ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಕೊರತೆ: ಭಾರತದ ಮುಂದಿದೆ ಉತ್ತಮ ಅವಕಾಶ!

ಇಡೀ ಜಗತ್ತೇ ಅಪಾರವಾಗಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವಾಗ, ಈಗ ಭಾರತಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇಂದು ಜಗತ್ತು ಚಿಪ್‌ಗಳು ಮತ್ತು ಸೆಮಿಕಂಡಕ್ಟರ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಈ ಸೆಮಿಕಂಡಕ್ಟರ್‌ಗಳು ಕೇವಲ ಆಧುನಿಕ ತಂತ್ರಜ್ಞಾನದ ಉಪಕರಣಗಳಾದ ಸ್ಮಾರ್ಟ್ ಫೋನ್, ಕಂಪ್ಯೂಟರ್‌ಗಳಲ್ಲಿ ಮಾತ್ರ ಬಳಕೆಯಾಗುವುದಲ್ಲ. ಅವುಗಳು ಇತರ ಪಾರಂಪರಿಕ ಕ್ಷೇತ್ರಗಳಾದ ಆಟೊಮೊಬೈಲ್ ಮತ್ತಿತರ ಕ್ಷೇತ್ರಗಳಲ್ಲೂ ಬಳಕೆಯಾಗುತ್ತದೆ. ಪ್ರತಿಯೊಂದು ಸಮಸ್ಯೆಗಳು ಎದುರಾದಾಗಲೂ ಒಂದು ಅವಕಾಶವೂ ಎದುರಾಗುತ್ತದೆ ಎಂಬ ಮಾತಿದೆ. ಈಗ ಇಡೀ ಜಗತ್ತೇ ಅಪಾರವಾಗಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವಾಗ, ಈಗ ಭಾರತಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.

ಸಮಸ್ಯೆಯ ಹಿನ್ನೆಲೆ

ಸೆಮಿಕಂಡಕ್ಟರ್

ಸೆಮಿಕಂಡಕ್ಟರ್ ಒಂದು ಸಾಮಾನ್ಯವಾಗಿ ಸಿಲಿಕಾನ್ ನಿಂದ ರಚಿಸಲ್ಪಟ್ಟ ಉಪಕರಣವಾಗಿದೆ. ಇದು ಗ್ಲಾಸಿನಂತಹ ಇನ್ಸುಲೇಟರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಹರಿಯಲು ಬಿಡುತ್ತದೆ. ಆದರೆ ಕಂಚು, ಅಲ್ಯುಮಿನಿಯಂನಂತಹ ಶುದ್ಧ ವಾಕಕಗಳಿಂದ ಕಡಿಮೆ ವಿದ್ಯುತ್ ಹರಿಯಲು ಬಿಡುತ್ತದೆ.

ಸೆಮಿಕಂಡಕ್ಟರ್‌ಗಳು ಬೆಳೆಯುತ್ತಿರುವ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಏಐ), ಹಾಗೂ ಇಂಟರ್ನೆಟ್‌ ಆಫ್ ಥಿಂಗ್ಸ್ ಅಪ್ಲಿಕೇಷನ್‌ಗಳು, 5ಜಿ ಸಂವಹನ, ಕ್ಲೌಡ್ ಕಂಪ್ಯೂಟಿಂಗ್, ಆಟೋಮೇಷನ್, ಇಲೆಕ್ಟ್ರಿಕ್ ವಾಹನ, ಹಾಗೂ ವಿವಿಧ ರೀತಿಯ, ವಿವಿಧ ಮಾದರಿಗಳ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹಾಗೂ ಆಟೊಮೊಬೈಲ್ ಕ್ಷೇತ್ರದ ಕಾರ್ಯತಂತ್ರಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಪ್ರಾಯೋಗಿಕವಾಗಿ ಎಲ್ಲಾ ಉದ್ಯಮಗಳಲ್ಲೂ ಸೆಮಿಕಂಡಕ್ಟರ್ ಚಿಪ್‌ಗಳು ಅತ್ಯಂತ ಉಪಯುಕ್ತ ಉಪಕರಣಗಳಾಗಿವೆ. ಆದರೆ, ಜಗತ್ತು ಅತ್ಯಂತ ಕಡಿಮೆ ಪ್ರಮಾಣದ ಪೂರೈಕೆಯ ಕಾರಣದಿಂದ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಎದುರಿಸುತ್ತಿದೆ.

