
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಜಾಗತಿಕ ಟೆಕ್ ದೈತ್ಯ ಸಂಸ್ಥೆ Microsoft ತನ್ನ 2ನೇ ಅತೀ ದೊಡ್ಡ ವಜಾ ಪ್ರಕ್ರಿಯೆ ನಡೆಸಿದ್ದು, 6 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.
ಹೌದು.. ಕೃತಕ ಬುದ್ದಿಮತ್ತೆ ಅಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ನಂತಹ ಹೊಸ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿರುವ ಮೈಕ್ರೋಸಾಫ್ಟ್ ಬರೋಬ್ಬರಿ 6000 ಜನ ಉದ್ಯೋಗಿಗಳನ್ನು ಕಂಪನಿ ಕೈಬಿಟ್ಟಿರುವುದಾಗಿ ತಿಳಿಸಿದೆ.
'ಕ್ರಿಯಾತ್ಮಕ ಮಾರುಕಟ್ಟೆಯಲ್ಲಿ ಯಶಸ್ಸಿಗೆ ಕಂಪನಿಯನ್ನು ಉತ್ತಮವಾಗಿ ಇರಿಸಲು ಅಗತ್ಯವಾದ ಸಾಂಸ್ಥಿಕ ಬದಲಾವಣೆಗಳನ್ನು ನಾವು ಜಾರಿಗೆ ತರುವುದನ್ನು ಮುಂದುವರಿಸುತ್ತೇವೆ. ನಿರ್ವಹಣಾ ಮಟ್ಟವನ್ನು ಕಡಿಮೆ ಮಾಡುವತ್ತ ಸಂಸ್ಥೆ ಗಮನಹರಿಸುತ್ತದೆ ಎಂದು ಮೈಕ್ರೋಸಾಫ್ಟ್ ವಕ್ತಾರರು ಸಿಎನ್‌ಬಿಸಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ 2 ಲಕ್ಷದ 28 ಸಾವಿರ ಉದ್ಯೋಗಿಗಳನ್ನು ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆ ಈ ಪೈಕಿ ಶೇ.3ರಷ್ಟು ಸಿಬ್ಬಂದಿಗಳು ಅಂದರೆ ಸುಮಾರು 6 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂತೆಯೇ ಈಗ ವಜಾಗೊಳಿಸಿರುವ 6000 ಉದ್ಯೋಗಿಗಳ ಪೈಕಿ ಅಮೆರಿಕದ ವಾಷಿಂಗ್ಟನ್ ವೊಂದರಲ್ಲೇ ಗರಿಷ್ಠ ಅಂದರೆ 1,985 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಜಾಗೊಳಿಸಿದ ನೌಕರರು ವಜಾಗೊಳಿಸಿದ ನಂತರದ 60 ದಿನಗಳವರೆಗೆ ವೇತನದಾರರ ಪಟ್ಟಿಯಲ್ಲಿ ಉಳಿಯುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ವಜಾಗೊಂಡ ಸಿಬ್ಬಂದಿ ಬಹುಮಾನಗಳು ಮತ್ತು ಬೋನಸ್‌ಗಳಿಗೆ ಅರ್ಹರಾಗಿರುತ್ತಾರೆ ಎಂದು ವರದಿಯಾಗಿದೆ.
2ನೇ ಅತೀದೊಡ್ಡ ವಜಾ ಪ್ರಕ್ರಿಯೆ
ಇನ್ನು ಮೈಕ್ರೋಸಾಫ್ಟ್ ಸಂಸ್ಥೆ 2ನೇ ಬಾರಿಗೆ ಅತೀದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಗಳ ವಜಾ ಪ್ರಕ್ರಿಯೆ ನಡೆಸಿದೆ. ಈ ಹಿಂದೆ 2023ರಲ್ಲಿ ಜಗತ್ತಿನಾದ್ಯತ ಸುಮಾರು 10 ಸಾವಿರ ಸಿಬ್ಬಂದಿಗಳನ್ನು ವಜಾಗೊಳಿಸಿತ್ತು.
ಉತ್ತಮ ವಹಿವಾಟು
ಮೈಕ್ರೋಸಾಫ್ಟ್ ಎರಡು ವಾರಗಳ ಹಿಂದೆ ಜನವರಿಯಿಂದ ಮಾರ್ಚ್ ಅವಧಿಯ ದೃಢವಾದ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತ್ತು. ಇದು ತನ್ನ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ವ್ಯವಹಾರಗಳಲ್ಲಿ ಬಲವಾದ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ ಎಂದು ಹೇಳಿತ್ತು.
ಆದರೆ ಇದೀಗ ಸಂಸ್ಥೆಯ ವಜಾಗೊಳಿಸುವಿಕೆಯು ಎಲ್ಲಾ ಹಂತಗಳು ಮತ್ತು ಭೌಗೋಳಿಕ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
Advertisement