ಮುಂಬೈ: ವಾರದ ಮೊದಲೆರಡು ದಿನದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ್ದ ಭಾರತೀಯ ಷೇರು ಮಾರುಕಟ್ಟೆ ಬುಧವಾರ ಕುಸಿತ ದಾಖಲಿಸಿದ್ದು, ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಇಳಿಕೆ ಕಂಡಿದೆ.
ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು. ಅಂತೆಯೇ NSE Nifty ಕೂಡ 25,034.00 ಅಂಕಗಳೊಂದಿಗೆ ದಿನದ ವಹಿವಾಟು ಆರಂಭಿಸಿ 122.65 ಅಂಕಗಳ ಇಳಿಕೆಯೊಂದಿಗೆ 25,113.70 ಅಂಕಗಳಿಗೆ ಕುಸಿದಿದೆ.
ಇಂದು (ಬುಧವಾರ) ಸೆನ್ಸೆಕ್ಸ್ 398.13 ಅಂಕ ನಷ್ಟ ಅನುಭವಿಸಿದ್ದು, ದೇಶದ ಪ್ರಮುಖ ಸಂಸ್ಥೆಗಳ ಷೇರುಮೌಲ್ಯ ಕುಸಿತಕಂಡಿದೆ. ಪ್ರಮುಖವಾಗಿ ಟಾಟಾ ಮೋಟಾರ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಕುಸಿತ ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು, ಆ ಸಂಸ್ಥೆಯ ಷೇರುಮೌಲ್ಯ 6 ಪ್ರತಿಶತದಷ್ಟು ಕುಸಿದಿದೆ.
ಉಳಿದಂತೆ NTPC, ಅದಾನಿ ಪೋರ್ಟ್ಸ್, ಲಾರ್ಸೆನ್ & ಟೂಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, JSW ಸ್ಟೀಲ್, ಮಹೀಂದ್ರ ಮತ್ತು ಮಹೀಂದ್ರಾ, ಇಂಡಸ್ಇಂಡ್ ಬ್ಯಾಂಕ್ ಮತ್ತು ಟೈಟಾನ್ ಸಂಸ್ಥೆಗಳ ಷೇರುಮೌಲ್ಯ ಕುಸಿದಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳ ಷೇರುಗಳು ಲಾಭ ಗಳಿಸಿವೆ.
Advertisement