ಮುಕೇಶ್ ಅಂಬಾನಿಯ ಜಿಯೊ ಜೊತೆ ಕೈಜೋಡಿಸಿದ ಫೇಸ್ ಬುಕ್: ಈ ಬಗ್ಗೆ ಮಾರ್ಕ್ ಝುಕರ್ ಬರ್ಗ್ ಹೇಳಿದ್ದೇನು?

ಸೋಷಿಯಲ್ ಮೀಡಿಯಾ ಕಂಪೆನಿ ಫೇಸ್ ಬುಕ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಜೊತೆ ಕೈಜೋಡಿಸಿ ಜಿಯೊಮಾರ್ಟ್ ನಲ್ಲಿ ಹೂಡಿಕೆ ಮಾಡಿ ವಾಣಿಜ್ಯ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ.
ಮಾರ್ಕ್ ಝಕರ್ ಬರ್ಗ್
ಮಾರ್ಕ್ ಝಕರ್ ಬರ್ಗ್

ನವದೆಹಲಿ: ಸೋಷಿಯಲ್ ಮೀಡಿಯಾ ಕಂಪೆನಿ ಫೇಸ್ ಬುಕ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಜೊತೆ ಕೈಜೋಡಿಸಿ ಜಿಯೊಮಾರ್ಟ್ ನಲ್ಲಿ ಹೂಡಿಕೆ ಮಾಡಿ ವಾಣಿಜ್ಯ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ  ನೋಡೋಣ ಬನ್ನಿ:

ಭಾರತ ಇಂದು ಪ್ರಮುಖ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ಫೇಸ್ ಬುಕ್ ಬದ್ಧವಾಗಿದೆ. ಇದಕ್ಕಾಗಿ ಮುಕೇಶ್ ಅಂಬಾನಿ ಒಡೆತನದ ಜಿಯೊ ಕಂಪೆನಿ ಜೊತೆ ಹಣಕಾಸು ಹೂಡಿಕೆ ಮಾಡುತ್ತಿದ್ದು, ಭಾರತದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ನೀಡಲು ಕೆಲವು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಲಿದ್ದೇವೆ.

ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಿಗೆ ಭಾರತದಲ್ಲಿ ಅತಿದೊಡ್ಡ ಬಳಕೆ ಸಮುದಾಯವಿದೆ. ಇಲ್ಲಿ ಸಾಕಷ್ಟು ಪ್ರತಿಭಾನ್ವಿತ ಉದ್ಯಮಶೀಲರಿದ್ದಾರೆ. ಭಾರತ ಅತಿದೊಡ್ಡ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದ್ದು ಜಿಯೊದಂತಹ ಸಂಸ್ಥೆಗಳು ಲಕ್ಷಾಂತರ ಭಾರತೀಯರು, ಸಣ್ಣ ಉದ್ಯಮಿಗಳನ್ನು ಆನ್ ಲೈನ್ ವೇದಿಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಭಾರತದಲ್ಲಿ 60 ಮಿಲಿಯನ್ ಗಿಂತಲೂ ಹೆಚ್ಚಿನ ಜನರು ಸಣ್ಣ ಉದ್ಯಮಗಳನ್ನು ನಡೆಸುವವರಿದ್ದಾರೆ. ಅವರಲ್ಲಿ ಬಹುತೇಕರು ಡಿಜಿಟಲ್ ಪಾವತಿ ವಿಧಾನವಾದ ಪೇಟಿಎಂ, ಗೂಗಲ್ ಪೇಗಳನ್ನು ಬಳಸುತ್ತಾರೆ. ಇದರ ಮೇಲೆಯೇ ಪ್ರಮುಖ ಆರ್ಥಿಕತೆ ಇಂದು ನಿಂತಿದ್ದು ಉದ್ಯೋಗಗಳಿಗೆ ಹಲವು ಲಕ್ಷಾಂತರ ಜನರು ಇವುಗಳನ್ನು ಅವಲಂಬಿಸಿದ್ದಾರೆ.

ಇಂದು ಜಗತ್ತಿನ ಸುತ್ತ ಮನುಷ್ಯನ ಚಟುವಟಿಕೆಗಳು, ವಹಿವಾಟುಗಳು ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದು, ಇಂತಹ ಸಣ್ಣಪುಟ್ಟ ಉದ್ಯಮಶೀಲರು ತಮ್ಮ ಗ್ರಾಹಕರ ಜೊತೆ ವ್ಯವಹರಿಸಲು ಮತ್ತು ಉದ್ಯಮ ಬೆಳೆಸಲು ಇಂತಹ ಡಿಜಿಟಲ್ ಪಾವತಿ ವಿಧಾನ ಸಾಧನಗಳನ್ನು ಅವಲಂಬಿಸಿಕೊಂಡಿದ್ದಾರೆ. ಇದಕ್ಕಾಗಿ ಜಿಯೊ ಜೊತೆ ಸೇರಿ ಗ್ರಾಹಕರು ಮತ್ತು ಉದ್ಯಮಶೀಲರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದ್ದೇವೆ ಎಂದು ಝುಕರ್ ಬರ್ಗ್ ತಿಳಿಸಿದ್ದಾರೆ.

ವಾಟ್ಸಾಪ್ ಡಿಜಿಟಲ್ ಪಾವತಿ ಸೇವೆಗೆ ಸರ್ಕಾರ ಅನುಮೋದನೆ ನೀಡಿದ ನಂತರ ಫೇಸ್ ಬುಕ್ ಮತ್ತು ಜಿಯೊ ನಡುವೆ ಈ ಪಾಲುದಾರಿಕೆ ಒಪ್ಪಂದ ನಡೆದಿದೆ. ಈ ಮೂಲಕ ಫೇಸ್ ಬುಕ್ ಇದೀಗ ಭಾರತದಲ್ಲಿ ಪೇಟಿಎಂ, ಗೂಗಲ್ ಪೇ ಜೊತೆ ಸ್ಪರ್ಧೆಯೊಡ್ಡಲಿದ್ದು 2023ಕ್ಕೆ 135.2 ಶತಕೋಟಿ ಮೌಲ್ಯದ ಮಾರುಕಟ್ಟೆ ಸೃಷ್ಟಿಸುವ ಗುರಿಯನ್ನು ಹಾಕಿಕೊಂಡಿದೆ ಎಂದು ವರದಿಯೊಂದು ಹೇಳುತ್ತದೆ.

ವಾಟ್ಸಾಪ್ ಗೆ ಭಾರತದಲ್ಲಿ 400 ಮಿಲಿಯನ್ ಬಳಕೆದಾರರಿದ್ದು ಶೇಕಡಾ 80ರಷ್ಟು ಸ್ಮಾರ್ಟ್ ಫೋನ್ ಬಳಕೆದಾರರನ್ನು ತಲುಪಿದೆ.

ಫೇಸ್ ಬುಕ್ ಜಿಯೊ ಜೊತೆ ಕೈಜೋಡಿಸಿ 5.7 ಶತಕೋಟಿ ಡಾಲರ್ (43 ಸಾವಿರದ 574 ಕೋಟಿ ರೂಪಾಯಿ)ಗಳಷ್ಟು ಹೂಡಿಕೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com