ಭಾರತೀಯ ಉತ್ಪಾದನಾ ಉದ್ಯಮದ ವೇಗಕ್ಕೆ ಕೌಶಲ್ಯದ ಕೊರತೆಯಿಂದ ಅಡ್ಡಿ

ಇಂದಿಗೂ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಕೊರತೆ ಯಾಕಿದೆ ಎಂಬ ಪ್ರಶ್ನೆಗೆ ಇನ್ನೂ ಒಂದು ಸರಳವಾದ ಉತ್ತರವೂ ಲಭ್ಯವಾಗಿಲ್ಲ. ಅದರ ಬದಲಿಗೆ, ಈ ಕೊರತೆ ಹಲವು ಸಮಸ್ಯೆಗಳು ಸೇರಿ ಉಂಟಾದ ದೊಡ್ಡ ಸಮಸ್ಯೆಯಾಗಿದೆ ಎನ್ನಬಹುದು.
ಭಾರತೀಯ ಉತ್ಪಾದನಾ ಉದ್ಯಮದ ವೇಗಕ್ಕೆ ಕೌಶಲ್ಯದ ಕೊರತೆಯಿಂದ ಅಡ್ಡಿ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಯಾವುದೇ ಆರ್ಥಿಕತೆ ಅಭಿವೃದ್ಧಿ ಹೊಂದಬೇಕಾದರೂ, ಅಲ್ಲಿನ ಉತ್ಪಾದನಾ ಉದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಪ್ರಸ್ತುತ ಜಾಗತಿಕ ಆರ್ಥಿಕತೆ ಸುಧಾರಿಸಿರುವುದರಿಂದ ಮತ್ತು ಗ್ರಾಹಕರ ಕೊಳ್ಳುವಿಕೆ ಕೋವಿಡ್-19 ಪ್ಯಾನ್‌ಡೆಮಿಕ್ ಮೊದಲಿನ ಸ್ಥಿತಿಗೆ ತಲುಪಿರುವುದರಿಂದ, ಜಗತ್ತಿನಾದ್ಯಂತ ಉತ್ಪಾದನಾ ಉದ್ಯಮಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿವೆ. ಆದರೆ ಇನ್ನೂ ಸರಬರಾಜು ವ್ಯವಸ್ಥೆಯಲ್ಲಿನ ಅಡೆತಡೆಗಳು ಮತ್ತು ಜಾಗತಿಕ ಕೌಶಲ್ಯದ ಕೊರತೆಗಳು ಪೂರ್ಣ ಪ್ರಮಾಣದ ಚೇತರಿಕೆಗೆ ಅಡ್ಡಿಯಾಗಿವೆ.

ಉತ್ಪಾದನಾ ಉದ್ಯಮಗಳು ಪ್ಯಾನ್‌ಡೆಮಿಕ್ ಆರಂಭವಾಗುವ ಮೊದಲಿನಿಂದಲೂ ಕಾರ್ಮಿಕರ ಮತ್ತು ಕೌಶಲ್ಯದ ಕೊರತೆಯನ್ನು ತೀವ್ರವಾಗಿ ಅನುಭವಿಸುತ್ತಾ ಬಂದಿವೆ. 2018ರ ಸಮೀಕ್ಷೆಯೊಂದರ ಪ್ರಕಾರ, 2030ರ ವೇಳೆಗೆ ಜಾಗತಿಕವಾಗಿ 8 ಮಿಲಿಯನ್ ಉದ್ಯೋಗಗಳು ಉತ್ಪಾದನಾ ಕ್ಷೇತ್ರದಲ್ಲಿ ಖಾಲಿಯಾಗಿರಲಿವೆ. ಆದರೆ ಪ್ಯಾನ್‌ಡೆಮಿಕ್ ಬಳಿಕವಂತೂ ಉದ್ಯಮಗಳಿಗೆ ಅವರ ಉತ್ಪಾದನಾ ಅಗತ್ಯಗಳಿಗೆ ತಕ್ಕಂತೆ ನುರಿತ ಕಾರ್ಮಿಕರನ್ನು ಆರಿಸಿಕೊಳ್ಳುವುದು ಮತ್ತು ಕಾರ್ಮಿಕರನ್ನು ಉಳಿಸಿಕೊಳ್ಳುವುದು ಇನ್ನಷ್ಟು ಕಷ್ಟಕರವಾಗಿದೆ.

