Gold Rate: ಅಮೆರಿಕ-ಚೀನಾ ಉದ್ವಿಗ್ನತೆ ಶಮನ? ಚಿನ್ನದ ಬೆಲೆ ಭಾರಿ ಇಳಿಕೆ; ಇಂದಿನ ದರ ಹೀಗಿದೆ...
ಮುಂಬೈ: ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾದ ಕಾರಣ ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ.
ಹೌದು.. ಇತ್ತೀಚಿನ ದಿನಗಳಲ್ಲಿ ಗಗನಕ್ಕೇರಿದ್ದ ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹದ ದರದಲ್ಲಿ ಇದೀಗ ಭಾರಿ ಇಳಿಕೆ ಕಂಡುಬಂದಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಔನ್ಸ್‌ಗೆ $4,000 ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಚಿನ್ನದ ದರ ಇಳಿಕೆಗೆ ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆಗಳು ಕಡಿಮೆಯಾಗಿರುವುದು ಕಾರಣ ಎಂದು ಹೇಳಲಾಗಿದೆ.
ಮಂಗಳವಾರ ಚಿನ್ನ ಮತ್ತಷ್ಟು ಕುಸಿದಿದ್ದು, ಸುರಕ್ಷಿತ ತಾಣದ ಬೇಡಿಕೆ ಕಡಿಮೆಯಾಗಿದ್ದರಿಂದ ನಷ್ಟ ಹೆಚ್ಚಾಗಿದೆ. ಮಾರಾಟ ಚುರುಕುಗೊಂಡು ಹಳದಿ ಲೋಹದ ಬೆಲೆಗಳು ಮೂರು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದವು ಎನ್ನಲಾಗಿದೆ.
ಬರೊಬ್ಬರಿ 4100 ರೂ ಇಳಿಕೆ
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಇಂದು ಚಿನ್ನದ ದರದಲ್ಲಿ ಬರೊಬ್ಬರಿ 4100 ರೂ ಇಳಿಕೆಯಾಗಿದೆ. ಅಂದರೆ ಪ್ರತೀ 10 ಗ್ರಾಂ ಚಿನ್ನದ ದರಲ್ಲಿ 4100 ರೂ ಇಳಿಕೆಯಾಗಿ 1,21,800 ರೂ.ಗಳಿಗೆ ತಲುಪಿದೆ. ಸೋಮವಾರ ಈ ದರವು ಮಾರುಕಟ್ಟೆ ಮುಕ್ತಾಯದ ವೇಳೆಗೆ ಪ್ರತೀ 10 ಗ್ರಾಂಗೆ 1,25,900 ರೂ.ಗಳಷ್ಟಿತ್ತು.
ಉಳಿದಂತೆ ಸ್ಥಳೀಯ ಬುಲಿಯನ್ ಮಾರುಕಟ್ಟೆಯಲ್ಲಿ, ಶೇಕಡಾ 99.5 ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 4,100 ರೂ.ಗಳಷ್ಟು ಕುಸಿದು 1,21,200 ರೂ.ಗಳಿಗೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ).
'4,000 ಡಾಲರ್‌ಗಿಂತ ಹೆಚ್ಚಿನ ಮಾನಸಿಕ ಮಿತಿಯನ್ನು ಕಾಯ್ದುಕೊಳ್ಳುವಲ್ಲಿ ದಿನದೊಳಗೆ ವಿಫಲವಾದ ನಂತರ ಸಂಭವಿಸಿದ ತಾಂತ್ರಿಕ ಮಾರಾಟದಿಂದಾಗಿ ಈ ಕುಸಿತ ಸಂಭವಿಸಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ
ಮಂಗಳವಾರ ಬೆಳ್ಳಿ ಬೆಲೆಗಳಲ್ಲೂ ಭಾರಿ ಇಳಿಕೆಯಾಗಿದ್ದು, ಪ್ರತಿ ಕಿಲೋಗ್ರಾಂ ಬೆಳ್ಳಿ ಬೆಲೆಯಲ್ಲಿ 6,250 ರೂ.ಗಳಷ್ಟು ಕುಸಿತ ಕಂಡು 1,45,000 ರೂ.ಗಳಿಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ತೀವ್ರವಾಗಿ ಕುಸಿದಿದೆ. ಸೋಮವಾರ ಬಿಳಿ ಲೋಹದ ದರವು ಪ್ರತಿ ಕೆಜಿಗೆ 1,51,250 ರೂ.ಗಳಷ್ಟಿತ್ತು.


