ಭಾನುವಾರ ಒಂದೇ ದಿನ 2.7 ಮಿಲಿಯನ್ ಐಟಿ ರಿಟರ್ನ್ಸ್ ಸಲ್ಲಿಕೆ; ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ ಇದೆ.. ಆದರೆ..!

ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ

ನವದೆಹಲಿ: ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಭಾನುವಾರ ಸಂಜೆ 6:30 ರ ವೇಳೆಗೆ 1.3 ಕೋಟಿಗೂ ಹೆಚ್ಚು ಲಾಗಿನ್‌ಗಳಿಗೆ ಸಾಕ್ಷಿಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಪ್ರಕಾರ, ಭಾನುವಾರ ಸಂಜೆ 6.30 ರವರೆಗೆ ಸುಮಾರು 26.76 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಜುಲೈ 30ರವರೆಗೆ 6 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ತೆರಿಗೆ ವೃತ್ತಿಪರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ಗಡುವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರಿಂದ ಭಾನುವಾರ ರಿಟರ್ನ್ಸ್ ಸಲ್ಲಿಕೆಗೆ ನೂಕುನುಗ್ಗಲು ಕಂಡುಬಂದಿದೆ. AY 2023-24 ಗಾಗಿ ಐಟಿಆರ್ ಅನ್ನು ಸಲ್ಲಿಸದ ಎಲ್ಲರಿಗೂ, ಕೊನೆಯ ಕ್ಷಣದ ಗೊಂದಲ ತಪ್ಪಿಸಿಕೊಳ್ಳಲು ತಮ್ಮ ಐಟಿಆರ್ ಅನ್ನು ಆದಷ್ಟು ಬೇಗ ಸಲ್ಲಿಸುವಂತೆ ತೆರಿಗೆ ಇಲಾಖೆ ಭಾನುವಾರ ಸಂಜೆ ಟ್ವೀಟ್‌ ಮೂಲಕ ಒತ್ತಾಯಿಸಿದೆ.

ಆದಾಯ ತೆರಿಗೆ ವೆಬ್‌ಸೈಟ್ ಪ್ರಕಾರ, ಜುಲೈ 29 ರಂದು ಸುಮಾರು 5 ಕೋಟಿ ರಿಟರ್ನ್‌ಗಳನ್ನು ಪರಿಶೀಲಿಸಲಾಗಿದೆ, ಆದರೆ 3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಅಧ್ಯಕ್ಷ ನಿತಿನ್ ಗುಪ್ತಾ ಅವರು ಸಲ್ಲಿಸಿದವರ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದವರ ಪೈಕಿ ಸುಮಾರು 7% ಮೊದಲ ಬಾರಿಗೆ ಸಲ್ಲಿಸುವವರಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಇತ್ತೀಚಿನ ಹಣಕಾಸು ಸಚಿವಾಲಯದ ಸಲ್ಲಿಕೆ ಪ್ರಕಾರ, 2022-23ರಲ್ಲಿ 7.4 ಕೋಟಿ ತೆರಿಗೆ ಪಾವತಿದಾರರು ರಿಟರ್ನ್ಸ್ ಸಲ್ಲಿಸಿದ್ದರು. ಅದರ ಹಿಂದಿನ ವರ್ಷ ಅಂದರೆ 2021-22ರಲ್ಲಿ 6.94 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿತ್ತು. 2021-22ಕ್ಕೆ ಹೋಲಿಕೆ ಮಾಡಿದರೆ 2022-23ರಲ್ಲಿ ಐಟಿಆರ್ ಸಲ್ಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ 6.18% ಹೆಚ್ಚಳವಾಗಿದೆ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆದಿದೆ. ಈ ತಿಂಗಳ ಆರಂಭದಲ್ಲಿ ನಡೆದ ಆದಾಯ ತೆರಿಗೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಕಂಡುಬಂದ ಪ್ರಕರಣಗಳಲ್ಲಿ ಸುಮಾರು ಒಂದು ಲಕ್ಷ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು.

ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ.. ಆದರೆ..!!
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವು ಸೋಮವಾರ ಕೊನೆಗೊಳ್ಳಲಿದ್ದು, ಈ ವರ್ಷ, ಐಟಿಆರ್ ಸಲ್ಲಿಸಲು ಗಡುವನ್ನು ಕಳೆದುಕೊಂಡಿರುವ ತೆರಿಗೆದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಹಲವೆಡೆ ಭಾರೀ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡುವುದರಿಂದ, ಅನೇಕ ತೆರಿಗೆದಾರರು ಜುಲೈ 31 ರ ಮೊದಲು ITR ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. 

ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಿಸಲು ಮನವಿ
ಇನ್ನು ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.14% ಕ್ಕಿಂತ ಹೆಚ್ಚು ವೈಯಕ್ತಿಕ ಆದಾಯ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ರ ಗಡುವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿ NCR ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳಲ್ಲಿ ವೈಯಕ್ತಿಕ ತೆರಿಗೆದಾರರು ಹವಾಮಾನ ವೈಪರೀತ್ಯದಿಂದಾಗಿ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯು ನಡೆಸಿದ ಸಮೀಕ್ಷೆಯು ದೇಶಾದ್ಯಂತ 315 ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಿಕರಿಂದ 12,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಧರಿಸಿದೆ.

ಗಡುವನ್ನು ವಿಸ್ತರಿಸಲು ಕರೆಗಳು ಬಂದಿವೆ ಆದರೆ ಈ ನಿಟ್ಟಿನಲ್ಲಿ ತೆರಿಗೆದಾರರಿಗೆ ಯಾವುದೇ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. 2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ 5.03 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಜುಲೈ 27 ರವರೆಗೆ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ, ಅದರಲ್ಲಿ ಶೇ.88% ವಿದ್ಯುನ್ಮಾನವಾಗಿ ಪರಿಶೀಲಿಸಲಾಗಿದೆ. ಜುಲೈ 31, 2022 ಕ್ಕೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚಿನದಾಗಿದೆ ಏಕೆಂದರೆ ಒಂದು ವರ್ಷದ ಹಿಂದೆ 4.83 ಕೋಟಿ ರಿಟರ್ನ್ಸ್ ಸಲ್ಲಿಸಲಾಗಿದೆ.

ಗಡುವು ಮೀರಿದರೆ ಏನಾಗುತ್ತದೆ?
ಒಂದು ವೇಳೆ ಇಲಾಖೆ ನಿಗದಿಪಡಿಸಿದ ಗಡುವಿನೊಳಗೆ ನೀವು ಐಟಿ ರಿಟರ್ನ್ ಸಲ್ಲಿಸದಿದ್ದರೆ ಕೆಲ ಪ್ರಮುಖ ನಷ್ಟಗಳು ತಲೆದೋರಬಹುದು. ಉದಾಹರಣೆಗೆ ನೀವು ತಡವಾಗಿ ರಿಟರ್ನ್ ಫೈಲ್ ಮಾಡಿದಾಗ, ತೆರಿಗೆ ಬಾಕಿ ಹಣಕ್ಕೆ ಶೇ. 50ರಿಂದ ಶೇ. 200ರಷ್ಟು ಮೊತ್ತವನ್ನು ಸೇರಿಸಿ ದಂಡವಾಗಿ ಕಟ್ಟಬೇಕಾಗುತ್ತದೆ. ನೀವು 2,000 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ 1,000 ರೂನಿಂದ 4,000 ರೂವರೆಗೆ ದಂಡ ಸೇರಿಸಿ ಕಟ್ಟಬೇಕು. ಅಂದರೆ 3,000 ರೂನಿಂದ 6,000 ರೂವರೆಗೂ ನೀವು ಕಟ್ಟಬೇಕಾಗಬಹುದು. ಹಾಗೆಯೇ, ನೀವು ಡೆಡ್​ಲೈನ್ ತಪ್ಪಿಸಿದಾಗ ಕಾನೂನು ಕ್ರಮ ಜರುಗಿಸಲು ನೋಟೀಸ್ ಕೊಡಲಾಗುತ್ತದೆ.