ಇಂದಿಗೂ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಕೊರತೆ ಯಾಕಿದೆ ಎಂಬ ಪ್ರಶ್ನೆಗೆ ಇನ್ನೂ ಒಂದು ಸರಳವಾದ ಉತ್ತರವೂ ಲಭ್ಯವಾಗಿಲ್ಲ. ಅದರ ಬದಲಿಗೆ, ಈ ಕೊರತೆ ಹಲವು ಸಮಸ್ಯೆಗಳು ಸೇರಿ ಉಂಟಾದ ದೊಡ್ಡ ಸಮಸ್ಯೆಯಾಗಿದೆ ಎನ್ನಬಹುದು. ಕೆಲವು ಸಮಸ್ಯೆಗಳು ಪ್ಯಾನ್‌ಡೆಮಿಕ್ ಬಳಿಕ ಉಲ್ಬಣಗೊಂಡರೆ, ಇನ್ನುಳಿದ ತೊಂದರೆಗಳು ಉದ್ಯಮವನ್ನು ಹಲವು ವರ್ಷಗಳಿಂದ ಕಾಡುತ್ತಿದ್ದವು. ಸತತವಾದ ಕಾರ್ಮಿಕರ ಕೊರತೆ ಮತ್ತು ಇರುವ ಕಾರ್ಮಿಕರಲ್ಲಿ ಕೌಶಲ್ಯದ ಕೊರತೆ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಕುಂಠಿತಗೊಳಿಸಿ, ಆರ್ಥಿಕ ಅಭಿವೃದ್ಧಿಯನ್ನು ತಡೆಯಬಲ್ಲವು.

ಉದ್ಯಮಗಳ ಸ್ವಯಂಚಾಲನೆ, ಯಾಂತ್ರೀಕೃತ ಉತ್ಪಾದನಾ ಕಾರ್ಯಗಳು ಹಾಗೂ ಯಂತ್ರಗಳು ಇಂಡಸ್ಟ್ರಿ 4.0 ಮೂಲಕ ಸಾಕಷ್ಟು ಬದಲಾವಣೆಗಳನ್ನೂ ಕಂಡಿವೆ. ಇಂತಹ ಸಂಕೀರ್ಣ ಉಪಕರಣಗಳನ್ನು ಬಳಸಲು ಕೌಶಲ್ಯ ಹೊಂದಿರುವ ಉದ್ಯೋಗಿಗಳು ಬೇಕಾಗುತ್ತಾರೆ. ಇಂತಹಾ ಕೌಶಲ್ಯವನ್ನು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಸಲು ಸಾಧ್ಯವಿಲ್ಲ. ನೂತನವಾಗಿ ಉದ್ಯೋಗ ಪಡೆದುಕೊಂಡವರು ಕೆಲಸದಲ್ಲಿ ಪರಿಣತರಾಗಿ, ಸಂಪೂರ್ಣ ಕೊಡುಗೆ ನೀಡಲು ಕನಿಷ್ಠ ಆರು ತಿಂಗಳಿಗೂ ಹೆಚ್ಚಿನ ಕಾಲಾವಧಿ ಬೇಕಾಗುತ್ತದೆ.

ದುರದೃಷ್ಟವಶಾತ್, ಈ ಉದ್ಯೋಗಗಳು ಏನನ್ನು ಅಪೇಕ್ಷಿಸುತ್ತವೆ ಎಂಬುದನ್ನು ಇನ್ನೂ ಉದ್ಯೋಗಿಗಳನ್ನು ಪೂರೈಸುವ ಮಾರುಕಟ್ಟೆ ಅರ್ಥ ಮಾಡಿಕೊಂಡಿರುವಂತೆ ಕಾಣುತ್ತಿಲ್ಲ. ಇಂದು ಉದ್ಯೋಗಗಳಿಗೆ ಕೌಶಲ್ಯದ ಅಗತ್ಯತೆ ಅತ್ಯಂತ ಹೆಚ್ಚಾಗಿದ್ದು, ಕೇವಲ ದೈಹಿಕ ಶಕ್ತಿ ಸಾಕಾಗುವುದಿಲ್ಲ.

