ನವದೆಹಲಿ: 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಕ್ರಮದ ನಂತರ ಸಾರ್ವಜನಿಕರ ಬಳಿ ಇರುವ ನಗದು ಜೂನ್ 2ರ ಹೊತ್ತಿಗೆ ಸುಮಾರು 83,242 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ಆರ್‌ಬಿಐ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜೂನ್ 2ರ ವೇಳೆಗೆ ಸಾರ್ವಜನಿಕರ ಬಳಿ ಇರುವ ಕರೆನ್ಸಿ 32.88 ಲಕ್ಷ ಕೋಟಿ ರೂ.ಗೆ ತಲುಪಿದೆ.
2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಘೋಷಿಸಿದ ನಂತರ, ಜನರು ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಬರುತ್ತಿದ್ದಾರೆ. ಬ್ಯಾಂಕ್‌ಗಳು ಮೇ 23 ರಿಂದ ಠೇವಣಿ ಮತ್ತು ವಿನಿಮಯಕ್ಕಾಗಿ 2,000 ರೂಪಾಯಿ ನೋಟುಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ.
ಬ್ಯಾಂಕುಗಳ ಪ್ರಕಾರ, ಹೆಚ್ಚಿನ ಜನರು ಈ ನೋಟುಗಳನ್ನು ಠೇವಣಿ ಮಾಡಲು ಬಯಸುತ್ತಿದ್ದಾರೆ.
ಒಟ್ಟು 2,000 ಮುಖಬೆಲೆಯ ನೋಟುಗಳಲ್ಲಿ ಶೇ 50ರಷ್ಟು 1.8 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಮರಳಿದ್ದು, ಶೇ 85 ರಷ್ಟು ನೋಟುಗಳು ಬ್ಯಾಂಕ್ ಖಾತೆಗಳಿಗೆ ಠೇವಣಿ ರೂಪದಲ್ಲಿ ವಾಪಸ್ ಬರುತ್ತಿವೆ ಎಂದು ಆರ್‌ಬಿಐ ಗವರ್ನರ್ ಜೂನ್ 8ರಂದು ತಿಳಿಸಿದ್ದಾರೆ. ಮಾರ್ಚ್ 31ರ ವರೆಗೆ 3.62 ಲಕ್ಷ ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು.
Advertisement