ಈಗಾಗಲೇ ಉದ್ಯಮದಲ್ಲಿ ಎದುರಾದ ಸೆಮಿಕಂಡಕ್ಟರ್ ಫ್ಯಾಬ್‌ಗಳ ಉತ್ಪಾದನಾ ಸಾಮರ್ಥ್ಯದ ಕೊರತೆಯ ಜೊತೆಗೆ ಅನಿರೀಕ್ಷಿತವಾಗಿ ತಲೆದೋರಿದ ಕೋವಿಡ್-19 ಪ್ಯಾನ್‌ಡೆಮಿಕ್‌ ಹೊಸ ಹೊಸ ಸವಾಲುಗಳನ್ನು ಹುಟ್ಟುಹಾಕಿತು.

ಇಂದು ಜಗತ್ತು ಎದುರಿಸುತ್ತಿರುವ ಚಿಪ್ ಕೊರತೆಯ ಸಮಸ್ಯೆ ಸದ್ಯದಲ್ಲಿ ಪರಿಹಾರ ಕಾಣುವ ಸಾಧ್ಯತೆಗಳು ಅತ್ಯಂತ ಕಡಿಮೆ. ಅದಕ್ಕೆ ಸೆಮಿಕಂಡಕ್ಟರ್ ಉತ್ಪಾದನಾ ಕಾರ್ಯದಲ್ಲಿರುವ ಸಂಕೀರ್ಣತೆಯೂ ಸಹ ಒಂದು ಕಾರಣವಾಗಿದೆ.

ಈಗಾಗಲೇ ಉತ್ಪಾದನೆಗೆ ಸಿದ್ಧವಾಗಿರುವ ಘಟಕಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ನಾಲ್ಕು ತಿಂಗಳಿಂದಲೂ ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನು ತೀರಾ ಆರಂಭದಿಂದ ಕಾರ್ಯ ನಿರ್ವಹಿಸಬೇಕಾದ ನೂತನ ಉತ್ಪಾದನಾ ಘಟಕಗಳ ನಿರ್ಮಾಣ ಹಂತದಿಂದ ಉತ್ಪಾದನೆಗೆ ಒಂದರಿಂದ ಮೂರು ವರ್ಷಗಳ ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರುವ ಉತ್ಪಾದನಾ ಘಟಕದ ತಯಾರಿಗೆ 12ರಿಂದ 18 ತಿಂಗಳು ಹಿಡಿಯುತ್ತದೆ. ಆ ಬಳಿಕ ಸಂಶೋಧನೆ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಇನ್ನೂ 12ರಿಂದ 36 ತಿಂಗಳ ಕಾಲಾವಧಿ ಬೇಕಾಗುತ್ತದೆ. ನಿರ್ಮಾಣ ಕಾರ್ಯ ನಡೆಸುತ್ತಿರುವ ಘಟಕದಲ್ಲಿ ಮರು ಉತ್ಪಾದನೆಗೆ ನಾಲ್ಕು ತಿಂಗಳ ಅವಧಿ ಬೇಕು.

ಆದ್ದರಿಂದ, ಒಂದು ಸೆಮಿಕಂಡಕ್ಟರ್ ಚಿಪ್ ಎಂಬುದು ಒಂದು ಸಮರ್ಥ ಉತ್ಪಾದನಾ ಕ್ರಿಯೆ, ಇಂಜಿನಿಯರಿಂಗ್ ಕೌಶಲ್ಯ ಮತ್ತು ಸಮರ್ಥ ಸರ್ಕಾರಿ ನೀತಿಗಳ ಉತ್ಪನ್ನವಾಗಿದೆ.

ಪ್ರಸ್ತುತ ಸೆಮಿಕಂಡಕ್ಟರ್ ಪೂರೈಕೆಯ ಸರಪಳಿ

ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯ ಸಾಮಾನ್ಯವಾಗಿ ಕೆಲವೇ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಬಹುತೇಕ ಎಲ್ಲಾ ಆಧುನಿಕ (10 ಎನ್ ಎಂ ಗಿಂತ ಕಡಿಮೆ) ಸೆಮಿಕಂಡಕ್ಟರ್ ತಯಾರಿಕಾ ಸಾಮರ್ಥ್ಯ ತೈವಾನ್ ಹಾಗೂ ದಕ್ಷಿಣ ಕೊರಿಯಾ ಕೇಂದ್ರಿತವಾಗಿದ್ದು, 92% ಘಟಕಗಳು ತೈವಾನ್‌ನಲ್ಲಿವೆ.