ಸಾಕಷ್ಟು ಜನರು ಇಂದಿಗೂ ಉತ್ಪಾದನಾ ಉದ್ಯಮದಲ್ಲಿನ ಕೆಲಸ ಎಂದರೆ ಕೊಳಕು, ಕೌಶಲ್ಯ ರಹಿತ ಉದ್ಯೋಗ ಎಂದೇ ಭಾವಿಸುತ್ತಾರೆ. ಇನ್ನಷ್ಟು ಜನರಿಗೆ ಈ ಉದ್ಯಮದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಇಂದು ಉದ್ಯಮ ಮತ್ತು ಇಂಜಿನಿಯರಿಂಗ್ ಕೆಲಸದ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗಿದ್ದರೂ, ಅಗತ್ಯ ಇರುವಷ್ಟು ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿಲ್ಲ. ಇನ್ನೂ ಹಲವರು ಅವರ ಓದು ಮತ್ತು ಕೆಲಸದ ಅಗತ್ಯತೆಗಳ ಮಧ್ಯ ಯಾವ ಸಂಬಂಧವೂ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿದ್ದಾರೆ. ಇಂಟರ್ನ್‌ಶಿಪ್‌ಗಳು ಮತ್ತು ಕೆಲಸದ ಸ್ಥಳದಲ್ಲೇ ತರಬೇತಿಯ ಕಾರ್ಯಕ್ರಮಗಳು ಹೆಚ್ಚು ವೆಚ್ಚದಾಯಕವಾಗಿವೆ. ಹೆಚ್ಚಿನ ಕೌಶಲ್ಯ ಹೊಂದಿರುವ ಅನುಭವಿಗಳು ಕೆಲಸದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಉತ್ಪಾದನಾ ಉದ್ಯಮ ಸತತವಾಗಿ ಇತರ ಉದ್ದಿಮೆಗಳೊಂದಿಗೆ ನುರಿತ ಕಾರ್ಮಿಕರಿಗಾಗಿ ಅಪಾರ ಸ್ಪರ್ಧೆ ಎದುರಿಸುತ್ತಿದೆ.

ತಂತ್ರಜ್ಞಾನ, ಆರೋಗ್ಯ ಸೇವೆ, ಸಂವಹನ, ಶಕ್ತಿ ಹಾಗೂ ಹಣಕಾಸು ಸೇವೆಗಳಿಗೆ ಹೋಲಿಸಿದರೆ ಉತ್ಪಾದನಾ ಉದ್ಯಮವನ್ನು ವೃತ್ತಿ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ.

ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದರೂ, ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇರುವುದರಿಂದ ಇರುವ ಕಾರ್ಮಿಕರನ್ನು ಉಳಿಸಿಕೊಳ್ಳುವುದೇ ಈಗ ಪ್ರಥಮ ಆದ್ಯತೆಯಾಗಿ ಮಾರ್ಪಟ್ಟಿದೆ.

ಕೌಶಲ್ಯದ ಕೊರತೆ ಎನ್ನುವುದು ಅವಾಸ್ತವವೇ?

