2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಗಾ, ಶೀಘ್ರ ಸಮಸ್ಯೆ ಪರಿಹಾರಕ್ಕೆ ಸೂಚನೆ: ನಿರ್ಮಲಾ ಸೀತಾರಾಮನ್

2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಗಾ ಇರಿಸಿತ್ತು. ಬ್ಯಾಂಕ್ ನ ಕ್ರಮವಿಲ್ಲದ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ನವದೆಹಲಿ: 2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಗಾ ಇರಿಸಿತ್ತು. ಬ್ಯಾಂಕ್ ನ ಕ್ರಮವಿಲ್ಲದ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ದೆಹಲಿಯಲ್ಲಿ ಸುದ್ದಿಗೋಷ್ಛಿ ನಡೆಸಿದರು. ಈ ವೇಳೆ ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, 2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಗಾ ಇರಿಸಿತ್ತು. ಬ್ಯಾಂಕ್ ನ ಕ್ರಮವಿಲ್ಲದ ವಹಿವಾಟಿನ ಕುರಿತು ದಿನ ನಿತ್ಯ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೆ ಈ ಸಂಬಂಧ ಬ್ಯಾಂಕ್ ನ ಆಡಳಿತ ಮಂಡಳಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಆದರೆ ಇದಕ್ಕೆ ಬ್ಯಾಂಕ್ ನ ಆಡಳಿತ ಮಂಡಳಿಯಿಂದ ಸೂಕ್ತ ಉತ್ತರ ಬಂದಿರಲಿಲ್ಲ ಎಂದು ನಿರ್ಮಲಾ ಹೇಳಿದ್ದಾರೆ.

ಅಂತೆಯೇ ಬ್ಯಾಂಕ್ ನ ವಹಿವಾಟು ಅಪಾಯಕಾರಿಯಾಗಿದೆ ಎಂದು ಆರ್ ಬಿಐ ಮನಗಂಡಿತ್ತು. ಅಲ್ಲದೆ ಬ್ಯಾಂಕ್ ನ ಸಾಲ ನೀತಿ ಮತ್ತು ಅವೈಜ್ಞಾನಿಕ ನಿರ್ಧಾರಗಳನ್ನು ಗಮನಿಸಿದ್ದ ಆರ್ ಬಿಐ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಬದಲಿಸಲು ನಿರ್ಧರಿಸಿತ್ತು. ಇದೀಗ ಬ್ಯಾಂಕ್ ನ ಆಡಳಿತ ಮಂಡಳಿಯನ್ನು ವಜಾ ಮಾಡಿ ಬ್ಯಾಂಕ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಶೀಘ್ರದಲ್ಲೇ ಬ್ಯಾಂಕ್ ನ ಆರ್ಥಿಕ ಬಿಕ್ಕಟ್ಟಿಗೆ ಯಾರು ಕಾರಣ, ಯಾರ ತಪ್ಪಿನಿಂದ ಬ್ಯಾಂಕ್ ವಹಿವಾಟು ಹಾದಿ ತಪ್ಪಿತು ಎಂಬಿತ್ಯಾದಿ ಅಂಶಗಳು ಬೆಳಕಿಗೆ ಬರಲಿವೆ. ಈ ಸಂಬಂಧ ಆರ್ ಬಿಐಗೆ ನಿರ್ದೇಶನ ಕೂಡ ನೀಡಲಾಗಿದೆ ಎಂದು ನಿರ್ಮಲಾ ಹೇಳಿದರು.

ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ವೈಯುಕ್ತಿಕ ಜವಾಬ್ದಾರಿಗಳ ಆರ್ ಬಿಐ ತನಿಖೆ
ಇದೇ ವೇಳೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಿಳ ವೈಯುಕ್ತಿಕ ಜವಾಬ್ದಾರಿಗಳು ಮತ್ತು ಹೊಣೆಗಾರಿಕೆಗಳ ಕುರಿತು ಆರ್ ಬಿಐ ತನಿಖೆ ಮಾಡಿ ವರದಿ ನೀಡಲಿದೆ ಎಂದು ನಿರ್ಮಲಾ ಹೇಳಿದರು. ಅಲ್ಲದೆ ಇನ್ನು 30 ದಿನಗಳೊಳಗಾಗಿ ಯೆಸ್ ಬ್ಯಾಂಕ್ ನ ಆಡಳಿತ ಮಂಡಳಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ದೇಶದ ದೊಡ್ಡ ಸರ್ಕಾರಿ ಸ್ಯಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ಯೆಸ್  ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲು ಸಿದ್ಧವಿದ್ದು, ಯೆಸ್ ಬ್ಯಾಂಕ್ ನ ಸಿಬ್ಬಂದಿಗಳಿಗೆ ಮುಂದಿನ ಒಂದು ವರ್ಷಗಳ ಕಾಲ ನಿಗದಿತ ಸಮಯಕ್ಕೆ ಸರಿಯಾಗಿ ಅವರ ವೇತನ ಕೂಡ ಪಾವತಿಯಾಗಲಿದೆ ಎಂದು ಹೇಳಿದರು.

ಬ್ಯಾಂಕ್‌ಗಳ ವಿಲೀನ, ಏಪ್ರಿಲ್‌ 1ರಿಂದ ಕಾರ್ಯಾರಂಭ
ಇನ್ನು ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‌ಗಳು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಂಡು ಏಪ್ರಿಲ್‌ 1ರಿಂದ ಕಾರ್ಯಾರಂಭ ಮಾಡಲಿವೆ. ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈಗಾಗಲೇ ಈ ಕುರಿತು ನಿರ್ಧಾರ ತೆಗೆದುಕೊಂಡಿವೆ.ನಿಯಮಗಳ ಉಲ್ಲಂಘನೆಯನ್ನು ಅಪರಾಧಮುಕ್ತಗೊಳಿಸುವುದೂ ಸೇರಿದಂತೆ ಕಂಪನಿ ಕಾಯ್ದೆಗೆ ತಂದಿರುವ ಹಲವಾರು ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. 2013ರ ಕಂಪನಿ ಕಾಯ್ದೆಗೆ ತಂದಿರುವ 72 ಬದಲಾವಣೆಗಳಿಗೆ ಸಮ್ಮತಿ ದೊರೆತಿದೆ. ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸುವ ಅಪರಾಧಗಳಲ್ಲಿನ ದಂಡದ ಪ್ರಮಾಣ ತಗ್ಗಿಸಲಾಗಿದೆ. ಅನೇಕ ಸೆಕ್ಷನ್‌ಗಳಡಿ ಇದ್ದ ಜೈಲು ಶಿಕ್ಷೆಯ ಪ್ರಸ್ತಾವ ಕೈಬಿಡಲಾಗಿದೆ. ಈ ಎಲ್ಲ ಕ್ರಮಗಳು ಕಂಪನಿಗಳು ಸುಲಲಿತವಾಗಿ ವಹಿವಾಟು ನಡೆಸಲು ಹೆಚ್ಚು ಅನುಕೂಲತೆ ಕಲ್ಪಿಸಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com