Xiaomiಯ 5,551 ಕೋಟಿ ರೂ. ವಶಪಡಿಸಿಕೊಳ್ಳಲು FEMA ಪ್ರಾಧಿಕಾರ ಅನುಮೋದಿಸಿದೆ: ಇಡಿ
ನವದೆಹಲಿ: ಚೀನಾದ ಮೊಬೈಲ್ ಫೋನ್ ತಯಾರಕ Xiaomi ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿದ್ದ 5,551 ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕುವ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ರಚಿಸಲಾದ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಇದು ಭಾರತದಲ್ಲಿ ಇದುವರೆಗಿನ ಅತಿ ದೊಡ್ಡ ಮೊತ್ತವಾಗಿದೆ. ಫೆಮಾ ಸಕ್ಷಮ ಪ್ರಾಧಿಕಾರದ ಈ ನಿರ್ಧಾರದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಮಾಹಿತಿ ನೀಡಿದೆ.
FEMA ಕಾಯಿದೆಯಡಿ Xiaomi ಯ ಈ ಬ್ಯಾಂಕ್ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ED ಏಪ್ರಿಲ್ 29ರಂದು ಆದೇಶವನ್ನು ನೀಡಿತ್ತು. ನಂತರ ಈ ಆದೇಶವನ್ನು ಪ್ರಾಧಿಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸುವ ಫೆಮಾ ಕಾಯ್ದೆಯಡಿಯಲ್ಲಿ ಪ್ರಾಧಿಕಾರದ ಅನುಮೋದನೆಯ ಅಗತ್ಯವಿದೆ.
ಫೆಮಾ ಕಾಯ್ದೆಯ ಸೆಕ್ಷನ್ 37A ಅಡಿಯಲ್ಲಿ Xiaomi ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ತನ್ನ ಬ್ಯಾಂಕ್ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ED ಹೇಳಿಕೆಯಲ್ಲಿ ತಿಳಿಸಿದೆ. ಪ್ರಾಧಿಕಾರದ ಅನುಮೋದನೆ ಮೂಲಕ ಇದು ಭಾರತದಲ್ಲಿ ಜಪ್ತಿಯಾಗಲಿರುವ ಅತ್ಯಧಿಕ ಪ್ರಮಾಣದ ಆದೇಶವಾಗಿದೆ ಎಂದು ಇಡಿ ಹೇಳಿದೆ.
ಇಡಿ ಪ್ರಕಾರ, Xiaomi ಇಂಡಿಯಾ ಭಾರತದಿಂದ 5,551.27 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅನಧಿಕೃತವಾಗಿ ರವಾನೆ ಮಾಡಿದ ಪ್ರಕರಣದಲ್ಲಿ ಪ್ರಾಧಿಕಾರವು ಏಜೆನ್ಸಿಯ ಕ್ರಮವನ್ನು ಕಂಡುಹಿಡಿದಿದೆ. ರಾಯಧನ ಪಾವತಿಯ ಹೆಸರಿನಲ್ಲಿ ವಿದೇಶಿ ಕರೆನ್ಸಿಯನ್ನು ದೇಶದ ಹೊರಗೆ ಕಳುಹಿಸುವುದು ಫೆಮಾ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