
ಮುಂಬೈ: ಅಮೆರಿಕದ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ, ದೇಶದಲ್ಲಿ ತನ್ನ ಮೊದಲ ಶೋರೂಂ ಅನ್ನು ಸ್ಥಾಪಿಸಲು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿನ 4,000 ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದಿದೆ ಎಂದು ಬುಧವಾರ ತಿಳಿದುಬಂದಿದೆ.
ಸಿಆರ್‌ಇ ಮ್ಯಾಟ್ರಿಕ್ಸ್ ಹಂಚಿಕೊಂಡ ದಾಖಲೆಗಳ ಪ್ರಕಾರ, ಎಲಾನ್ ಮಸ್ಕ್ ಅವರ ಕಂಪನಿಯು ಪಾರ್ಕಿಂಗ್ ಸ್ಥಳವನ್ನೂ ಒಳಗೊಂಡಿರುವ ಜಾಗಕ್ಕೆ ತಿಂಗಳಿಗೆ 35 ಲಕ್ಷ ರೂ.ಗಳಿಗೂ ಹೆಚ್ಚು ಬಾಡಿಗೆ ಪಾವತಿಸಲಿದೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಎಲಾನ್ ಮಸ್ಕ್ ಅವರು ಇತ್ತೀಚೆಗಷ್ಟೇ ಅಮೆರಿಕದಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೇ ವಿದ್ಯುತ್‌ಚಾಲಿತ ಕಾರು ತಯಾರಿಕಾ ಕಂಪನಿ ಟೆಸ್ಲಾ, ಭಾರತದಲ್ಲಿ ವ್ಯವಹಾರ ಕಾರ್ಯಾಚರಣೆಯ ವಿಶ್ಲೇಷಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ತನ್ನ ವೆಬ್‌ಸೈಟಿನಲ್ಲಿ ಅರ್ಜಿ ಆಹ್ವಾನಿಸಿತ್ತು.
ಮೇಕರ್ ಮ್ಯಾಕ್ಸಿಟಿಯಲ್ಲಿನ ಈ ಜಾಗವನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗಿದ್ದು, ಮಾಸಿಕ ಬಾಡಿಗೆಯು ತಿಂಗಳಿಗೆ ಸುಮಾರು 43 ಲಕ್ಷ ರೂ.ಗಳಿಗೆ ಏರಲಿದ್ದು, ವರ್ಷಕ್ಕೆ ಶೇ 5 ರಷ್ಟು ಬಾಡಿಗೆ ಹೆಚ್ಚಳವಾಗಲಿದೆ ಎಂದು ದಾಖಲೆಗಳು ತಿಳಿಸಿವೆ.
ನೆಲ ಮಹಡಿಯಲ್ಲಿರುವ ಈ ಜಾಗವು ಭಾರತದ ಮೊದಲ ಆ್ಯಪಲ್ ಸ್ಟೋರ್‌ಗೆ ಬಹಳ ಹತ್ತಿರದಲ್ಲಿದೆ ಮತ್ತು ಇದನ್ನು ಯೂನಿವ್ಕೊ ಪ್ರಾಪರ್ಟೀಸ್‌ನಿಂದ ಗುತ್ತಿಗೆಗೆ ಪಡೆಯಲಾಗಿದೆ. ಯೂನಿವ್ಕೊ ಮತ್ತು ಪುಣೆಯಲ್ಲಿ ಕಚೇರಿ ಹೊಂದಿರುವ ಟೆಸ್ಲಾದ ನಡುವೆ ಫೆಬ್ರುವರಿ 27 ರಂದು ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರತಿ ಚದರ ಅಡಿಗೆ ಮಾಸಿಕ ಬಾಡಿಗೆ 881 ರೂ.ಗಳಾಗಿದ್ದು, 2.11 ಕೋಟಿ ರೂ. ಗಳ ಭದ್ರತಾ ಠೇವಣಿಯನ್ನು ಪಾವತಿಸಲಾಗಿದೆ ಎಂದು ದಾಖಲೆಗಳು ತಿಳಿಸಿವೆ.
Advertisement