ಇನ್ನು, 75% ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯ ಪೂರ್ವ ಏಷ್ಯಾ ಮತ್ತು ಚೀನಾಗಳಲ್ಲಿ ಕಂಡುಬರುತ್ತವೆ.

ತೈವಾನ್ ಜಲಸಂಧಿಯ ಬಿಕ್ಕಟ್ಟು ಮತ್ತು ಸೆಮಿಕಂಡಕ್ಟರ್ ಉದ್ಯಮದ ಮೇಲೆ ಅದರ ಪರಿಣಾಮ:

ಇತ್ತೀಚೆಗೆ ಅಮೆರಿಕಾದ ಹೌಸ್ ಆಫ್ ಕಾಮರ್ಸ್ ಸ್ಪೀಕರ್ ಆಗಿರುವ ನ್ಯಾನ್ಸಿ ಪೆಲೊಸಿ ಅವರು ತೈವಾನ್‌ಗೆ ಭೇಟಿ ನೀಡಿರುವುದು ಈ ಪ್ರಾಂತ್ಯದಲ್ಲಿ ಒಂದು ಅನಿರೀಕ್ಷಿತ ಬಿಕ್ಕಟ್ಟು ತಲೆದೋರುವಂತೆ ಮಾಡಿದೆ.

ಜಗತ್ತಿನ 63% ಸೆಮಿಕಂಡಕ್ಟರ್ ಉತ್ಪಾದಿಸುವ ರಾಷ್ಟ್ರವಾದ ತೈವಾನ್ ಏನಾದರೂ ಈ ಉತ್ಪಾದನೆಯನ್ನು ಸ್ಥಗಿತಗೊಳಿಸಿದರೆ, ಪರಿಸ್ಥಿತಿ ಅತ್ಯಂತ ಗಂಭೀರವಾಗಲಿದ್ದು, ಈ ಕೊರತೆಯಿಂದ ಹೊರಬರಲು ಜಗತ್ತಿಗೆ ಕೇವಲ ವರ್ಷಗಳಲ್ಲ, ದಶಕಗಳೇ ಬೇಕಾಗಿ ಬರಬಹುದು.

ಇತ್ತೀಚಿನ ವರದಿಯೊಂದರ ಪ್ರಕಾರ, ಜಾಗತಿಕ ಸೆಮಿಕಂಡಕ್ಟರ್ ಕೊರತೆ ಈಗಾಗಲೇ 169 ಉದ್ಯಮಗಳ ಮೇಲೆ ಪರಿಣಾಮ ಬೀರಿದೆ.

ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ. ಪೂರೈಕೆ ಜಾಲದಾದ್ಯಂತ ಈಗಾಗಲೇ ಬೆಲೆಗಳು ಏರುತ್ತಿವೆ.

ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ವಾಹನಗಳು ದಿನದಿಂದ ದಿನಕ್ಕೆ ದುಬಾದಿಯಾಗುತ್ತಿದ್ದು, ಅವುಗಳನ್ನು ಪಡೆಯುವುದೇ ಒಂದು ಸವಾಲಾಗುತ್ತಿದೆ.

ಕೋವಿಡ್-19 ಪ್ಯಾನ್‌ಡೆಮಿಕ್ ಪರಿಣಾಮವಾಗಿ ಎದುರಾದ ಸೆಮಿಕಂಡಕ್ಟರ್ ಕೊರತೆಯ ಕಾರಣದಿಂದ ಜಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆ ತಾನು ನಿರೀಕ್ಷಿಸಿದ್ದಕ್ಕಿಂತ 1.70 ಲಕ್ಷ ಕಡಿಮೆ ಕಾರುಗಳನ್ನು ಉತ್ಪಾದಿಸಿದೆ.

ಅಮೆರಿಕಾದ ಕಾರ್ ಉತ್ಪಾದನಾ ಸಂಸ್ಥೆಯಾದ ಜನರಲ್ ಮೋಟಾರ್ಸ್ ಜಾಗತಿಕ ಚಿಪ್ ಕೊರತೆಯ ಕಾರಣದಿಂದಾಗಿ ತನ್ನ 16%ದಷ್ಟು ಕಾರುಗಳು ಮಾರಾಟವಾಗಿಲ್ಲ ಎಂದು ತಿಳಿಸಿದೆ.

