ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದ ಎರಡು ಘಟನೆಗಳನ್ನು ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮಂಗಳವಾರ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳ ನಿಯಂತ್ರಕ ಡಿಜಿಸಿಎ ಒಂದು ವಾರದೊಳಗೆ ಎರಡನೇ ಬಾರಿ ಏರ್ ಇಂಡಿಯಾ ವಿರುದ್ಧ ಕ್ರಮ ಕೈಗೊಂಡಿದೆ.
ಡಿಜಿಸಿಎ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಡಿಸೆಂಬರ್ 6, 2022 ರಂದು ಪ್ಯಾರಿಸ್‌ನಿಂದ ನವದೆಹಲಿಗೆ ಹೊರಟಿದ್ದ ಎಐ-142 ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆಯ ಘಟನೆಗಳು ಸಂಭವಿಸಿವೆ ಎಂದು ಹೇಳಿದೆ.
ಒಬ್ಬ ಕುಡುಕ ಪ್ರಯಾಣಿಕ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದು, ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದೆ ಸಿಕ್ಕಿಬಿದ್ದಿದ್ದಾನೆ ಮತ್ತು ಇನ್ನೊಬ್ಬ ಪ್ರಯಾಣಿಕನು ಶೌಚಾಲಯಕ್ಕೆ ಹೋದಾಗ ಸಹ ಮಹಿಳಾ ಪ್ರಯಾಣಿಕರ ಖಾಲಿ ಸೀಟು ಮತ್ತು ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಡಿಜಿಸಿಎ ಹೇಳಿದೆ.
'ಈ ಎರಡು ಘಟನೆಗಳನ್ನು ಡಿಜಿಸಿಎಗೆ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾಗೆ 10,00,000 ರೂಪಾಯಿಗಳ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement