ಮಾಸ್ಟರ್ 'ಸ್ಟ್ರೋಕ್'..; ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರ ನಿಷೇಧಿಸಿದ ಆರ್ ಬಿಐ!

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರನ್ನು ನಿಷೇಧಿಸಲಾಗಿದೆ.
ಮಾಸ್ಟರ್ ಕಾರ್ಡ್
ಮಾಸ್ಟರ್ ಕಾರ್ಡ್

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರನ್ನು ನಿಷೇಧಿಸಲಾಗಿದೆ.

ಈ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದ್ದು, 'ಪಾವತಿ ವ್ಯವಸ್ಥೆ ದತ್ತಾಂಶ ಸಂಗ್ರಹಣೆಯ ನಿರ್ದೇಶನಗಳನ್ನು ಪಾಲಿಸದ ಹಿನ್ನಲೆಯಲ್ಲಿ ಮಾಸ್ಟರ್ ಕಾರ್ಡ್ (ಡೆಬಿಟ್, ಕ್ರೆಡಿಟ್ ಮತ್ತು ಪ್ರೀ ಪೇಯ್ಡ್) ಹೊಸ ಗ್ರಾಹಕರನ್ನು ಹೊಂದುವುದರಿಂದ ನಿಷೇಧಿಸಲಾಗಿದೆ. ಇದೇ ಜುಲೈ 22ರಿಂದ ಈ ನಿಷೇಧ  ಅನ್ವಯವಾಗಲಿದ್ದು, ಈ ನಿಷೇಧ ಹಾಲಿ ಗ್ರಾಹಕರಿಗೆ ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. 

ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಎಂಬ ಮೂರು ವಿಭಾಗಗಳ ಅಡಿಯಲ್ಲಿ ದೇಶೀಯ ಗ್ರಾಹಕರನ್ನು ಸೇರಿಸಲು ಮಾಸ್ಟರ್ ಕಾರ್ಡ್ ಗೆ ನಿರ್ಬಂಧ ಹೇರಲಾಗಿದೆ. ಆರ್‌ಬಿಐನ ನಿರ್ದೇಶನಗಳಿಗೆ ಅನುಸಾರವಾಗಿ ಕಂಪನಿಯು ಎಲ್ಲಾ ಕಾರ್ಡ್ ನೀಡುವ ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರರಿಗೆ  ತಿಳಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಮಾಸ್ಟರ್‌ ಕಾರ್ಡ್‌ಗೆ ಸಾಕಷ್ಟು ಸಮಯ ಮತ್ತು ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದರೂ, "ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆ" ಕುರಿತ ನಿರ್ದೇಶನಗಳನ್ನು ಪಾಲನೆ ಮಾಡಿಲ್ಲ ಎಂದು ಆರ್ ಬಿಐ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. 

ಏಪ್ರಿಲ್ 2018 ರಲ್ಲಿ ಹೊರಡಿಸಲಾದ ಸುತ್ತೋಲೆಯ ಮೂಲಕ, ಆರು ತಿಂಗಳ ಅವಧಿಯಲ್ಲಿ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಇತರ ಡೇಟಾವನ್ನು (ಇತರ ಅವಶ್ಯಕತೆಗಳ ನಡುವೆ ಎಂಡ್ ಟು ಎಂಡ್ ವಹಿವಾಟಿನ ವಿವರಗಳಂತೆ) ಖಚಿತಪಡಿಸಿಕೊಳ್ಳಲು ಆರ್ಬಿಐ ಎಲ್ಲಾ ಪಾವತಿ ವ್ಯವಸ್ಥೆ  ಪೂರೈಕೆದಾರರನ್ನು  ಕೇಳಿತ್ತು. 

ಇನ್ನು ದೇಶದ ಪಾವತಿ ವ್ಯವಸ್ಥೆಯಲ್ಲಿ ಅನಭಿಶಕ್ತದೊರೆಯಾಗಿದ್ದ ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಭಾರತದ ರೂಪೇ ಕಾರ್ಡ್ ವ್ಯಾಪಕ ಪೈಪೋಟಿ ನೀಡುತ್ತಿದೆ.  ಈ ಹಿಂದೆ ಪ್ರಧಾನಿ ಮೋದಿ ದೇಶೀಯ ರೂಪೇ ಕಾರ್ಡ್ ವ್ಯವಸ್ಥೆ ಜಾರಿಗೆ ತಂದ ಬಳಿಕ ಮಾಸ್ಟರ್ ಕಾರ್ಡ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮಾಸ್ಟರ್ ಕಾರ್ಡ್ ಮಾರುಕಟ್ಟೆಯನ್ನು ರೂಪೇ ಆವರಿಸಿದ್ದು, ಇದು ಮಾಸ್ಟರ್ ಕಾರ್ಡ್ ಗೆ ನುಂಗಲಾಗರದ ತುತ್ತಾಗಿತ್ತು. ಇದೀಗ ಗಾಯದ ಮೇಲೆ ಬರೆ ಎಂಬಂತೆ ಆರ್ ಬಿಐ ಈ ನೂತನ ನಿಷೇಧ ಹೇರಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com