ಭಾರತದ ಸಿದ್ಧತೆ

ಭಾರತ ಚಿಪ್ ತಯಾರಿಕಾ ವಿಷಯದಲ್ಲಿನ ಸ್ವಾವಲಂಬನೆಗಾಗಿ ಮೂರರಲ್ಲಿ ಒಂದು ನಿಯತಾಂಕದಲ್ಲಿ ಮಾತ್ರ ಸಿದ್ಧವಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ, ಭಾರತ 94% ಇಲೆಕ್ಟ್ರಾನಿಕ್ಸ್ ಹಾಗೂ ತನ್ನ ಅಗತ್ಯದ 100% ಸೆಮಿಕಂಡಕ್ಟರ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತ ಪ್ರಸ್ತುತ ತನ್ನೆಲ್ಲ ಸೆಮಿಕಂಡಕ್ಟರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದು 24 ಬಿಲಿಯನ್ ಡಾಲರ್ ಉದ್ಯಮವಾಗಿದೆ. ಈ ಮಾರುಕಟ್ಟೆ 2025ರ ವೇಳೆಗೆ 100 ಬಿಲಿಯನ್ ಡಾಲರ್ ಉದ್ಯಮವಾಗುವ ಸಾಧ್ಯತೆಗಳಿವೆ.

ಆದರೆ ಡಿಜಿಟಲ್ ಇಂಡಿಯಾ ಯೋಜನೆ ಈ ಮೂರೂ ನಿಯತಾಂಕಗಳನ್ನು ಅತ್ಯಂತ ಕ್ಷಿಪ್ರವಾಗಿ ಪೂರ್ಣಗೊಳಿಸುವ ಸಾಧ್ಯತೆಗಳಿವೆ.

ಒಂದು ಒಳ್ಳೆಯ ವಿಚಾರವೆಂದರೆ, ಭಾರತ ಈಗಾಗಲೇ ಚಿಪ್ ವಿನ್ಯಾಸಕ್ಕೆ ಬೇಕಾದ ಭದ್ರ ಬುನಾದಿ ಹಾಕಿಕೊಂಡಿದ್ದು, ಇದನ್ನು ಭವಿಷ್ಯದಲ್ಲಿ ಉತ್ಪನ್ನಗಳ ಅಭಿವೃದ್ಧಿ  ಮತ್ತು ಐಪಿ (ಇಂಟಲೆಕ್ಚುವಲ್ ಪ್ರಾಪರ್ಟಿ) ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಇನ್ನಷ್ಟು ಬೆಳೆಸಬಹುದು.

ಈಗ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಬಲ ಉತ್ಪಾದನಾ ಘಟಕಗಳನ್ನು ಆರಂಭಿಸಲು ಉತ್ತಮ ಅವಕಾಶವಿದೆ. ಆದರೆ ಸರ್ಕಾರ ಈ ಕುರಿತು ಮನಸು ಮಾಡಿ, ಸಹಕಾರ ನೀಡಿದರೆ ಮಾತ್ರ ಇದು ಸಾಧ್ಯವಾಗಲಿದೆ.

ತೈವಾನ್ ಚಿಪ್ ಉತ್ಪಾದಕರಿಗೆ 90% ಸಬ್ಸಿಡಿ ಒದಗಿಸುತ್ತದೆ. ಇದಕ್ಕೆ ಹೋಲಿಸಬಲ್ಲ‌ ಸಾಧನೆ ಮಾಡಲು ಭಾರತ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ.

ಸದೃಢ ಸೆಮಿಕಂಡಕ್ಟರ್ ಉದ್ಯಮ ನಿರ್ವಹಿಸಲು ಭಾರತದ ಮುಂದಿರುವ ಸವಾಲುಗಳು

ಕಚ್ಚಾ ವಸ್ತುಗಳು:

ಕಚ್ಚಾ ವಸ್ತುಗಳ ಪೂರೈಕೆಗೆ ಭಾರತ ಆಮದಿನ ಮೇಲೆಯೇ ಅವಲಂಬಿತವಾಗಿದೆ.

