ಸಿಬ್ಬಂದಿಗಳಿಗೆ ವೇತನ ನೀಡಲು ಮನೆಯನ್ನೇ ಗಿರವಿ ಇಟ್ಟ ಬೈಜು ಸಂಸ್ಥಾಪಕ

ತೀವ್ರ ಕುಸಿತದಲ್ಲಿರುವ ಖ್ಯಾತ ಶೈಕ್ಷಣಿಕ ಸಂಸ್ಥೆ ಬೈಜೂಸ್ ತನ್ನ ಸಿಬ್ಬಂದಿಗಳಿಗೆ ವೇತನ ನೀಡಲು ಮಾಲೀಕರು ಮನೆಗಳನ್ನೇ ಗಿರವಿ ಇಟ್ಟಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ.
ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್
ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್
Updated on

ಮುಂಬೈ: ತೀವ್ರ ಕುಸಿತದಲ್ಲಿರುವ ಖ್ಯಾತ ಶೈಕ್ಷಣಿಕ ಸಂಸ್ಥೆ ಬೈಜೂಸ್ ತನ್ನ ಸಿಬ್ಬಂದಿಗಳಿಗೆ ವೇತನ ನೀಡಲು ಮಾಲೀಕರು ಮನೆಗಳನ್ನೇ ಗಿರವಿ ಇಟ್ಟಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ.

ಹೌದು.. ಭಾರತದ ಎಜ್ಯುಟೆಕ್ ಸಂಸ್ಥೆ ಬೈಜೂಸ್‌ನ (Byjus) ಸಂಸ್ಥಾಪಕರಾದ ಬೈಜು ರವೀಂದ್ರನ್ (Byju Raveendran) ಸಂಸ್ಥೆಯ ಉದ್ಯೋಗಿಗಳಿಗೆ ವೇತನ ನೀಡುವ ಸಲುವಾಗಿ ತಮ್ಮ ಮನೆ ಹಾಗೂ ಕುಟುಂಬ ಸದಸ್ಯರ ಮಾಲೀಕತ್ವದ ನಿವೇಶನಗಳನ್ನು ಅಡಮಾನವಿರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಪ್ರಸ್ತುತ ಬೈಜೂಸ್ ತೀವ್ರ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದ್ದು (Financial Problem) ನಗದು ಕೊರತೆಯನ್ನು ಪರಿಹರಿಸಲು ರವೀಂದ್ರನ್ ಈ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ರವೀಂದ್ರನ್ ಕುಟುಂಬ ಎರಡು ಮನೆಗಳನ್ನು ಹೊಂದಿದ್ದು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇದೆಲ್ಲರ ಒಟ್ಟು ಮೌಲ್ಯ ಅಂದಾಜು $12 ಮಿಲಿಯನ್ ಎಂಬುದಾಗಿ ತಿಳಿದುಬಂದಿದ್ದು, ಬೈಜೂಸ್‌ನಲ್ಲಿ ಉದ್ಯೋಗಿಗಳಾಗಿರುವ 15,000 ಸಿಬ್ಬಂದಿಗಳ ವೇತನಕ್ಕಾಗಿ ತಮ್ಮ ಮನೆಗಳನ್ನೇ ರವೀಂದ್ರನ್ ಅಡಮಾನವಿರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ಅವರ ಕುಟುಂಬ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಕ್ರಿಯೆಗೆ ನಿರಾಕರಿಸಿದ ರವೀಂದ್ರನ್
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಲು ರವೀಂದ್ರನ್ ನಿರಾಕರಿಸಿದ್ದು ಇನ್ನೂ ಈ ಬಗ್ಗೆ ಸಾಕಷ್ಟು ಮಾಹಿತಿ ದೊರೆಯಬೇಕಾಗಿದೆ. ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿರುವ ಬೈಜೂಸ್ ಅನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ರವೀಂದ್ರನ್ ತಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತದ ಹೆಚ್ಚು ಖ್ಯಾತ ಎಜ್ಯುಟೆಕ್ ಸ್ಟಾರ್ಟಪ್ ಎಂದೆನಿಸಿದ್ದ ಬೈಜೂಸ್ $400 ಮಿಲಿಯನ್‌ಗೆ ಮಾರಾಟವಾಗುವ ನಿರೀಕ್ಷೆಯಲ್ಲಿದೆ. ಆದರೆ ಸ್ಟಾರ್ಟಪ್ $1.2 ಶತಕೋಟಿ ಮೊತ್ತದ ಸಾಲದ ಬಡ್ಡಿ ಪಾವತಿಯನ್ನು ಮಾಡದೇ ಇರುವುದಕ್ಕಾಗಿ ಕೆಲವೊಂದು ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಬೈಜು ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ₹ 9,362 ಕೋಟಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಮೇಲೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಸರ್ಕಾರದ ಆದಾಯ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಲಾಗಿತ್ತು. ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಇಬ್ಬರೂ ಭಾರತದ ಹೊರಗೆ ಮಾಡಿದ ಮುಂಗಡ ಹಣ ರವಾನೆಗಳ ವಿರುದ್ಧ ಆಮದುಗಳ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದಾರೆ. ಭಾರತದ ಹೊರಗೆ ಮಾಡಿದ ರಫ್ತುಗಳ ಆದಾಯ ದಾಖಲೆ ಸಲ್ಲಿಸಲು ವಿಫಲವಾಗಿದ್ದಾರೆ.

ಇಷ್ಟು ಮಾತ್ರವಲ್ಲದೇ ಪ್ರಾಯೋಜಕತ್ವದ ಹಣ ಬಾಕಿ ಉಳಿಸಿಕೊಂಡಿರುವ ಸಂಬಂಧ ಕಂಪನಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯೊಂದಿಗೂ ಸಂಸ್ಥೆ ವಿವಾದದಲ್ಲಿದೆ. ಕಂಪನಿ 158 ಕೋಟಿ ರೂ. ರಾಯಲ್ಟಿ ಪಾವತಿಸಿಲ್ಲ ಎಂದು ಆರೋಪಿಸಿ ಬಿಸಿಸಿಐ ರಾಷ್ಟ್ರೀಯ ಕಂಪನಿ ನ್ಯಾಯ ಮಂಡಳಿ (ಎನ್‌ಸಿಎಲ್‌ಟಿ) ಮೊರೆ ಹೋಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com