ಕೆಲವು ಮೂಲಭೂತ ಕೌಶಲ್ಯಗಳಿಗೆ ಅಪಾರ ಬೇಡಿಕೆ ಇದ್ದರೂ, ಉತ್ಪಾದನಾ ಕ್ಷೇತ್ರದಲ್ಲಿ ಅರ್ಧಕ್ಕಿಂತ ಕಡಿಮೆ ಉದ್ಯೋಗಿಗಳಿಗೆ ಓದುವ ಕೌಶಲ್ಯ, (ಕೈಪಿಡಿಗಳನ್ನು ಓದುವ ಸಾಮರ್ಥ್ಯ), ಮೂಲಭೂತ ಬರವಣಿಗೆಯ ಕೌಶಲ್ಯ, (ಸಣ್ಣ ಪುಟ್ಟ ಟಿಪ್ಪಣಿಗಳ ಬರವಣಿಗೆ), ಕನಿಷ್ಠ ಗಣಿತದ ಕೌಶಲ್ಯ (ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಭಿನ್ನರಾಶಿ) ಇತ್ಯಾದಿಗಳಲ್ಲಿ ಪೂರ್ಣ ಸಾಮರ್ಥ್ಯದ ಅಗತ್ಯವಿರುತ್ತದೆ.

ಕೇವಲ ಸಣ್ಣ ಪ್ರಮಾಣದ ಉತ್ಪಾದನಾ ಸಂಸ್ಥೆಗಳು ಮಾತ್ರ ಅವುಗಳಿಗೆ ಅಗತ್ಯವಿರುವ ಕಾರ್ಮಿಕರನ್ನು ಗಳಿಸಲು ಕಷ್ಟವಾಗುತ್ತಿದೆ ಎನ್ನುತ್ತಿವೆ. ಬಹುತೇಕ ಸಂಸ್ಥೆಗಳಲ್ಲಿ ಉದ್ಯೋಗಗಳೇ ಖಾಲಿ ಇಲ್ಲ ಮತ್ತು ದೀರ್ಘಾವಧಿಯ ಉದ್ಯೋಗಗಳು ಮೂರು ತಿಂಗಳಿಂದ ಹೆಚ್ಚು ಕಾಲ ಖಾಲಿ ಇರುವುದಿಲ್ಲ. ಆದರೆ ಕಾರ್ಮಿಕರಲ್ಲಿ ಕೌಶಲ್ಯದ ಕೊರತೆ ಇರುವುದರಿಂದ ಆರ್ಥಿಕ ಯಶಸ್ಸು ಗಳಿಸಲು ತೊಂದರೆ ಎದುರಾಗುತ್ತಿದೆಯೇ ಎಂದಾಗ ಕಾರ್ಖಾನೆಗಳ ಮ್ಯಾನೇಜರುಗಳು ದೂರತೊಡಗುತ್ತಾರೆ. ಉತ್ಪಾದನಾ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಲು ಬೇರೆ ಯಾವುದೇ ಕಾರಣಗಳಿಂದಲೂ ಹೆಚ್ಚಾಗಿ ಅಸಮರ್ಪಕವಾದ ಬೇಡಿಕೆಯೇ ಮೂಲ ಕಾರಣ ಎನ್ನಬಹುದು.

ಉತ್ಪಾದನಾ ಉದ್ಯಮ ಒಂದು ಬಂಡವಾಳದ ಮೇಲೆ ತೀವ್ರವಾಗಿ ಆಧಾರಿತವಾದ ಉದ್ಯಮ. ಇದು ತಂತ್ರಜ್ಞಾನದ ಆಘಾತವನ್ನು ಎದುರಿಸಲು ಸಮರ್ಥವಾಗಿಲ್ಲ. ಉತ್ಪಾದನಾ ಕ್ಷೇತ್ರವು ಇದರ ಪರಿಣಾಮಗಳನ್ನು ನೋಡಲು ಒಂದು ತಾರ್ಕಿಕ ಕ್ಷೇತ್ರವಾಗಿದೆ. ಯಾಕೆಂದರೆ ಕೌಶಲ್ಯದ ಬೇಡಿಕೆ ಮತ್ತು ಪೂರೈಕೆಯಲ್ಲಿರುವ ಅಸಮರ್ಪಕತೆಗೆ ತಾಂತ್ರಿಕ ಆಘಾತಗಳೂ ಕಾರಣವಾಗಿರಬಹುದು ಎಂದು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಕಂಪ್ಯೂಟರ್ ಮತ್ತು ಗಣಿತದಂತಹ ತಾಂತ್ರಿಕ ಕೌಶಲ್ಯಗಳು ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಎಂದು ಭಾವಿಸಲಾಗುತ್ತದೆ. ಸಾಮಾನ್ಯವಾಗಿ ಈ ಕೌಶಲ್ಯಗಳ ಕುರಿತೇ ಚರ್ಚೆಗಳು ನಡೆಯುವುದರಿಂದ ಉತ್ಪಾದನಾ ಕ್ಷೇತ್ರವು ದೂರುಗಳಿಗೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ.

ಕೌಶಲ್ಯದ ಅಗತ್ಯತೆಯ ಕುರಿತ ಹೆಚ್ಚಿನ ಚರ್ಚೆಗಳು ಶಿಕ್ಷಣ ಪಡೆಯುವ ಕುರಿತೇ ಕೇಂದ್ರಿತವಾಗಿರುತ್ತವೆ. ಶಿಕ್ಷಣವೇ ಕೌಶಲ್ಯಕ್ಕೆ ಸಮವಾದದ್ದು ಎಂಬ ಭಾವನೆಗಳಿವೆ. ಆದರೆ ಸಂಕೀರ್ಣ ಕೌಶಲ್ಯಗಳು ಶಿಕ್ಷಣದಿಂದಲೇ ಲಭಿಸುತ್ತವೆ ಎನ್ನಲೂ ಸಾಧ್ಯವಿಲ್ಲ. ಅದಲ್ಲದೆ ಶಿಕ್ಷಣವನ್ನು ಕೌಶಲ್ಯ ಎಂದು ಪರಿಗಣಿಸುವುದು ಸಹ ಒಂದು ಸಮಸ್ಯೆಯಾಗಿರುತ್ತದೆ. ಉದಾಹರಣೆಯಾಗಿ ಗಮನಿಸುವುದಾದರೆ, ಯಾವುದಾದರೂ ಒಂದು ಹುದ್ದೆಯಲ್ಲಿರುವ ಕಾರ್ಮಿಕರ ಶಿಕ್ಷಣ ಮಟ್ಟವನ್ನು ಗಮನಿಸಿದರೆ, ಅವರ ಶಿಕ್ಷಣ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಕಂಡುಬರುತ್ತದೆ. ಆದರೆ ಇದು ಉದ್ಯೋಗದಲ್ಲಿ ಹೆಚ್ಚುತ್ತಿರುವ ಕಾರಣದಿಂದಲೋ ಅಥವಾ ನೈಜವಾದ ಉದ್ಯೋಗಕ್ಕೆ ಅಗತ್ಯವಿಲ್ಲದಿದ್ದರೂ ಲಭ್ಯವಿರುವ ಉದ್ಯೋಗಿಗಳು ಹೆಚ್ಚು ಶಿಕ್ಷಣ ಪಡೆದಿರುತ್ತಾರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕೌಶಲ್ಯಗಳ ಕುರಿತ ಕೆಲವು ಸಂಶೋಧನೆಗಳ ಪ್ರಕಾರ, ಕೆಲವು ಕೌಶಲ್ಯಗಳು ಅವುಗಳಿಗೆ ಸಮಾನ ಎಂದು ಭಾವಿಸಿದ ಶಿಕ್ಷಣವನ್ನೂ ಮೀರಿರುತ್ತವೆ. ಸಂಶೋಧನೆಗಳು ಪ್ರಮುಖವಾಗಿ ನಿಯಮಿತವಾದ ಮತ್ತು ಅನಿಯಮಿತವಾದ ಕೆಲಸಗಳ ನಡುವಿನ ವ್ಯತ್ಯಾಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತವೆ. ಅವುಗಳು ಈಗ ಕಂಪ್ಯೂಟರ್‌ಗಳು ನಿಯಮಿತವಾಗಿ ನಡೆಯುವ ಕೆಲಸಗಳನ್ನು ಹೆಚ್ಚಾಗಿ ಮಾಡುತ್ತಿವೆ ಮತ್ತು ಇದರಿಂದಾಗಿ ಕಾರ್ಮಿಕರಿಗೆ ಕಡಿಮೆ ಕೌಶಲ್ಯ ಬೇಕಾದ ಅಥವಾ ಹೆಚ್ಚು ಕೌಶಲ್ಯದ ಅಗತ್ಯವಿರುವ ನಿಯಮಿತವಲ್ಲದ ಕೆಲಸಗಳೇ ಉಳಿಯುತ್ತವೆ ಎಂದು ವಾದಿಸುತ್ತವೆ. ಕಂಪ್ಯೂಟರೀಕರಣ ಕಾರ್ಮಿಕ ಮಾರುಕಟ್ಟೆಯನ್ನು ಬದಲಾಯಿಸಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಈ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಹಾಗೂ ಈ ಬದಲಾವಣೆ ಕೌಶಲ್ಯದ ಅವಶ್ಯಕತೆ ಮತ್ತು ಪೂರೈಕೆಯ ಅಂತರದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದರ ಕುರಿತು ಇನ್ನೂ ಸಾಕಷ್ಟು ಅನುಮಾನಗಳಿವೆ.

