ನವದೆಹಲಿ: ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಮತ್ತೊಂದು ದಾಖಲೆ ಬರೆದಿದ್ದು, ಚಿಲ್ಲರೆ ಹಣದುಬ್ಬರ 14 ತಿಂಗಳಲ್ಲೇ ಗರಿಷ್ಟ ಮಟ್ಟಕ್ಕೆ ಏರಿದ್ದು, ಆಹಾರ ಬೆಲೆಗಳ ದರ ತೀವ್ರ ಹೆಚ್ಟಳವೇ ಕಾರಣ ಎಂದು ಹೇಳಲಾಗಿದೆ.
ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಮಿತಿಯಲ್ಲಿ ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್ ತಿಂಗಳಲ್ಲಿ ಶೇಕಡ 6.21ಕ್ಕೆ ಹೆಚ್ಚಳ ಕಂಡಿದೆ. ಇದು ಕಳೆದೊಂದು ವರ್ಷದಲ್ಲೇ ಅತಿಹೆಚ್ಚಿನ ಪ್ರಮಾಣ ಎಂದು ಪರಿಗಣಿಸಲಾಗಿದೆ.
ಆಹಾರ ವಸ್ತುಗಳು ಮತ್ತು ತರಕಾರಿ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳವು ಹಣದುಬ್ಬರ ಪ್ರಮಾಣವು ಏರಿಕೆ ಕಂಡಿರುವುದಕ್ಕೆ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ ಅಂಕಿಅಂಶಗಳ ಪ್ರಕಾರ ಆಹಾರ ವಸ್ತುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 10.87ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಇದು ಶೇ 9.24ರಷ್ಟಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 6.61ರಷ್ಟಿತ್ತು.
ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 5.49ಕ್ಕೆ ಹೆಚ್ಚಳ ಕಂಡಿತ್ತು. ಆಗಸ್ಟ್‌ನಲ್ಲಿ ಶೇ 3.65ರಷ್ಟು ಹಾಗೂ ಜುಲೈನಲ್ಲಿ ಶೇ 3.6ರಷ್ಟು ಇತ್ತು. ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 5.02ರಷ್ಟಿದ್ದು, ಅಕ್ಟೋಬರ್‌ನಲ್ಲಿ ಶೇಕಡ 4.87ರಷ್ಟಿತ್ತು.
ಮಸುಕಾದ ಬಡ್ಡಿದರ ಕಡಿತ ಭರವಸೆ
ಇನ್ನು ಹಣದುಬ್ಬರ ಏರಿಕೆಯಿಂದಾಗಿ ಮುಂದಿನ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಡ್ಡಿದರ ಕಡಿತದ ನಿರೀಕ್ಷೆಗಳನ್ನು ಮೊಟಕುಗೊಳಿಸಿದೆ. ಹೆಚ್ಚುತ್ತಿರುವ ಆಹಾರ ಬೆಲೆಗಳು, ವಿಶೇಷವಾಗಿ ತರಕಾರಿ ವಲಯದಲ್ಲಿ ಮಧ್ಯಮ-ಆದಾಯದ ಕುಟುಂಬಗಳ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿದೆ. ಇದು ಕಾರ್ಪೊರೇಟ್ ಗಳಿಕೆಯನ್ನು ಕುಂಠಿತಗೊಳಿಸಿದೆ ಮತ್ತು ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಒತ್ತಡ ಹೇರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಅಂದಹಾಗೆ ಆರ್‌ಬಿಐ 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.2 ಎಂದು ಅಂದಾಜಿಸಿದೆ. ಆದಾಗ್ಯೂ, ಖಾಸಗಿ ಅರ್ಥಶಾಸ್ತ್ರಜ್ಞರು ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ನಗರ ಬಳಕೆ ದುರ್ಬಲಗೊಳ್ಳುವ ಲಕ್ಷಣಗಳನ್ನು ಉಲ್ಲೇಖಿಸಿದ್ದಾರೆ.
Advertisement