ಭಾರತಕ್ಕೂ ತಟ್ಟಲಿದೆ ಇಸ್ರೇಲ್‌-ಹಮಾಸ್‌ ಯುದ್ಧದ ಬಿಸಿ: ಏರಲಿದೆಯೇ ಚಿನ್ನದ ದರ?

ಹಬ್ಬ- ಹರಿದಿನ ಬಂದರೆ ಭಾರತದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನವನ್ನು ಆಭರಣ ರೂಪದಲ್ಲಿ ಖರೀದಿಸುತ್ತಾರೆ. ಇನ್ನೂ ಕೆಲವರು ಹೂಡಿಕೆಗೆ ಚಿನ್ನ ಉತ್ತಮ ಆಯ್ಕೆ ಎಂದೂ ಪರಿಗಣಿಸುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಬ್ಬ- ಹರಿದಿನ ಬಂದರೆ ಭಾರತದಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನವನ್ನು ಆಭರಣ ರೂಪದಲ್ಲಿ ಖರೀದಿಸುತ್ತಾರೆ. ಇನ್ನೂ ಕೆಲವರು ಹೂಡಿಕೆಗೆ ಚಿನ್ನ ಉತ್ತಮ ಆಯ್ಕೆ ಎಂದೂ ಪರಿಗಣಿಸುತ್ತಾರೆ.

ಅಕ್ಟೋಬರ್‌ನಲ್ಲಿ ದಸರಾ ಮತ್ತು ನವೆಂಬರ್‌ನಲ್ಲಿ ದೀಪಾವಳಿ ಬರುವುದರಿಂದ ಈ ತಿಂಗಳುಗಳನ್ನು ಮಂಗಳಕರವೆಂದು ಪರಿಗಣಿಸಿ, ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ.

ಆದರೆ, ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಭಾರತ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುತ್ತಿದ್ದು, ಚಿನ್ನದ ದರ ಗಗನಕ್ಕೇರುವ ಆತಂಕ ಶುರುವಾಗಿದೆ.

10 ಗ್ರಾಂ (24 ಕ್ಯಾರೆಟ್) ಗೆ 58,680 ರೂಪಾಯಿ ಇರುವ ಚಿನ್ನದ ಬೆಲೆ ಶೀಘ್ರದಲ್ಲೇ 70,000 ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ, ಈಗ 10 ಗ್ರಾಂಗೆ 53,000 ರೂ ದಾಟಿರುವ 22 ಕ್ಯಾರೆಟ್ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ 60,000 ರೂ.ಗೆ ಏರಬಹುದು ಎಂದು ಹೇಳಲಾಗುತ್ತಿದೆ.

ಯಾವುದೇ ಯುದ್ಧವು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುವುದು ಸಾಮಾನ್ಯ. ಯುದ್ಧದ ಪರಿಣಾಮ ಕೆಲವು ವಾರಗಳವರೆಗೆ ಇದ್ದೇ ಇರುತ್ತದೆ. ಯುದ್ಧದ ಹೊರತಾಗಿ ಯುಎಸ್‌ನಲ್ಲಿನ ಬಡ್ಡಿದರ ಹೆಚ್ಚಳವು ಹಳದಿ ಲೋಹದ ಬೆಲೆಗಳನ್ನು ಹೆಚ್ಚಿಸಿದೆ ಎಂದು ಕರ್ನಾಟಕ ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿಎ ಶರವಣ ಅವರು ಹೇಳಿದ್ದಾರೆ.

ಭಾರತದ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಸಿಎ ಸುರೇಂದ್ರ ಮೆಹ್ತಾ ಅವರು ಮಾತನಾಡಿ, ಇಸ್ರೇಲ್-ಹಮಾಸ್ ಸಂಘರ್ಷ ಪರಿಣಾಮ ಚಿನ್ನದ ಬೆಲೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು.

ರಾಜಕೀಯ ಸಮಸ್ಯೆಗಳು ಅಥವಾ ವ್ಯಾಪಾರ ಏರಿಳಿತಗಳು ಉಂಟಾದಾಗ, ಈಕ್ವಿಟಿ ಮಾರುಕಟ್ಟೆ ಕಡಿಮೆಯಾಗುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಆರ್ಥಿಕ ಏರುಪೇರುಗಳ ನಡುವೆಯೂ ಬೆಲೆ ಸ್ಥಿರವಾಗಿ ಉಳಿಯುವ ಏಕೈಕ ಸರಕು ಎಂದರೆ ಅದು ಚಿನ್ನ. ಹೀಗಾಗಿ ಹೂಡಿಕೆದಾರರು ಹಳದಿ ಲೋಹದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆಂದು ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆ.ಎಸ್.ಕೇಶವ್ ಅವರು ಮಾತನಾಡಿ, ಯುದ್ಧಗಳು ಅಥವಾ ಸಂಘರ್ಷಗಳು ಪ್ರಾರಂಭವಾದಾಗ ಜನರು ಸಾಮಾನ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದು ಪ್ರಪಂಚದಾದ್ಯಂತದ ಇರುವ ಪ್ರವೃತ್ತಿಯಾಗಿದೆ. ಯುದ್ಧವು ಉಲ್ಬಣಗೊಂಡರೆ, ಅದು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಚಿನ್ನದ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಪ್ರಸ್ತುತ ಪ್ರವೃತ್ತಿಯಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯನ್ನು ಪೂರೈಕೆ ಸಾಧ್ಯವಾಗದಿದ್ದಾಗ ಸ್ವಾಭಾವಿಕವಾಗಿ ಅದರ ಬೆಲೆಗಳು ಜಾಗತಿಕವಾಗಿ ಏರಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗ ಇದೇ ರೀತಿಯ ಪ್ರವೃತ್ತಿಯು ಚಾಲ್ತಿಯಲ್ಲಿತ್ತು. ಈ ಯುದ್ಧವು ಹಲವು ದಿನಗಳವರೆಗೆ ಮುಂದುವರಿಯುತ್ತದೆ ಎಂದು ಜನರು ನಿರೀಕ್ಷಿಸಿದ್ದರು. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿದರು. "ಆದಾಗ್ಯೂ, ಈ ಪ್ರವೃತ್ತಿಯು ಸ್ವಲ್ಪ ಮಟ್ಟಿಗೆ ಕುಸಿತವನ್ನು ಕಂಡಿತು, ಆದರೆ ಯುದ್ಧವು ನಿಲ್ಲಲಿಲ್ಲ ಎಂದು ತಿಳಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ)ಯ ಮಾಜಿ ನಿರ್ದೇಶಕ ಅರ್ಥಶಾಸ್ತ್ರಜ್ಞ ಆರ್.ಎಸ್.ದೇಶಪಾಂಡೆ ಅವರು ಮಾತನಾಡಿ, ಚಿನ್ನದ ಬೆಲೆಗಳು ಗಗನಕ್ಕೇರಲಿದೆ. ಆದರೆ, ನಂತರ ಕಡಿಮೆಯಾಗುತ್ತವೆ. ಆದರೆ ಬೆಲೆಗಳು ಕಡಿಮೆಯಾದಾಗ ಮೂಲ ಬೆಲೆಯೇ ಇರುವುದಿಲ್ಲ. ಸಾಮಾನ್ಯವಾಗಿ, ಈ ಬೆಲೆಯು ಹಿಂದಿನ (ಹಳೆಯ) ಬೆಲೆಗಳಿಗಿಂತ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com