ಸತ್ಯ ವಿಚಾರ ಇವೆರಡರ ಮಧ್ಯದಲ್ಲಿರಬಹುದು. ಯಾಕೆಂದರೆ ಇಂದಿಗೂ ಉದ್ಯಮದಲ್ಲಿ ಅಗತ್ಯಕ್ಕೆ ತಕ್ಕಷ್ಟು ನುರಿತ ಉದ್ಯೋಗಿಗಳಿಲ್ಲ ಹಾಗೂ ಉದ್ಯೋಗಗಳು ಭರ್ತಿಯಾಗಿಲ್ಲ.

ಉತ್ಪಾದನಾ ಕೌಶಲ್ಯಗಳ ಕೊರತೆ ಎಂದರೆ ಸಾಮಾನ್ಯವಾಗಿ ಉನ್ನತ ತಾಂತ್ರಿಕ ಕೌಶಲ್ಯಗಳನ್ನು, ಜ್ಞಾನ ಮತ್ತು ಪರಿಣತಿ ಹೊಂದಿರುವ ಕಾರ್ಮಿಕರನ್ನು ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಳಿಸಲು ಉದ್ಯಮ ಎದುರಿಸುತ್ತಿರುವ ವೈಫಲ್ಯ.

ಪ್ರಸ್ತುತ ಉದ್ಯಮ ಎದುರಿಸುತ್ತಿರುವ ಕೌಶಲ್ಯದ ಕೊರತೆ ಕೇವಲ ಒಂದು ಪದವಷ್ಟೇ ಅಲ್ಲ. ಅದು ಪ್ರಸ್ತುತ ಸಾಕಷ್ಟು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇಂದು ಸಮರ್ಥ ಅಭ್ಯರ್ಥಿಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಎದುರು ನೋಡುತ್ತಿರುವ ಖಾಲಿ ಉದ್ಯೋಗಗಳಿವೆ!

