ಅಹಮದಾಬಾದ್: ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದ ಹೆಚ್ಚಳದ ದೃಷ್ಟಿಯಿಂದ ಸೋಮವಾರದಿಂದಲೇ ಜಾರಿಗೆ ಬರುವಂತೆ 'ಅಮುಲ್' ಬ್ರಾಂಡ್‌ನ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್ ಕಂಪನಿಯ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ.
ಇದರೊಂದಿಗೆ ದೇಶದಾದ್ಯಂತ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಹಾಲಿನ ಪ್ಯಾಕೆಟ್ ಬೆಲೆ ಲೀಟರ್ ಗೆ 2 ರೂ. ಏರಿಕೆಯಾಗಿದೆ.
ಜೂನ್ 3 ರಿಂದ ಜಾರಿಗೆ ಬರುವಂತೆ ಎಲ್ಲ ರೀತಿಯ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳನ್ನು ಹೆಚ್ಚಿಸಲಾಗಿದೆ. ರೈತರಿಗೆ ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈ ಏರಿಕೆ ಅನಿವಾರ್ಯವಾಗಿದೆ ಎಂದು ಜಿಸಿಎಂಎಂಎಫ್‌ನ ಎಂಡಿ ಜಯನ್ ಮೆಹ್ತಾ ಹೇಳಿದ್ದಾರೆ.
ಜಿಸಿಎಂಎಂಎಫ್ ಕೊನೆಯ ಬಾರಿಗೆ ಕಳೆದ ವರ್ಷ ಫೆಬ್ರುವರಿಯಲ್ಲಿ ಹಾಲಿನ ದರವನ್ನು ಹೆಚ್ಚಿಸಿತ್ತು.
ಬೆಲೆ ಏರಿಕೆಯೊಂದಿಗೆ ಅಮುಲ್‌ನ 500 ಮಿಲಿ ಎಮ್ಮೆ ಹಾಲು, 500 ಮಿಲಿ ಅಮುಲ್ ಗೋಲ್ಡ್ ಹಾಲು ಮತ್ತು 500 ಮಿಲಿ ಅಮುಲ್ ಶಕ್ತಿ ಹಾಲಿಗೆ ಪರಿಷ್ಕೃತ ಹಾಲಿನ ಬೆಲೆಗಳು ಕ್ರಮವಾಗಿ 36 ರೂ., 33 ರೂ. ಮತ್ತು 30 ರೂ. ನಷ್ಟಿದೆ.
ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಳ ಮಾಡಿರುವುದು ಎಂಆರ್‌ಪಿಯಲ್ಲಿ ಶೇ 3-4 ರಷ್ಟು ಹೆಚ್ಚಳವಾದಂತಾಗಿದೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ. 2023ರ ಫೆಬ್ರುವರಿಯಿಂದ ಅಮುಲ್ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ ಎಂದು ಜಿಸಿಎಂಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಜಿಸಿಎಂಎಂಎಫ್ ಪ್ರಕಾರ, ಅಮುಲ್ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.
ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.
Advertisement