ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಬ್ಬಂದಿ ಕೊರತೆ: ವಿಸ್ತಾರ ವಿಮಾನಗಳ ಹಾರಾಟ ಭಾರಿ ವಿಳಂಬ, ಪ್ರಯಾಣಿಕರ ಪರದಾಟ!

ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿಸ್ತಾರ ವಿಮಾನಗಳ ಹಾರಾಟ ಸೋಮವಾರ ಭಾರಿ ವಿಳಂಬವಾಗಿದೆ ಮತ್ತು ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
Published on

ಬೆಂಗಳೂರು: ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿಸ್ತಾರ ವಿಮಾನಗಳ ಹಾರಾಟ ಸೋಮವಾರ ಭಾರಿ ವಿಳಂಬವಾಗಿದೆ ಮತ್ತು ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಪರದಾಡುವಂತಾಗಿದೆ.

ಬೆಂಗಳೂರು-ಅಹಮದಾಬಾದ್ ವಿಮಾನ 6.5 ಗಂಟೆಗಳ ಕಾಲ ವಿಳಂಬವಾಯಿತು. ಅನೇಕ ಪ್ರಯಾಣಿಕರು ತಮ್ಮ ಪ್ರಯಾಣವನ್ನೇ ರದ್ದುಗೊಳಿಸಬೇಕಾಯಿತು. ವಿಸ್ತಾರ ಇದೀಗ ದೇಶಾದ್ಯಂತ ಕೆಲವು ವಿಮಾನಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದಾಗಿ ಘೋಷಿಸಿದೆ.

ಯುಕೆ 574 ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 10.30ಕ್ಕೆ ಅಹಮದಾಬಾದ್‌ಗೆ ಹೊರಡಬೇಕಿತ್ತು. 2 ಗಂಟೆ, 10 ನಿಮಿಷಗಳ ಪ್ರಯಾಣದ ಅವಧಿಯ ವಿಮಾನವು ಅಂತಿಮವಾಗಿ ಆರು ಗಂಟೆ 29 ನಿಮಿಷ ವಿಳಂಬವಾಗಿ ನಿರ್ಗಮಿಸಿತು. ಅಸಮಾಧಾನಗೊಂಡ ಮತ್ತು ಕೋಪಗೊಂಡ ಪ್ರಯಾಣಿಕ, ಉದ್ಯಮಿ ಟಿ ವಿ ಮೋಹನ್‌ದಾಸ್ ಪೈ ಅವರು ಅಂತಿಮವಾಗಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು ಮತ್ತು ವಿಮಾನ ನಿಲ್ದಾಣದಿಂದ ಮನೆಗೆ ಮರಳಿದರು.

ವಿಮಾನ ಬೆಳಗ್ಗೆ 10.30 ಟೇಕಾಫ್ ಆಗಬೇಕಿತ್ತು. ಆದರೆ ಬೆಳಗ್ಗೆ 10.12 ರ ಹೊತ್ತಿಗೆ ವಿಮಾನ ಮಧ್ಯಾಹ್ನ 12 ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ನಮಗೆ sms ಬರುತ್ತದೆ. ಈ ಮಾಹಿತಿಯನ್ನು ಕನಿಷ್ಠ 45 ರಿಂದ 50 ನಿಮಿಷಗಳ ಮುಂಚಿತವಾಗಿ ತಿಳಿಸಬೇಕು. ಆದರೆ ನಂತರ 11.35ರ ಸುಮಾರಿಗೆ 2 ಗಂಟೆಗೆ ವಿಮಾನ ಹೊರಡಲಿದೆ ಎಂದು ಮಾಹಿತಿ ನೀಡಲಾಯಿತು. ವಿಸ್ತಾರ ದರವು ದುಬಾರಿಯಾಗಿದ್ದರೂ, ನಾವು ಅದನ್ನು ಅನುಸರಿಸುತ್ತೇವೆ ಏಕೆಂದರೆ ಅದು ಸಮಯಕ್ಕೆ ಹಾರುತ್ತದೆ ಎಂದು ನಾವು ನಂಬಿದ್ದೇವೆ. ನಾನು ನನ್ನ ಪ್ರವಾಸ ರದ್ದುಗೊಳಿಸಿ ಮನೆಗೆ ಬಂದೆ ಎಂದು ಮೋಹನ್ ದಾಸ್ ಪೈ ಅವರು TNIE ಗೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
'ವಿಮಾನ ಹೈಜಾಕ್' ಕುರಿತು ಫೋನ್‌ನಲ್ಲಿ ಸಂಭಾಷಣೆ: ವಿಸ್ತಾರ ವಿಮಾನದಲ್ಲಿದ್ದ ಪ್ರಯಾಣಿಕನ ಬಂಧನ

ವಿಮಾನಗಳು ವಿಳಂಬವಾಗುತ್ತವೆ. ಆದರೆ ವಿಮಾನಯಾನ ಸಂಸ್ಥೆಗಳು ವೇಳಾಪಟ್ಟಿಯಲ್ಲಿನ ಬದಲಾವಣೆಯ ಬಗ್ಗೆ ತಕ್ಷಣವೇ ಮಾಹಿತಿ ನೀಡಬೇಕು. ಇದರಿಂದ ಇತರ ಯೋಜನೆಗಳನ್ನು ಮಾಡಬಹುದು ಎಂದು ಪೈ ಹೇಳಿದ್ದಾರೆ.

ದೇಶಾದ್ಯಂತ ವಿಸ್ತಾರ ವಿಮಾನಗಳು ವಿಳಂಬವಾಗಿದ್ದು, ಹಲವು ಪ್ರಯಾಣಿಕರು ಟ್ವೀಟರ್ ಮೂಲಕ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ವಿಮಾನ ರದ್ದುಗೊಂಡಿದ್ದರ ಬಗ್ಗೆ ಹಾಗೂ ವಿಳಂಬವಾಗಿರುವ ಬಗ್ಗೆ ತಮಗೆ ಸರಿಯಾದ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಪ್ರಯಾಣಿಕರು ದೂರಿದ್ದು, ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗಮನಾರ್ಹ ಸಂಖ್ಯೆಯ ವಿಮಾನಗಳ ಪ್ರಯಾಣ ರದ್ದು ಹಾಗೂ ವಿಳಂಬವಾಗಿವೆ ಎಂದು ವಿಸ್ತಾರಾ ವಿಮಾನಯಾನ ಸಂಸ್ಥೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

"ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಇದಕ್ಕಾಗಿ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ನಮ್ಮ ತಂಡಗಳು ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿವೆ,” ಎಂದು ವಿಸ್ತಾರ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com