
ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಏರಿಳಿತದಿಂದಾಗಿ ಸತತ ಐದು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನ ಇದೀಗ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ 10 ಗ್ರಾಂಗೆ 1,350 ರೂ.ಗಳಷ್ಟು ಕಡಿಮೆಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಗುರುವಾರ ಶೇ 99.9 ರಷ್ಟು ಶುದ್ಧ ಚಿನ್ನ 200 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 94,350 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.
ಐದು ದಿನಗಳ ಸತತ ಏರಿಕೆ ಕಂಡಿದ್ದ ಶೇ 99.5 ರಷ್ಟು ಶುದ್ಧ ಚಿನ್ನದ ಬೆಲೆ 1,350 ರೂ.ಗಳಷ್ಟು ಕುಸಿತ ಕಂಡಿದ್ದು, 10 ಗ್ರಾಂಗೆ 92,550 ರೂ.ಗಳಷ್ಟಿದೆ. ಹಿಂದಿನ ದಿನ 10 ಗ್ರಾಂಗೆ 93,900 ರೂ.ಗಳಷ್ಟಿತ್ತು.
'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿ ತನ್ನ ಪಾಲುದಾರ 60 ರಾಷ್ಟ್ರಗಳ ಮೇಲೆ ಪ್ರತಿ ಸುಂಕವನ್ನು ಜಾರಿಗೆ ತಂದ ನಂತರ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕುಸಿತವಾಗಿದೆ'.
'ಹೂಡಿಕೆದಾರರು ಈಗ ಜಾಗತಿಕ ವ್ಯಾಪಾರ ಚಲನಶೀಲತೆ ಮತ್ತು ಬೆಳವಣಿಗೆಯ ಮೇಲೆ ಅವು ಬೀರಬಹುದಾದ ಸಂಭಾವ್ಯ ಆರ್ಥಿಕ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ' ಎಂದು ಅಬಾನ್ಸ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ತಾ ಹೇಳಿದರು.
ಬೆಳ್ಳಿ ಬೆಲೆಯಲ್ಲೂ ಇಳಿಕೆ
ಬೆಳ್ಳಿ ಬೆಲೆಯಲ್ಲೂ 5,000 ರೂ.ಗಳಷ್ಟು ಇಳಿಕೆ ಕಂಡಿದ್ದು, ನಾಲ್ಕು ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದ್ದು, ಪ್ರತಿ ಕೆಜಿಗೆ 95,500 ರೂ.ಗಳಷ್ಟಿದೆ. ಹಿಂದಿನ ದಿನ ಪ್ರತಿ ಕೆಜಿಗೆ 1,00,500 ರೂ.ಗಳಷ್ಟಿತ್ತು.
'ಚಿನ್ನದ ಬೆಲೆ ಒಂದು ವಾರದ ಕನಿಷ್ಠ ಮಟ್ಟಕ್ಕೆ ಇಳಿದರೆ, ಬೆಳ್ಳಿ ಐದು ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಪತ್ರಿಕಾಗೋಷ್ಠಿಯ ಸಮಯದಲ್ಲಿ ಆರಂಭದಲ್ಲಿ ಎರಡೂ ಲೋಹಗಳು ವೇಗವನ್ನು ಪಡೆದಿದ್ದರೂ, ನಂತರ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಉಂಟಾದ ತಲ್ಲಣಗಳಿಂದಾಗಿ ಕುಸಿತ ಕಂಡಿವೆ' ಎಂದು ಮೆಹ್ತಾ ಈಕ್ವಿಟೀಸ್‌ನ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ಹೇಳಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 21.74 ಡಾಲರ್ ಅಥವಾ ಶೇ 0.70 ರಷ್ಟು ಇಳಿಕೆಯಾಗಿ 3,093.60 ಡಾಲರ್‌ಗೆ ತಲುಪಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಸ್ಪಾಟ್ ಬೆಳ್ಳಿ ಬೆಲೆ ಶೇ 1.69ರಷ್ಟು ಕುಸಿದು ಪ್ರತಿ ಔನ್ಸ್‌ಗೆ 31.32 ಡಾಲರ್‌ಗೆ ತಲುಪಿದೆ.
Advertisement