ಯೆಸ್ ಬ್ಯಾಂಕ್ ಬಿಕ್ಕಟ್ಟು: ಫೋನ್ ಪೇ ಸೇವೆ ಸ್ಥಗಿತ, ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಫೋನ್ ಪೇ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಫೋನ್ ಪೇ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಹೌದು.. ಖಾಸಗಿ ಕ್ಷೇತ್ರದ ಯೆಸ್​ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದು, ಅದರ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಬ್ಯಾಂಕ್ ನ ಆಡಳಿತ ನಿರ್ವಹಣೆಯನ್ನು ಹೊತ್ತುಕೊಂಡ ಬೆನ್ನಲ್ಲೇ ಇದೀಗ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ ಸ್ಥಗಿತಗೊಂಡಿದೆ. 

ಈ ಕುರಿತಂತೆ ಮಾಹಿತಿ ನೀಡಿರುವ ಫೋನ್ ಪೇ ಸಿಇಒ ಸಮೀರ್ ನಿಗಮ್ ಅವರು 'ಯೆಸ್ ಬ್ಯಾಂಕ್ ಜೊತೆ ಫೋನ್ ಪೇ ಹಣಕಾಸು ವ್ಯವಹಾರ ನಡೆಸುತ್ತಿತ್ತು. ಈಗ ವ್ಯವಹಾರಕ್ಕೆ ನಿರ್ಬಂಧ ಹೇರಿದ್ದರಿಂದ ಪೋನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಫೋನ್ ಪೇ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಕುರಿತು ಮಾಹಿತಿ ನೀಡಿದ್ದು ಶೀಘ್ರದಲ್ಲೇ ಮತ್ತೆ ವಾಪಸ್ ಆಗುತ್ತೇವೆ ಎಂದು ಟ್ವೀಟ್ ಮಾಡಿದೆ. 

‘ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಸೇವೆಗಳಿಗೆ ಮರಳಲು ಪ್ರಯತ್ನಿಸುತ್ತೇವೆ’ ಎಂದು ಫೋನ್‌ ಪೇ ಕಂಪನಿ ಹೇಳಿದೆ.  ಫೋನ್‌ ಪೇ ಕಂಪನಿಯು ಯೆಸ್ ಬ್ಯಾಂಕ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಹಣಕಾಸು ಬಿಕ್ಕಟ್ಟಿಗೆ ಸಿಲುಕಿಕೊಂಡಿರುವ ಯೆಸ್‌ ಬ್ಯಾಂಕ್‌ನ ಚಟುವಟಿಕೆಗಳ ಮೇಲೆ ಆರ್‌ಬಿಐ ನಿಷೇಧ ಹೇರಿದ ನಂತರ ಫೋನ್‌ ಪೇ ಸೇವೆಗಳು ಅಲಭ್ಯವಾಗಿವೆ.  ಈ ಬಗ್ಗೆ ಟ್ವೀಟ್‌ ಮಾಡಿರುವ ಫೋನ್‌ ಪೇ ಸಿಇಒ ಸಮೀರ್, ‘ಆತ್ಮೀಯ ಗ್ರಾಹಕರೇ, ದೀರ್ಘ ಅಡಚಣೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ (ಯೆಸ್‌ ಬ್ಯಾಂಕ್) ಅನ್ನು ಆರ್‌ಬಿಐ ನಿಷೇಧಿಸಿದೆ. ಮರಳಿ ಸೇವೆಗಳನ್ನು ಮುಂದುವರೆಸಲು ತಂಡವು ಬಿಡುವಿಲ್ಲದೇ ಕೆಲಸ ಮಾಡುತ್ತಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯನಿರ್ವಹಿಸುವ ಭರವಸೆ ಇದೆ. ನಿಮ್ಮ ತಾಳ್ಮೆಗೆ ಧನ್ಯವಾದ ಎಂದು ಹೇಳಿದ್ದಾರೆ. 

ವಾಲ್ ಮಾರ್ಟ್ ವಹಿವಾಟಿನ ಮೇಲೂ ಪರಿಣಾಮ
ಇನ್ನು ಫೋನ್ ಪೇ ಮಾಲೀಕತ್ವ ಹೊಂದಿರುವ ಅಮೆರಿಕ ಮೂಲದ ಜಾಗತಿಕ ಉದ್ಯಮ ದೈತ್ಯ ವಾಲ್ ಮಾರ್ಟ್ ನ ವಾಣಿಜ್ಯ ವಹಿವಾಟಿನ ಮೇಲೂ ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪರಿಣಾಮ ಬೀರಿದೆ ಎನ್ನಲಾಗಿದೆ. 

