ಗುಜರಾತ್ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಹಾಲಿನ ದರ ಲೀಟರ್‌ಗೆ 2 ರೂ. ಏರಿಸಿದ 'ಅಮುಲ್'
ಆನಂದ್: ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ತನ್ನ ಡೈರಿ ಉತ್ಪನ್ನಗಳನ್ನು 'ಅಮುಲ್' ಎನ್ನುವ ಬ್ರಾಂಡ್ ಮೂಲಕ ಮಾರಾಟ ಮಾಡುತ್ತಿದ್ದು, ಶುಕ್ರವಾರ ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿದೆ.
ಆನಂದ್ ನಗರದ ಪ್ರಧಾನ ಕಚೇರಿಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಮಾತನಾಡಿ, ಹಾಲಿನ ಬೆಲೆ ಏರಿಕೆ ಗುಜರಾತ್ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಗುಜರಾತ್ ಹೊರತುಪಡಿಸಿ ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ಇತರ ಮಾರುಕಟ್ಟೆಗಳಲ್ಲಿ ನಾವು ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದ್ದೇವೆ. ಸದ್ಯಕ್ಕೆ ಗುಜರಾತ್‌ನಲ್ಲಿ ಹಾಲಿನ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹೊಸ ಬೆಲೆಗಳು ಶುಕ್ರವಾರ ಬೆಳಿಗ್ಗೆಯಿಂದ ಜಾರಿಗೆ ಬರುತ್ತವೆ ಎಂದು ಜಿಸಿಎಂಎಂಎಫ್ ತನ್ನ ಮುಂಬೈ ಕಚೇರಿ ಮೂಲಕ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಬೆಲೆ ಏರಿಕೆಯೊಂದಿಗೆ ಅಮುಲ್ ತಾಜಾ ಹಾಲಿನ ಒಂದು ಲೀಟರ್ ಪೌಚ್ ಈಗ 54 ರೂ. ಆಗಿದ್ದು, ಒಂದು ಲೀಟರ್ ಅಮುಲ್ ಗೋಲ್ಡ್ 66 ರೂ.ಗೆ ಮಾರಾಟವಾಗಲಿದೆ. ಒಂದು ಲೀಟರ್ ಹಸುವಿನ ಹಾಲಿನ ಬೆಲೆ ಈಗ 56 ರೂ. ಆಗಿದ್ದು, ಅಮುಲ್ ಎ2 ಎಮ್ಮೆಯ ಹಾಲಿನ ಪೌಚ್ ಶುಕ್ರವಾರದಿಂದ 70 ರೂ.ಗೆ ಮಾರಾಟವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