ಬಳಸಿ ಮೋಸಹೋದ ಸಂದರ್ಭಗಳು ಹಲವು ಬಾರಿ ಆಗಿದ್ದುಂಟು.
ಇಂತಹ ಗ್ರಾಹಕರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಹೊಸ ಗ್ರಾಹಕ ಸಂರಕ್ಷಣಾ ಮಸೂದೆ 2019 ಜಾರಿಗೆ ತರಲಿದೆ. ಇದರ ಪ್ರಕಾರ ಉತ್ಪನ್ನಗಳ ಬಗ್ಗೆ ತಪ್ಪು ರೀತಿಯಲ್ಲಿ ಪ್ರಚಾರ ಮಾಡುವ ಅಥವಾ ಹಾದಿ ತಪ್ಪಿಸುವ ರೀತಿಯಲ್ಲಿ ಜಾಹೀರಾತು ಮಾಡಿದರೆ ಉತ್ಪನ್ನದ ಉತ್ಪಾದಕರ ಜೊತೆಗೆ ಸೆಲೆಬ್ರಿಟಿಗಳ ಮೇಲೆಯೂ ದಂಡ ಹಾಕಲಾಗುತ್ತದೆ.
ಕೇಂದ್ರ ಸರ್ಕಾರ ನೂತನ ಗ್ರಾಹಕ ಸಂರಕ್ಷಣಾ ಮಸೂದೆಯನ್ನು ಮಂಡಿಸಿದ್ದು ರಾಜ್ಯಸಭೆಯಲ್ಲಿ ಕಳೆದ ಮಂಗಳವಾರ ಅನುಮೋದನೆಗೊಂಡಿದೆ. ಲೋಕಸಭೆಯಲ್ಲಿ ಈ ಹಿಂದೆಯೇ ಅನುಮೋದನೆಯಾಗಿತ್ತು. ಗ್ರಾಹಕ ರಕ್ಷಣಾ ಕಾಯ್ದೆ 1986ರ ಬದಲಿಗೆ ಗ್ರಾಹಕ ಸಂರಕ್ಷಣಾ ಮಸೂದೆ 2019 ಜಾರಿಗೆ ಬರಲಿದೆ.
ನೂತನ ಕಾಯ್ದೆಯಲ್ಲಿ ಏನಿದೆ?: ಈ ಮಸೂದೆಯಡಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸ್ಥಾಪಿಸಲಾಗುತ್ತದೆ. ಗ್ರಾಹಕರ ಹಕ್ಕುಗಳು ಉಲ್ಲಂಘನೆಯಾದಲ್ಲಿ ಅದನ್ನು ತಪಾಸಣೆ ಮಾಡಲು ಮಹಾ ನಿರ್ದೇಶಕರು ಇರುತ್ತಾರೆ, ಅವರು ಕಂಪೆನಿ ಮತ್ತು ಸೆಲೆಬ್ರಿಟಿಗಳ ಮೇಲೆ ದಂಡ ಹಾಕುತ್ತಾರೆ.
ತಪ್ಪು, ಸುಳ್ಳು ಅಥವಾ ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪ್ರಚಾರ ಮಾಡಿದ್ದಕ್ಕೆ ಉತ್ಪನ್ನವನ್ನು ತಯಾರು ಮಾಡಿದ ಸಂಸ್ಥೆ ಅಥವಾ ಕಂಪೆನಿಗಳು, ಜಾಹೀರಾತಿನಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳಿಗೆ 10 ಲಕ್ಷದವರೆಗೆ ದಂಡ ಹಾಕುವ ಅವಕಾಶ ಕಾಯ್ದೆಯ ಷರತ್ತು 21ರಡಿ ಇದೆ. ಅಲ್ಲದೆ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕೂಡ ಇದೆ.
ಈ ತಪ್ಪು ಪುನರಾವರ್ತನೆಯಾದರೆ 50 ಲಕ್ಷದವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿರುತ್ತದೆ. ಸೆಲೆಬ್ರಿಟಿಗಳು 1ರಿಂದ 3 ವರ್ಷದವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದಂತೆ ನಿರ್ಬಂಧ ವಿಧಿಸಲು ಸಾಧ್ಯವಾಗುತ್ತದೆ.
ಸುಳ್ಳು ಜಾಹೀರಾತು ಅಥವಾ ಪ್ರಚಾರ ಎಂದರೆ ತಪ್ಪು ಸಂದೇಶಗಳು, ಮೌಖಿಕ ಜಾಹೀರಾತು, ಪ್ರದರ್ಶನ ಅಥವಾ ಹೆಸರನ್ನು ಬಳಸುವುದು, ಸಹಿ ಒಳಗೊಂಡಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com