ಸೌರ ಫಲಕಗಳು
ಸೌರ ಫಲಕಗಳು

ಸೌರಶಕ್ತಿ ಮೂಲಕ 4 ಶತಕೋಟಿ ಡಾಲರ್ ಇಂಧನ ವೆಚ್ಚ ಉಳಿಸಿದ ಭಾರತ: ವರದಿ

ಭಾರತ 2022 ರ ಮೊದಲಾರ್ಧದಲ್ಲಿ ಸೌರಶಕ್ತಿ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ್ದು, ಸೌರಶಕ್ತಿ ಮೂಲಕ 4.2 ಬಿಲಿಯನ್ ಡಾಲರ್ ಇಂಧನ ವೆಚ್ಚವನ್ನು ಉಳಿಸಿದೆ ಮತ್ತು 19.4 ಮಿಲಿಯನ್ ಟನ್ ಕಲ್ಲಿದ್ದಲು ಬಳಕೆಯನ್ನೂ ತಪ್ಪಿಸಿದೆ...
Published on

ನವದೆಹಲಿ: ಭಾರತ 2022 ರ ಮೊದಲಾರ್ಧದಲ್ಲಿ ಸೌರಶಕ್ತಿ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ್ದು, ಸೌರಶಕ್ತಿ ಮೂಲಕ 4.2 ಬಿಲಿಯನ್ ಡಾಲರ್ ಇಂಧನ ವೆಚ್ಚವನ್ನು ಉಳಿಸಿದೆ ಮತ್ತು 19.4 ಮಿಲಿಯನ್ ಟನ್ ಕಲ್ಲಿದ್ದಲು ಬಳಕೆಯನ್ನೂ ತಪ್ಪಿಸಿದೆ ಎಂದು ಗುರುವಾರ ಬಿಡುಗಡೆಯಾದ ಹೊಸ ವರದಿ ತಿಳಿಸಿದೆ.

ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್, ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಾಲಿಸಿಸ್‌ನ ವರದಿಯು ಕಳೆದ ದಶಕದಲ್ಲಿ ಸೌರಶಕ್ತಿಯ ಬೆಳವಣಿಗೆಯನ್ನು ವಿಶ್ಲೇಷಿಸಿದೆ ಮತ್ತು ಸೌರಶಕ್ತಿಯನ್ನು ಹೆಚ್ಚು ಬಳಕೆ ಮಾಡುತ್ತಿರುವ ವಿಶ್ವದ ಪ್ರಮುಖ 10 ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಿದೆ. ಈಗ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾದ ಐದು ರಾಷ್ಟ್ರಗಳು ಈ ಪಟ್ಟಿಯಲ್ಲಿವೆ.

ಚೀನಾದಲ್ಲಿ ಅತಿಹೆಚ್ಚು ಸೌರಶಕ್ತಿ ಬಳಕೆ ಆಗುತ್ತಿದೆ. ಚೀನಾ ನಂತರದ ಟಾಪ್ ಏಷ್ಯನ್ ದೇಶವೆಂದರೆ ಜಪಾನ್. ಆ ಬಳಿಕ ಭಾರತ ಅತಿ ಹೆಚ್ಚು ಸೌರಶಕ್ತಿ ಬಳಸುತ್ತದೆ. ಏಷ್ಯಾದ ಅಗ್ರಮಾನ್ಯ ಏಳು ದೇಶಗಳು ಸೌರಶಕ್ತಿ ಉತ್ಪಾದನೆ ಮೂಲಕ ಒಟ್ಟಾರೆ 34 ಬಿಲಿಯನ್ ಡಾಲರ್ (2.77 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಫಾಸಿಲ್ ಫುಯೆಲ್ (ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ ಪಳೆಯುಳಿಕೆ ಇಂಧನ) ವೆಚ್ಚವನ್ನು ತಪ್ಪಿಸಿವೆ. ಹೆಚ್ಚೂಕಡಿಮೆ ಶೇ. 9ರಷ್ಟು ಸಾಂಪ್ರದಾಯಿಕ ಇಂಧನದ ಬಳಕೆ ಕಡಿಮೆ ಆಗಿದೆ. ಇದು 2022ರ ಜನವರಿಯಿಂದ ಜೂನ್‌ವರೆಗಿನ ಮಾಹಿತಿ.

ಚೀನಾ ಬಳಸುವ ಒಟ್ಟಾರೆ ವಿದ್ಯುತ್‌ನಲ್ಲಿ ಸೌರಶಕ್ತಿ ಪಾಲು ಶೇ. 5 ಇದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಸೌರಶಕ್ತಿ ಬಳಕೆ ಮೂಲಕ ಚೀನಾ 21 ಬಿಲಿಯನ್ ಡಾಲರ್ (1.71 ಲಕ್ಷ ಕೋಟಿ ರೂ) ಇಂಧನ ವೆಚ್ಚವನ್ನು ಉಳಿಸಿದೆ. ಕಲ್ಲಿದ್ದಲು ಮತ್ತು ಅನಿಲ ಆಮದು ವೆಚ್ಚ ಕಡಿಮೆಯಾಗಿದೆ.

ಇನ್ನು, ಈ ಅವಧಿಯಲ್ಲಿ ಜಪಾನ್ ಸೌರಶಕ್ತಿ ಉತ್ಪಾದನೆಯಿಂದಾಗಿ 5.6 ಬಿಲಿಯನ್ ಡಾಲರ್ (45 ಸಾವಿರ ಕೋಟಿ ರೂಪಾಯಿ) ಮೌಲ್ಯದಷ್ಟು ಇಂಧನ ವೆಚ್ಚವನ್ನು ಉಳಿಸಿದೆ. ಭಾರತ 4.2 ಬಿಲಿಯನ್ ಡಾಲರ್, ವಿಯೆಟ್ನಾಂ 1.7 ಬಿಲಿಯನ್ ಡಾಲರ್‌ನಷ್ಟು ಹಣವನ್ನು ಸೌರಶಕ್ತಿ ಬಳಕೆಯಿಂದಾಗಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com