ಉತ್ಪಾದನೆ:

ಪ್ರಸ್ತುತ ಭಾರತದಲ್ಲಿ ಬೃಹತ್ ಪ್ರಮಾಣದ ಚಿಪ್ ಉತ್ಪಾದನೆಗೆ ಬೇಕಾಗುವ ಅತ್ಯುನ್ನತ ಗುಣಮಟ್ಟದ ಉತ್ಪಾದನಾ ವ್ಯವಸ್ಥೆಗಳ ಕೊರತೆಯಿದೆ.

ನೀರಿನ ಪೂರೈಕೆ:

ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಬೇರೆ ಬೇರೆ ಅಗತ್ಯಗಳಿಗೆ ಅತ್ಯಂತ ಬೃಹತ್ ಪ್ರಮಾಣದಲ್ಲಿ ನೀರಿನ ಅಗತ್ಯವಿದೆ. ಉಪಕರಣಗಳ ತಣ್ಣಗಾಗಿಸುವಿಕೆಯಿಂದ ಮೇಲ್ಮೈ ಸ್ವಚ್ಛಗೊಳಿಸಲು ನೀರು ಬೇಕಾಗುತ್ತದೆ. ಭಾರತದಲ್ಲಿ ಈಗ ಇಂತಹ ಸೌಲಭ್ಯಗಳಿಲ್ಲ. ಇದರೊಡನೆ ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಪವರ್ ಕಟ್ ಸಹ ಭಾರತದಲ್ಲಿ ಉತ್ಪಾದನೆಗೆ ಸವಾಲಾಗಿದೆ.

ತಾಂತ್ರಿಕ ಸವಾಲುಗಳು:

ಸೆಮಿಕಂಡಕ್ಟರ್ ಉತ್ಪಾದನೆಗೆ ತಾಂತ್ರಿಕ ಕೌಶಲ್ಯದ ಅಗತ್ಯವಿರುತ್ತದೆ. ಇದರೊಡನೆ ಅಸಮರ್ಪಕ ಸರಕು ಸಾಗಾಟ ವ್ಯವಸ್ಥೆ ಹಾಗೂ ಸಮರ್ಪಕ ತ್ಯಾಜ್ಯ ನಿರ್ವಹಣೆಯ ಕೊರತೆಯೂ ಸಹ ಸೆಮಿಕಂಡಕ್ಟರ್ ಉತ್ಪಾದನಾ ಉದ್ಯಮಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಭಾರತದ ಮುಂದಿರುವ ಅವಕಾಶಗಳು:

ಸಾಫ್ಟ್‌ವೇರ್ ಆಧಾರಿತ ಕ್ಷೇತ್ರವಾದ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ಭಾರತ ಅಪಾರ ಮೇಲುಗೈ ಸಾಧಿಸಿದೆ.

ಡಿಸೆಂಬರ್ 2021ರಲ್ಲಿ ಭಾರತ ಸರ್ಕಾರ 76,000 ಕೋಟಿ ರೂಪಾಯಿಗಳ ಮೌಲ್ಯದ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತಂದಿತು. ಇದು ಅಂತಾರಾಷ್ಟ್ರೀಯ ಸೆಮಿಕಂಡಕ್ಟರ್ ಮತ್ತು ಡಿಸ್‌ಪ್ಲೇ ಉತ್ಪಾದಕರನ್ನು ಭಾರತದೆಡೆ ಸೆಳೆದು, ದೇಶವನ್ನು ಜಾಗತಿಕ ಚಿಪ್ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ.

ಇದು ಭವಿಷ್ಯದಲ್ಲಿ ಭಾರತವನ್ನು ಜಾಗತಿಕ ಇಲೆಕ್ಟ್ರಾನಿಕ್ ಉತ್ಪನ್ನಗಳ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ, ಅಪಾರವಾದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಜಗತ್ತಿನಾದ್ಯಂತ ದೊಡ್ಡ ಕಂಪನಿಗಳನ್ನು ಸೆಳೆಯಲು ಅತ್ಯಂತ ಮಹತ್ವದ್ದಾಗಿದೆ.