ನೀಲಿ ಕಾಲರ್ ಉದ್ಯೋಗದೆಡೆ ಅಸಡ್ಡೆ

ಇಂದು ಸಮಾಜದಲ್ಲಿ ಸಾಕಷ್ಟು ಜನರು ನೀಲಿ ಕಾಲರ್ ಉದ್ಯೋಗಿಗಳ ಕುರಿತು ನಕಾರಾತ್ಮಕ ಗ್ರಹಿಕೆ ಹೊಂದಿದ್ದಾರೆ. ಬಹಳ ಜನ ನೀಲಿ ಕಾಲರ್ ಉದ್ಯೋಗಿಗಳು ಅನಕ್ಷರಸ್ತರು ಎಂಬ ಭಾವನೆ ಹೊಂದಿದ್ದಾರೆ. ಇಂದು ಹಲವಾರು ಯುವಕರು ನೀಲಿ ಕಾಲರ್ ಉದ್ಯೋಗವನ್ನು ತಿರಸ್ಕರಿಸುತ್ತಿದ್ದಾರೆ. ಯಾಕೆಂದರೆ ನೌಕರರು ಇಂತಹ ಉದ್ಯೋಗಗಳಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ ಎಂದೇ ಅವರು ಭಾವಿಸುತ್ತಾರೆ. ಸಿಇಓಗಳು ಹಾಗೂ ಮ್ಯಾನೇಜರ್‌ಗಳು ಬ್ಲೂ ಕಾಲರ್ ನೌಕರರ ಮೇಲೆ ಅಪಾರ ಒತ್ತಡ ಹೇರಿ, ಕನಿಷ್ಠ ಸಂಬಳಕ್ಕೆ ಕೆಲಸ ಮಾಡಿಸುತ್ತಾರೆ ಎಂದು ನಂಬುತ್ತಾರೆ.

ಇಂತಹಾ ಮಾನಸಿಕತೆಯ ಪರಿಣಾಮವಾಗಿ ಯುವಜನತೆ ಹೆಚ್ಚಿನ ಉದ್ಯೋಗ ಸುರಕ್ಷತೆ, ಉದ್ಯೋಗದಲ್ಲಿ ಪ್ರಗತಿ ಹಾಗು ಹೆಚ್ಚಿನ ಸಂಬಳ ಬೇಕು ಎಂದು ಭಾವಿಸಿ ಬಿಳಿ ಕಾಲರ್ ಉದ್ಯೋಗವನ್ನರಸಿ ತೆರಳುತ್ತಾರೆ. ಆದರೆ ದುರದೃಷ್ಟವಶಾತ್ ಈ ಎಲ್ಲಾ ಕಾರಣಗಳಿಂದ ನೀಲಿ ಕಾಲರ್ ಉದ್ಯೋಗಕ್ಕೆ ಅಪಾರ ಕೊರತೆ ಎದುರಾಗಿದೆ. ವೆಲ್ಡರ್, ಯಂತ್ರಶಾಸ್ತ್ರಜ್ಞರು ಮತ್ತು ಸರಕು ಸಾಗಣೆದಾರರಂತಹ ಉದ್ಯೋಗಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾರೆ.

ಇಂಡಸ್ಟ್ರಿ 4.0

ಇಂಡಸ್ಟ್ರಿ 4.0ದ ಆಗಮನದಿಂದಾಗಿ ಹಲವು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಅದರ ಪರಿಣಾಮವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಖಾಲಿ ಇರುವ ಉದ್ಯೋಗಗಳ ಸಂಖ್ಯೆಯೂ ಹೆಚ್ಚಲಿದೆ. ಈ ಉದ್ಯೋಗಗಳು ಅನಿವಾರ್ಯವಾಗಿ ಇನ್ನು ಕೆಲ ಸಮಯದಲ್ಲಿ ಲಭ್ಯವಾಗಲಿರುವ ಸಂಪೂರ್ಣ ಡಿಜಿಟಲ್ ಉಪಕರಣಗಳನ್ನು ಬಳಸುವ ಸ್ಥಿತಿ ನಿರ್ಮಾಣವಾಗಲಿದೆ.

ಇಂತಹ ಹೊಸ ಹೊಸ ಕೌಶಲ್ಯ ಸಂಬಂಧಿ ಸವಾಲುಗಳನ್ನು ಎದುರಿಸಲು ಉತ್ಪಾದಕರು ಯುವ ಕಾರ್ಮಿಕರಿಗೆ, ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ತರಬೇತಿ ನೀಡಬೇಕಾಗುತ್ತದೆ. ಶಿಕ್ಷಣ ಸಂಸ್ಥೆಗಳೂ ಸಹ ತಮ್ಮ ಪಠ್ಯಕ್ರಮವನ್ನು ಇದಕ್ಕೆ ತಕ್ಕಂತೆ ಮಾರ್ಪಡಿಸಬೇಕಾಗುತ್ತದೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com