
ನವದೆಹಲಿ: ಜಾಗತಿಕ ವಿದ್ಯುತ್ ಚಾಲಿತ ವಾಹನ ದೈತ್ಯ ಟೆಸ್ಲಾ, ಭಾರತದಲ್ಲಿ ಕಾರುಗಳನ್ನು ಉತ್ಪಾದಿಸಲು ಆಸಕ್ತಿ ಹೊಂದಿಲ್ಲ. ಆದರೆ ದೇಶದಲ್ಲಿ ಶೋ ರೂಂಗಳನ್ನು ಆರಂಭಿಸಲು ಉತ್ಸುಕವಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಟೆಸ್ಲಾ ಕಂಪನಿಯು ಸುಂಕ ತಪ್ಪಿಸಲು ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದರೆ, ಅದು ಅಮೆರಿಕಕ್ಕೆ "ಅನ್ಯಾಯ" ಮಾಡಿದಂತೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
"ಟೆಸ್ಲಾ ಕಂಪನಿ ಭಾರತದಲ್ಲಿ ಶೋ ರೂಂಗಳನ್ನು ಪ್ರಾರಂಭಿಸಲು ಮಾತ್ರ ಹೆಚ್ಚು(ಆಸಕ್ತಿ) ಹೊಂದಿದೆ. ಅವರು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಆಸಕ್ತಿ ಹೊಂದಿಲ್ಲ" ಎಂದು ಕುಮಾರಸ್ವಾಮಿ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಉತ್ತೇಜಿಸುವ ಯೋಜನೆಯ ಮಾರ್ಗಸೂಚಿಗಳನ್ನು ಅನಾವರಣಗೊಳಿಸುವುದಾಗಿ ಘೋಷಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
"ಇಲ್ಲಿಯವರೆಗೆ ಅವರು(ಟೆಸ್ಲಾ) ಆಸಕ್ತಿ ತೋರಿಸಿಲ್ಲ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಾಗಿ ಟೆಸ್ಲಾ ಪ್ರತಿನಿಧಿಯು ಮೊದಲ ಸುತ್ತಿನ ಪಾಲುದಾರರ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ಕಂಪನಿಯ ಪ್ರತಿನಿಧಿಯು ಪಾಲುದಾರರ ಎರಡನೇ ಮತ್ತು ಮೂರನೇ ಸುತ್ತಿನ ಚರ್ಚೆಗಳಲ್ಲಿ ಭಾಗವಹಿಸಿಲ್ಲ" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
Advertisement