ಅಪಾರ ಪ್ರಮಾಣದ ಖರ್ಚಿನ ಜೊತೆಗೆ, ಕೆಲವು ಮೂಲಭೂತ ಸೌಲಭ್ಯಗಳು ಸೆಮಿಕಂಡಕ್ಟರ್ ಉತ್ಪಾದನೆಗೆ ಅಗತ್ಯವಾಗಿದೆ. ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಿಗೆ ಕಡಿತವಿಲ್ಲದ ವಿದ್ಯುತ್ ಪೂರೈಕೆ ಮತ್ತು ಮಿಲಿಯನ್ ಗಟ್ಟಲೆ ಲೀಟರ್‌ಗಳ ಶುದ್ಧ ನೀರಿನ ಅಗತ್ಯವಿದೆ. ಭಾರತ ಈ ವಿಭಾಗಗಳಲ್ಲಿ ಕೊರತೆ ಎದುರಿಸುತ್ತಿದೆ. ಭಾರತದಲ್ಲಿ ಈಗಲೂ ಸತತವಾಗಿ ವಿದ್ಯುತ್ ಕಡಿತ ಎದುರಾಗುತ್ತಿದ್ದು, ನಮ್ಮ ನೀರಿನ ಪೂರೈಕೆಯೂ ಅತ್ಯುತ್ತಮ ಮಟ್ಟದಲ್ಲಿಲ್ಲ.

ಈ ರೀತಿ ಜಾಗತಿಕವಾಗಿ ಚಿಪ್‌ಗಳ ಕೊರತೆ ಎದುರಾಗುವ ಮೊದಲು ಅಂತಾರಾಷ್ಟ್ರೀಯ ಉತ್ಪಾದಕರಿಗೆ ಭಾರತದಲ್ಲಿ ಉತ್ಪಾದನಾ ಕಾರ್ಯ ಬೇಡ ಎನಿಸಲು ಈ ಕಾರಣಗಳೇ ಸಾಕಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗತೊಡಗಿದ್ದು, ಬೃಹತ್ ಸಂಸ್ಥೆಗಳಾದ ಟಾಟಾ ಗ್ರೂಪ್ ಮತ್ತು ವೇದಾಂತ ಈಗಾಗಲೇ ಜಂಟಿ ಸಹಯೋಗದೊಂದಿಗೆ ಸೆಮಿಕಂಡಕ್ಟರ್ ಉತ್ಪಾದಿಸಲು ಆಸಕ್ತಿ ತೋರಿಸಿವೆ.

ಕೆಲವು ಯಶಸ್ವಿ ಉತ್ಪಾದನಾ ಘಟಕಗಳ ಸ್ಥಾಪನೆಯೇ 3 ರಿಂದ 5 ವರ್ಷಗಳ ಕಾಲ ತೆಗೆದುಕೊಳ್ಳಬಹುದಾದ ಕಾರ್ಯವಾಗಿದೆ. ಆದರೆ ಇದು ಇತರ ಉದ್ಯಮಗಳಿಗೆ ಬೇಗವರ್ಧಕವಾಗಿ ಕಾರ್ಯ ನಿರ್ವಹಿಸಿ, ಭಾರತದ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕು ಎಂಬ ಗುರಿಗೆ ಪೂರಕವಾಗಲಿದೆ. ಸೆಮಿಕಂಡಕ್ಟರ್ ಉತ್ಪಾದನೆಯನ್ನು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್‌ನರ್‌ಶಿಪ್) ಮಾದರಿಯಲ್ಲೂ ಕೈಗೊಳ್ಳಬಹುದು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮುಂದೆ ಬಂದು ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮತ್ತು ದೀರ್ಘಕಾಲದ ಪ್ರೋತ್ಸಾಹಕ ಯೋಜನೆಗಳನ್ನು ಒದಗಿಸಿದರೆ ಕಂಪನಿಗಳು ಜಂಟಿ ಸಹಯೋಗ ಹೊಂದಿ ಉತ್ಪಾದನೆ ಕೈಗೊಳ್ಳಬಹುದು.

ಭಾರತೀಯ ಉದ್ಯಮಗಳ ಒಕ್ಕೂಟ ಮುಂದೆ ಬಂದು ಚಿಪ್ ಉತ್ಪಾದನೆಗೆ ಅಗತ್ಯವಿರುವ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಉತ್ಪಾದನೆ ಮತ್ತು ಪೂರೈಕೆಯ ಸರಪಳಿಗೆ ಉದ್ಯಮದ ಬದ್ಧತೆ ಭಾರತ ತನ್ನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಪ್ರಸ್ತುತ ತೈವಾನ್ ಜಲಸಂಧಿಯ ಬಿಕ್ಕಟಿನಿಂದ ಎದುರಾಗಿರುವ ಸಮಸ್ಯೆಯನ್ನು ತನ್ನ ಅಭಿವೃದ್ಧಿಗೆ ಸಹಾಯವಾಗುವಂತೆ ಮಾಡಬಹುದು.

