Industrial Output Growth: ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ.4.9ಕ್ಕೆ ಕುಸಿತ!
ನವದೆಹಲಿ: ದೇಶದಲ್ಲಿನ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಮಾರ್ಚ್ ತಿಂಗಳನಲ್ಲಿ ಶೇ.4.9ಕ್ಕೆ ಕುಸಿತವಾಗಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಶುಕ್ರವಾರ ಬಿಡುಗಡೆಯಾದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಫೆಬ್ರವರಿಯಲ್ಲಿ ಶೇ.5.7%ರಷ್ಟಿದ್ದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಪ್ರಮಾಣ ಮಾರ್ಚ್‌ನಲ್ಲಿ ಶೇ.4.9% ಕ್ಕೆ ಕುಸಿದಿದೆ.
ವಿತ್ತೀಯ ವರ್ಷ 2424 ಕ್ಕೆ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) 5.8% ರಷ್ಟು ಬೆಳೆದಿದೆ. ಇದು ಹಿಂದಿನ ವರ್ಷದಲ್ಲಿ 5.2%ರಷ್ಟಿತ್ತು. ಫೆಬ್ರವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ IIP(Index of Industrial Production) ನಲ್ಲಿನ ನಿಧಾನಗತಿಯು ಮುಖ್ಯವಾಗಿ ಗಣಿಗಾರಿಕೆ ವಲಯದಿಂದ ವರದಿಯಾಗಿದ್ದು, ಇದು ಕೇವಲ ಶೇ.1.2% ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಇದು ಫೆಬ್ರವರಿಯಲ್ಲಿ ದಾಖಲಾದ ಶೇ. 8% ರಷ್ಟು ಏರಿಕೆಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಉಳಿದಂತೆ ಉತ್ಪಾದನಾ ಕ್ಷೇತ್ರ ಶೇ.5.2% ಬೆಳವಣಿಗೆಯಾಗಿದ್ದು, ವಿದ್ಯುತ್ ಕ್ಷೇತ್ರ ಶೇ.8.6%ರಷ್ಟು ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಉತ್ಪಾದನಾ ವಲಯದಲ್ಲಿ ಮಾರ್ಚ್ 2024 ರಲ್ಲಿ IIP ಯ ಬೆಳವಣಿಗೆಗೆ ಪ್ರಮುಖ ಮೂರು ವಲಯಗಳ ಕೊಡುಗೆ ಇದ್ದು, ಈ ಪೈಕಿ ಮೆಟಲ್ (ಲೋಹ) ಶೇ.7.7%, ಫಾರ್ಮಾ, ಔಷಧೀಯ ರಾಸಾಯನಿಕ ಮತ್ತು ಸಸ್ಯಶಾಸ್ತ್ರೀಯ ಉತ್ಪನ್ನಗಳು ಶೇ.16.7%, ಮತ್ತು ಇತರ ಸಾರಿಗೆ ಉಪಕರಣಗಳು ಶೇ.25.4%ರಷ್ಟು ಕೊಡುಗೆ ನೀಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ICRAನ ಹೆಡ್ ರಿಸರ್ಚ್ ಮತ್ತು ಔಟ್ರೀಚ್ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಮಾಹಿತಿ ನೀಡಿದ್ದು, "IIP ಬೆಳವಣಿಗೆಯು ಫೆಬ್ರವರಿ 2024 ರಲ್ಲಿ ಶೇ.5.6% ರಿಂದ ಮಾರ್ಚ್ 2024 ರಲ್ಲಿ 4.9% ಗೆ ನಿರೀಕ್ಷಿತ ಕುಸಿತವನ್ನು ದಾಖಲಿಸಿದೆ. ವಿದ್ಯುಚ್ಛಕ್ತಿ ವಿಭಾಗದಲ್ಲಿ IIP ಬೆಳವಣಿಗೆ ದೃಢವಾಗಿದ್ದು, ದೇಶದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ವಿದ್ಯುಚ್ಛಕ್ತಿ ಬೇಡಿಕೆಯೂ ಹೆಚ್ಚಾಗುತ್ತಿದೆ.
ಇದರ ಹೊರತಾಗಿ ಗಣಿಗಾರಿಕೆಯ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಉತ್ಪಾದನಾ ಬೆಳವಣಿಗೆಯು ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆಯಾದರೂ ಅತ್ಯಂತ ಕಡಿಮೆಯಾಗಿದೆ. ಗ್ರಾಹಕ ಬಾಳಿಕೆ ವಸ್ತುಗಳ ಉತ್ಪಾದನೆಯು ಶೇ. 9.5% ರಷ್ಟು ಬೆಳೆದಿದ್ದು, non-durables ಕ್ಷೇತ್ರದ ಉತ್ಪಾದನಾ ಬೆಳವಣಿಗೆ ಸತತ ಎರಡು ತಿಂಗಳ ಇಳಿಕೆ ಬಳಿಕ ಧನಾತ್ಮಕವಾಗಿ ಶೇ.4.9% ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.
ಕೇರ್‌ಎಡ್ಜ್ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ರಜನಿ ಸಿನ್ಹಾ ಅವರು ಮಾತನಾಡಿ, 'ವಿತ್ತೀಯ ವರ್ಷ 2024ರಲ್ಲಿ ಬಳಕೆಯ ಸನ್ನಿವೇಶವು ಮಿಶ್ರಣವಾಗಿದ್ದು, ನಗರ ಬೇಡಿಕೆಯು ಸ್ಥಿತಿಸ್ಥಾಪಕತ್ವ ಅಥವಾ ಉಲ್ಲಾಸಶೀಲತೆ ತೋರಿಸಿದರೆ, ಗ್ರಾಮೀಣ ಬೇಡಿಕೆಯು ಹಿಂದುಳಿದಿದೆ. ಉತ್ತಮ ಮಾನ್ಸೂನ್ ನಿರೀಕ್ಷೆ, ಹಣದುಬ್ಬರ ಮಿತಗೊಳಿಸುವುದು ಮತ್ತು ಗ್ರಾಮೀಣ ಬೇಡಿಕೆಯಲ್ಲಿ ಹೆಚ್ಚಳದ ಸೂಚನೆಗಳು ಒಟ್ಟಾರೆ ಬಳಕೆಯ ಸನ್ನಿವೇಶಕ್ಕೆ ಧನಾತ್ಮಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