ಏನು ಮಾಡಬೇಕು?
ಗಡುವಿನ ನಂತರವೂ ರಿಟರ್ನ್ಸ್ ಅನ್ನು ಸಲ್ಲಿಸಬಹುದು, ಆದರೆ ತೆರಿಗೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ರೂ 5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ದಂಡವು R1,000 ಆಗಿರುತ್ತದೆ ಮತ್ತು R5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಗಡುವಿನ ನಂತರ ರಿಟರ್ನ್ ಸಲ್ಲಿಸಲು ದಂಡವು R5,000 ಆಗಿದೆ. ತಡವಾಗಿ ರಿಟರ್ನ್ಸ್ ಸಲ್ಲಿಸುವುದರಿಂದ ಯಾವುದೇ ವಿಶೇಷ ಕಡಿತಕ್ಕೆ ಅನರ್ಹರಾಗುತ್ತಾರೆ.

ನೀವು ಐಟಿಆರ್ ಅನ್ನೇ ಸಲ್ಲಿಸದಿದ್ದರೆ ಏನಾಗುತ್ತದೆ?
2022-23 ರ ಹಣಕಾಸು ವರ್ಷದಲ್ಲಿ ನೀವು ಕಟ್ಟಬೇಕಿರುವ ತೆರಿಗೆ ಹಣಕ್ಕೆ ಶೇ. 200ರಷ್ಟು ದಂಡ ವಿಧಿಸಲಾಗುತ್ತದೆ. ನಿಮಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಅದನ್ನು ಬಳಸಿ ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡದೇ ಹೋದಾಗ ಈ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಜೊತೆಗೆ, ಐಟಿ ಇಲಾಖೆಯಿಂದ ಕಾನೂನು ಕ್ರಮ ಜಾರಿಗೊಳಿಸಲು ನೋಟೀಸ್ ಸ್ವೀಕರಿಸಬೇಕಾಗುತ್ತದೆ.

ಐಟಿ ರಿಟರ್ನ್ ಯಾಕೆ ಸಲ್ಲಿಸಬೇಕು?
ಕಳೆದ ಹಣಕಾಸು ವರ್ಷದಂದು (2022-23) ನಿಮ್ಮ ಒಟ್ಟಾರೆ ಎಲ್ಲಾ ಆದಾಯಗಳು, ಹೂಡಿಕೆಗಳು, ಸಾಲಗಳು ಇತ್ಯಾದಿಯನ್ನು ನೀವು ಘೋಷಿಸಲು ಐಟಿಆರ್ ಸಲ್ಲಿಸಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅಥವಾ ಹೆಚ್ಚಾಗಿ ತೆರಿಗೆ ಕಟ್ಟಿದ್ದರೆ ಅದನ್ನು ಕ್ಲೈಮ್ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ. ಐಟಿ ರಿಟರ್ನ್ ಸಲ್ಲಿಸುವುದು ಹಲವು ಕಾರಣಗಳಿಗೆ ಅಗತ್ಯ ಎನಿಸಿದೆ. ಬ್ಯಾಂಕ್ ಸಾಲದಿಂದ ಹಿಡಿದು ಹಲವು ಕಾರ್ಯಗಳಿಗೆ ಐಟಿಆರ್​ಗಳನ್ನು ಕೇಳಲಾಗುತ್ತದೆ. ನಿಮ್ಮ ಆದಾಯವು ತೆರಿಗೆ ವಿಂಗಡಣೆಯಿಂದ ಹೊರತಾಗಿದ್ದರೂ ಕೂಡ ಐಟಿಆರ್ ಸಲ್ಲಿಸಲು ಅಡ್ಡಿ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com