ಕಳೆದ ಕೆಲವು ವರ್ಷಗಳಿಂದ ಸೆಮಿಕಂಡಕ್ಟರ್ ಉದ್ಯಮದ ಲಾಭ ಇತರ ಉದ್ಯಮಗಳಿಗೆ ಹೋಲಿಸಿದರೆ ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಈ ಪ್ರವೃತ್ತಿ ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ.

2000 - 2004ರ ಅವಧಿಯಲ್ಲಿ ಆರ್ಥಿಕ ಲಾಭದಲ್ಲಿ 15ನೇ ಸ್ಥಾನದಲ್ಲಿದ್ದ ಸೆಮಿಕಂಡಕ್ಟರ್ ಉದ್ಯಮ 2016-20ರ ಅವಧಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಭಾರತಕ್ಕೆ ಈಗ ಜಾಗತಿಕ ಸಾಫ್ಟ್‌ವೇರ್‌ ಕೇಂದ್ರ ಎಂಬ ಸ್ಥಾನದಿಂದ ಮುಂದುವರಿದು, ತನ್ನನ್ನು ತಾನು ಚಿಪ್ ಉತ್ಪಾದನಾ ಕೇಂದ್ರವಾಗಿ ರೂಪಿಸಲು ಅವಕಾಶವಿದೆ.

ಸರ್ಕಾರಿ ಉಪಕ್ರಮಗಳು

ಕೇಂದ್ರ ಮಂತ್ರಿಮಂಡಲ ಭಾರತದಲ್ಲಿ ಸೆಮಿಕಂಡಕ್ಟರ್ ಹಾಗೂ ಡಿಸ್‌ಪ್ಲೇ ಉತ್ಪಾದನಾ ಉದ್ಯಮದ ಅಭಿವೃದ್ಧಿಗಾಗಿ ರೂ 76,000 ಕೋಟಿ ಒದಗಿಸಿದೆ.

ಭಾರತ ಈಗಾಗಲೇ ಎಲೆಕ್ಟ್ರಾನಿಕ್ ಘಟಕಗಳು ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಗೆ ಎಲೆಕ್ಟ್ರಾನಿಕ್ ಕಂಪೋನೆಂಟ್ಸ್ ಅಂಡ್ ಸೆಮಿಕಂಡಕ್ಟರ್ಸ್ (ಎಸ್‌ಪಿಇಸಿಎಸ್) ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಡಿಸೆಂಬರ್ 2021 ರಲ್ಲಿ ಭಾರತ ವಿದೇಶಿ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಆರಂಭಿಸಲು ಅಥವಾ ಭಾರತದಲ್ಲಿರುವ ಅಂತಹ ಉತ್ಪಾದನಾ ಘಟಕಗಳನ್ನು ಪಡೆದುಕೊಳ್ಳಲು ಆಮಂತ್ರಿಸಿತ್ತು.

ಮೀಟ್‌ವೈ ಈಗಾಗಲೇ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್ಐ) ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಕನಿಷ್ಠ 20 ದೇಶೀಯ ಕಂಪನಿಗಳಿಗೆ ಬೆಂಬಲ ನೀಡುವ ಮತ್ತು ಮುಂದಿನ ಐದು ವರ್ಷಗಳಲ್ಲಿ 1,500 ಕೋಟಿ ರೂಗಳಿಗೂ ಹೆಚ್ಚಿನ ವ್ಯವಹಾರ ಮಾಡುವಂತೆ ಪ್ರೋತ್ಸಾಹ ನೀಡಲಿದೆ.

ಇತ್ತೀಚೆಗೆ ಘೋಷಿಸಲಾದ ಸೆಮಿಕಾನ್ ಇಂಡಿಯಾ ಯೋಜನೆ ಹತ್ತು ಬಿಲಿಯನ್ ಡಾಲರ್ ತನಕ ಹಣಕಾಸಿನ ಬೆಂಬಲ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಿದ್ದು, ಇದು ಸರಿಯಾದ ದಿಕ್ಕಿನಲ್ಲಿ ಸರಿಯಾದ ಹೆಜ್ಜೆಯಾಗಿದೆ.