ಡಿಜಿಟಲ್ ವಹಿವಾಟು ದಿಢೀರ್ ಸ್ಥಗಿತ
ಇನ್ನು ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪರಿಣಾಮ ದೇಶದಲ್ಲಿ ಇತ್ತೀಚಗಷ್ಟೇ ಪ್ರಾಮುಖ್ಯತೆ ಪಡೆಯುತ್ತಿದ್ದ ಡಿಜಿಟಲ್ ವಹಿವಾಟುಗಳ ಮೇಲೆ ದಿಢೀರ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪ್ರಮುಖವಾಗಿ ಫೋನ್ ಪೇ ಸ್ಥಗಿತ ದೇಶದ ಪ್ರಮುಖ ದೈನಂದಿನ ಸೇವಾ ಸಂಸ್ಥೆಗಳಾದ ಕ್ಲಿಯರ್ ಟ್ರಿಪ್, ಸ್ವಿಗ್ಗಿ, ಏರ್ಟೆಲ್, ರೆಡ್ ಬಸ್, ಪಿವಿಆರ್ ಮತ್ತು ಉಡಾನ್ ನಂತಹ ಸಂಸ್ಥೆಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 

ಸಂಕಷ್ಟಕ್ಕೆ ಗುರಿಯಾಗಿದ್ದು ಯಾಕೆ?
ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. 2003-04 ರಲ್ಲಿ ಆರಂಭಗೊಂಡ ಈ ಬ್ಯಾಂಕ್ 10 ವರ್ಷಗಳಲ್ಲಿ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ರಾಣಾ ಕಪೂರ್ ಮಾಲೀಕತ್ವದ ಈ ಬ್ಯಾಂಕ್ ನಲ್ಲಿ ರಾಬೋ ಬ್ಯಾಂಕ್ ಸಹ ಪಾಲು ಹೊಂದಿತ್ತು. ರಾಣಾ ಕಪೂರ್ ಶೇ.26 ರಷ್ಟು ಷೇರು ಹೊಂದಿದ್ದರೆ, ರಾಬೋ ಬ್ಯಾಂಕ್ ಇಂಟರ್ನ್ಯಾಷನಲ್  ಶೇ.20 ರಷ್ಟು ಷೇರುಗಳನ್ನು ಹೊಂದಿತ್ತು. 

ಯೆಸ್​ ಬ್ಯಾಂಕ್​ನ ಚೀಫ್​ ಎಕ್ಸಿಕ್ಯೂಟಿವ್​ ಆಗಿ ರವ್ನೀತ್​ ಗಿಲ್​ ಅಧಿಕಾರಕ್ಕೆ ಬಂದ ಮೇಲೆ ಬ್ಯಾಂಕ್​ನ ಆಡಳಿತದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳು ಕಂಡುಬಂದಿದ್ದವು. ಅಲ್ಲದೆ ಬ್ಯಾಂಕ್​ನ ಸಾಲದ ಲೆಕ್ಕದಲ್ಲಿ ಬೃಹತ್​ ಮೊತ್ತ ಖೋತಾ ಆಗಿತ್ತು. ಈ ಪೈಕಿ ಸಾಲ ವಾಪಸ್​ ಆಗದ ಲೆಕ್ಕಗಳೇ ಜಾಸ್ತಿ ಇದ್ದವು. ಸುಮಾರು 1400 ಕೋಟಿಯಷ್ಟು ಬಂಡವಾಳ ಸಂಗ್ರಹಕ್ಕೆ ಹರಸಾಹಸ ಪಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆರ್​ಬಿಐ ಹಾಗೂ ಎಲ್​ಐಸಿ ಯೆಸ್​ ಬ್ಯಾಂಕ್​ನ ಷೇರುಗಳಲ್ಲಿ ಪಾಲು ಪಡೆಯಲಿದೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಈ ಸಂಬಂಧ ಎಸ್​ಬಿಐನ ಡಿಎಂಡಿ ಅಂಡ್​ ಸಿಎಫ್​ಒ ಆಗಿದ್ದ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ. ಇನ್ನೊಂದೆಡೆ ಆರ್ ಬಿಐ ಯೆಸ್ ​ಬ್ಯಾಂಕ್​ನಿಂದ ಗ್ರಾಹಕರು ಮಾಡುವ ವಿತ್ ಡ್ರಾ ಹಣದ ಮಿತಿಯನ್ನು 50 ಸಾವಿರಕ್ಕೆ ಸೀಮಿತ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com