
ಭಾನುವಾರದಂದು ಉದ್ಯೋಗಿಗಳು ಕೆಲಸ ಮಾಡುವ ಬಗ್ಗೆ ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಟೀಕಿಸಿದ್ದಾರೆ. ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ ನಾವು ಮಾಡುವ ಕೆಲಸದ ಗುಣಮಟ್ಟ ಮುಖ್ಯ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಹೇಳಿಕೆಗೆ ಧ್ವನಿಯಾಗಿದ್ದಾರೆ. 'ಹೌದು (ಆನಂದ್ ಮಹೀಂದ್ರಾ), ನನ್ನ ಹೆಂಡತಿ (ನತಾಶಾ ಪೂನಾವಾಲಾ) ಕೂಡ ನಾನು ಅದ್ಭುತ ಎಂದು ಭಾವಿಸುತ್ತಾಳೆ. ಅವಳು ಭಾನುವಾರದಂದು ನನ್ನನ್ನು ದಿಟ್ಟಿಸಿ ನೋಡುವುದನ್ನು ಇಷ್ಟಪಡುತ್ತಾಳೆ. ಎಷ್ಟು ಕೆಲಸ ಮಾಡುತ್ತೇವೆ ಎಂಬುದಕ್ಕಿಂತ ಕೆಲಸದ ಗುಣಮಟ್ಟ ಯಾವಾಗಲೂ ಮೇಲಿರುತ್ತದೆ. ಕೆಲಸ ಮತ್ತು ಜೀವನದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ' ಎಂದಿದ್ದಾರೆ.
ಸುಬ್ರಮಣ್ಯನ್ ಅವರ ಹೇಳಿಕೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರ, ವಾರದಲ್ಲಿ 48, 70 ಅಥವಾ 90 ಗಂಟೆಗಳು ಕೆಲಸ ಮಾಡುವುದು ಮುಖ್ಯವಲ್ಲ, ಬದಲಿಗೆ ಕೆಲಸದಿಂದ ಬರುವ ಔಟ್‌ಪುಟ್ ಮುಖ್ಯವಾಗಿರುತ್ತದೆ. 'ನನ್ನ ಹೆಂಡತಿ ಅದ್ಭುತವಾಗಿದ್ದಾಳೆ, ನಾನು ಆಕೆಯನ್ನು ನೋಡುವುದನ್ನು ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ.
ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಇತ್ತೀಚೆಗಷ್ಟೇ, ಸ್ಪರ್ಧಾತ್ಮಕವಾಗಿ ಉಳಿಯಲು ನೌಕರರು ಭಾನುವಾರದಂದು ಸಹ ಕೆಲಸ ಮಾಡಬೇಕು. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರಗಳಂದು ನಿಮ್ಮನ್ನು ಕೆಲಸಕ್ಕೆ ತೊಡಗಿಸದಿರುವುದಕ್ಕೆ ವಿಷಾದವಿದೆ. ಭಾನುವಾರದಂದೂ ನೀವು ಕೆಲಸ ಮಾಡುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಕೂಡ ಭಾನುವಾರಗಳಂದು ಕೆಲಸ ಮಾಡುತ್ತೇನೆ. ಭಾನುವಾರ ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಸಮಯ ನಿಮ್ಮ ಹೆಂಡತಿಯನ್ನೇ ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸ ಮಾಡಿ ಎಂದು ನೌಕರರಿಗೆ ಕರೆ ನೀಡಿದ್ದರು.
ಸುಬ್ರಹ್ಮಣ್ಯನ್ ಅವರ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. RPG ಗ್ರೂಪ್ ಚೇರ್ಮನ್ ಹರ್ಷ್ ಗೋಯೆಂಕಾ ಸೇರಿದಂತೆ ಇತರರು ಈ ಹೇಳಿಕೆಗಳನ್ನು ಟೀಕಿಸಿದರು. ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡ ಸುಬ್ರಹ್ಮಣ್ಯನ್ ಅವರ ಹೇಳಿಕೆಗಳನ್ನು 'ಸ್ತ್ರೀದ್ವೇಷಿ' ಎಂದು ಕರೆದ ಅವರು, ಒಬ್ಬರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದನ್ನು ಏಕೆ ಸಮಸ್ಯೆಯಾಗಿ ನೋಡಬೇಕು. ಅವರು ತನ್ನ ಹೆಂಡತಿಯನ್ನು ಏಕೆ ನೋಡಬಾರದು... ಮತ್ತು ಭಾನುವಾರ ಮಾತ್ರ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸುಬ್ರಹ್ಮಣ್ಯನ್ ಅವರ ಹೇಳಿಕೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ವಿರೋಧ ವ್ಯಕ್ತಪಡಿಸಿದ್ದು, ಉನ್ನತ ಸ್ಥಾನದಲ್ಲಿರುವವರಿಂದ ಈ ರೀತಿಯ ಹೇಳಿಕೆಗಳು ಬರುವುದು 'ಆಘಾತಕಾರಿ' ಎಂದು ಕರೆದಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಈ ಹಿಂದೆ ನೌಕರರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂದಿದ್ದರು.
Advertisement