ಸೆಮಿಕಾನ್ ಇಂಡಿಯಾ ಯೋಜನೆ ಸಿಲಿಕಾನ್ ಸೆಮಿಕಂಡಕ್ಟರ್ ಉತ್ಪಾದನೆ, ಡಿಸ್‌ಪ್ಲೇ ಉತ್ಪಾದನೆ ಮತ್ತು ಕಾಂಪೌಂಡ್ ಸೆಮಿಕಂಡಕ್ಟರ್, ಸಿಲಿಕಾನ್ ಫೋಟೋನಿಕ್ಸ್, ಸೆನ್ಸರ್‌ ಉತ್ಪಾದನೆ (ಎಂಇಎಂಎಸ್ ಸೇರಿದಂತೆ), ಸೆಮಿಕಂಡಕ್ಟರ್ ಪ್ಯಾಕೇಜಿಂಗ್ (ಎಟಿಎಂಪಿ / ಒಎಸ್ಎಟಿ) ಹಾಗೂ ಸೆಮಿಕಂಡಕ್ಟರ್ ವಿನ್ಯಾಸಗೊಳಿಸುವ ಸಂಸ್ಥೆಗಳಿಗೆ ಆಕರ್ಷಕ ಪ್ರೋತ್ಸಾಹ ಒದಗಿಸುವ ಗುರಿ ಹೊಂದಿದೆ.

ಮುಂದಿರುವ ಹಾದಿ

ಈಗ ಜಗತ್ತಿನಾದ್ಯಂತ ತಲೆದೋರಿರುವ ಸೆಮಿಕಂಡಕ್ಟರ್ ಕೊರತೆಯ ಅವಕಾಶವನ್ನು ಭಾರತ ಸದುಪಯೋಗ ಪಡಿಸಿಕೊಂಡು, ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದ ಆಕರ್ಷಕ ತಾಣವಾಗಿ ರೂಪುಗೊಳ್ಳಬೇಕು.

ಸೆಮಿಕಾನ್ ರಾಜತಾಂತ್ರಿಕತೆಯನ್ನು ಭಾರತ ತನ್ನ ವಿದೇಶೀ ನೀತಿಯಲ್ಲಿ ಅಳವಡಿಸಿಕೊಂಡು, ಆ ಮೂಲಕ ಕಾರ್ಯತಂತ್ರ ಹಾಗೂ ಆರ್ಥಿಕ ಲಾಭ ಗಳಿಸಬೇಕು.

ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ಕೈಗೊಳ್ಳುವ ಕ್ರಮಗಳು ದೇಶದ ಸಂಪೂರ್ಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.

ದೇಶೀಯವಾಗಿ ಸೆಮಿಕಂಡಕ್ಟರ್ ಉತ್ಪಾದಿಸುವುದು ವಿದೇಶೀ ವಿನಿಮಯವನ್ನು ಉಳಿಸುವುದರ ಜೊತೆಗೆ, ವಿಶೇಷವಾಗಿ ಚೀನಾದಂತಹ ರಾಷ್ಟ್ರಕ್ಕೆ ವಿದೇಶೀ ಹಣ ಪಾವತಿಯನ್ನೂ ಕಡಿತಗೊಳಿಸುತ್ತದೆ.

ಸೆಮಿಕಂಡಕ್ಟರ್ ಉದ್ಯಮ ಇತರ ಹಲವು ಉದ್ಯಮಗಳೊಡನೆ ಸಂಪರ್ಕ ಹೊಂದಿದ್ದು, ಭವಿಷ್ಯದಲ್ಲಿ ಎಲ್ಲಾ ವಿಷಯಗಳಿಗೂ ಸಹಕಾರಿಯಾಗುವಂತಹ ನೀತಿಗಳನ್ನು ಸರ್ಕಾರ ರೂಪಿಸಬೇಕಿದೆ.

ವ್ಯಾಪಾರದ ಮೂಲಕ ವಿದೇಶೀ ತಂತ್ರಜ್ಞಾನ ವಿನಿಮಯವನ್ನು ಗಳಿಸಿಕೊಂಡು, ಭಾರತದ ವಿದೇಶೀ ನೀತಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸಹಯೋಗ ಸಾಧಿಸಬೇಕು.

<strong>ಗಿರೀಶ್ ಲಿಂಗಣ್ಣ</strong>
ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com