ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್: 20 ಸಾವಿರ ಉದ್ಯೋಗಿಗಳ ವಜಾಕ್ಕೆ ನಿರ್ಧಾರ!

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅತಿಯಾಗಿ ನೇಮಕ ಮಾಡಿಕೊಂಡಿದ್ದ  ಅಮೆಜಾನ್ ಸಂಸ್ಥೆ ಇದೀಗ ಸುಮಾರು 20 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.
ಅಮೆಜಾನ್
ಅಮೆಜಾನ್
Updated on

ನವದೆಹಲಿ: ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅತಿಯಾಗಿ ನೇಮಕ ಮಾಡಿಕೊಂಡಿದ್ದ  ಅಮೆಜಾನ್ ಸಂಸ್ಥೆ ಇದೀಗ ಸುಮಾರು 20 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.

ಮುಂಬರುವ ತಿಂಗಳುಗಳಲ್ಲಿ, ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ಸುಮಾರು 20,000 ಉದ್ಯೋಗಿಗಳನ್ನು ಅಮೆಜಾನ್ ವಜಾ ಮಾಡಲು ಸಂಸ್ಛೆ ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ. ಜಾಗತಿಕವಾಗಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟೆಕ್ ದೈತ್ಯ ಅಮೆಜಾನ್, ವಿವಿಧ ಇಲಾಖೆಗಳ ಸಿಬ್ಬಂದಿಗಳ ವಜಾಕ್ಕೆ ಮುಂದಾಗಿದೆ. ಇವುಗಳಲ್ಲಿ ವಿತರಣಾ ಕೆಲಸಗಾರರು, ಕಾರ್ಪೊರೇಟ್ ಅಧಿಕಾರಿಗಳು ಮತ್ತು ತಂತ್ರಜ್ಞಾನ ಸಿಬ್ಬಂದಿಗಳೂ ಕೂಡ ಸೇರಿದ್ದಾರೆ. ವಜಾಗೊಳಿಸುವಿಕೆಯು ಕಂಪನಿಯ ಎಲ್ಲಾ ಹಂತಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕಳೆದ ತಿಂಗಳು, ನ್ಯೂಯಾರ್ಕ್ ಟೈಮ್ಸ್ ಅಮೆಜಾನ್ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ವರದಿ ಮಾಡಿತ್ತು. ಇದು ತಂತ್ರಜ್ಞಾನ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ವಜಾ ಪ್ರಕ್ರಿಯೆಯಾಗಿತ್ತು. ಆದರೆ, ಈಗ ವಜಾಗೊಂಡ ನೌಕರರ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ವರದಿ ಹೇಳಿದೆ. ಕಳೆದ ಕೆಲವು ದಿನಗಳಲ್ಲಿ ಅಮೆಜಾನ್ ತನ್ನ ಮ್ಯಾನೇಜರ್‌ಗಳಿಗೆ ಉದ್ಯೋಗಿಗಳಲ್ಲಿ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಬೇಕು ಎಂದು ಹೇಳಿತ್ತು. 

ಮೂಲಗಳ ಪ್ರಕಾರ, ವಜಾಗೊಳ್ಳುವ ಕಾರ್ಪೊರೇಟ್ ಉದ್ಯೋಗಿಗಳು ಕಂಪನಿಯ ಒಪ್ಪಂದಗಳ ಪ್ರಕಾರ 24 ಗಂಟೆಗಳ ನೋಟಿಸ್ ಮತ್ತು ಬೇರ್ಪಡಿಕೆ ವೇತನವನ್ನು ಸ್ವೀಕರಿಸಲಿದ್ದಾರೆ. ಸನ್ನಿಹಿತ ವಜಾಗೊಳಿಸುವ ಬಗ್ಗೆ ನೇರವಾಗಿ ಮಾಹಿತಿ ನೀಡಿದ ಮೂಲವೊಂದು, ಉದ್ಯೋಗ ಕಡಿತದ ಬಗ್ಗೆ ತಿಳಿದಾಗಿನಿಂದ ನೌಕರರಿಗೆ ಭಯ ಆವರಿಸಿದೆ ಎಂದು ಹೇಳಿದೆ. ಅಮೆಜಾನ್ ವಜಾಗೊಳಿಸಲು ನಿರ್ದಿಷ್ಟ ಇಲಾಖೆ ಅಥವಾ ಸ್ಥಳವನ್ನು ಗುರಿಯಾಗಿಸಿಕೊಂಡಿದೆ ಮತ್ತು ಈ ಕ್ರಮವು ವ್ಯವಹಾರದಾದ್ಯಂತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ ಅಮೆಜಾನ್ ಅತಿಯಾಗಿ ನೇಮಕ ಪ್ರಕ್ರಿಯೆ ನಡೆಸಿತ್ತು. ಈಗ ವೆಚ್ಚ ಕಡಿತ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅಕ್ಟೋಬರ್‌ನಲ್ಲಿ, ಅಮೆಜಾನ್ ಈ ವರ್ಷದ ರಜಾದಿನಗಳಲ್ಲಿ ನಿಧಾನಗತಿಯ ಮಾರಾಟದ ಬೆಳವಣಿಗೆಯನ್ನು ಮುನ್ಸೂಚಿಸಿತು. ಹೆಚ್ಚುತ್ತಿರುವ ಬೆಲೆಗಳ ನಡುವೆ ಗ್ರಾಹಕರು ಮತ್ತು ವ್ಯಾಪಾರಗಳು ಕಡಿಮೆ ಹಣವನ್ನು ಖರ್ಚು ಮಾಡಲು ಮುಂದಾಗಿರುವುದು ಈ ನಿಧಾನಗತಿಗೆ ಕಾರಣವೆಂದು ಕಂಪನಿ ಹೇಳಿದೆ. ಇದರ ಬೆನ್ನಲ್ಲೇ ಇ-ಕಾಮರ್ಸ್ ದೈತ್ಯ ಕೆಲವು ಲಾಭದಾಯಕವಲ್ಲದ ಘಟಕಗಳಲ್ಲಿನ ತನ್ನ ಉದ್ಯೋಗಿಗಳಿಗೆ ಕಂಪನಿಯೊಳಗೆ ಅವಕಾಶಗಳನ್ನು ಹುಡುಕುವುದನ್ನು ಪ್ರಾರಂಭಿಸಲು ಎಚ್ಚರಿಸಿದೆ ಎಂದು ವರದಿ ಹೇಳಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com