

ಬೆಂಗಳೂರು: ಸ್ವಂತ ಮನೆ ಕನಸು ಎಲ್ಲರಿಗೂ ಇರುತ್ತದೆ. ಆದರೆ ಮನೆ ಕಟ್ಟಲು ಸಾಲ ಮಾಡಲೇಬೇಕಾದ ಪರಿಸ್ಥಿತಿ ಇರುತ್ತದೆ. ಬ್ಯಾಂಕ್ ನಿಂದ ಹೋಮ್ ಲೋನ್ ತೆಗೆದುಕೊಂಡು ಮನೆ ಕಟ್ಟುವಾಗ ಸ್ವಲ್ಪ ಯೋಜನೆ ಮಾಡಿದರೆ ಲಕ್ಷಾಂತರ ರೂಪಾಯಿ ಉಳಿಸಬಹುದು. ಯಾಕೆಂದ್ರೆ, ಗಡಿಬಿಡಿಯಲ್ಲಿ ನಿರ್ಧಾರ ತೆಗೆದುಕೊಂಡರೆ ನಂತರ EMI ಕಟ್ಟಲು ಕಷ್ಟವಾಗುತ್ತದೆ. ಮನೆ ಕಟ್ಟುವ ಮುನ್ನ ಈ ಟಿಪ್ಸ್ ಗಳನ್ನು ಫಾಲೋ ಮಾಡಿ:
ಕ್ರೆಡಿಟ್ ಸ್ಕೋರ್ ಪರಿಶೀಲನೆ ಅತ್ಯಗತ್ಯ
ಬ್ಯಾಂಕ್‌ಗಳು ನಿಮಗೆ ಸಾಲ ನೀಡುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತವೆ. ಕೇವಲ ಶೇ. 0.5 ರಷ್ಟು ಬಡ್ಡಿ ದರ ಕಡಿಮೆಯಾದರೂ ದೀರ್ಘಾವಧಿಯಲ್ಲಿ ಅದು ಲಕ್ಷಾಂತರ ರೂಪಾಯಿ ಉಳಿತಾಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಾಲಕ್ಕೆ ಅರ್ಜಿ ಸಲ್ಲಿಸುವ ಕನಿಷ್ಠ ಆರು ತಿಂಗಳ ಮುಂಚೆಯೇ ನಿಮ್ಮ ಹಳೆಯ ಸಾಲಗಳನ್ನು ತೀರಿಸಿ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇಟ್ಟುಕೊಳ್ಳಿ.
ಬಜೆಟ್ ಮತ್ತು ವಿನ್ಯಾಸ ಮೊದಲೇ ಫೈನಲ್ ಮಾಡಿ
ಮನೆ ಕಟ್ಟುವ ಮೊದಲು ಎಷ್ಟು ಅಡಿ ಮನೆ ಬೇಕು, ಎಷ್ಟು ಕೋಣೆ ಬೇಕು ಎಂದು ಪ್ಲಾನ್ ಮಾಡಿ. ನಂತರದಲ್ಲಿ ವಿನ್ಯಾಸ ಬದಲಾಯಿಸಿದರೆ ಸಿಮೆಂಟ್, ಕಬ್ಬಿಣ ಮತ್ತು ಕೆಲಸಗಾರರ ವೆಚ್ಚ ಹೆಚ್ಚಾಗುತ್ತದೆ. ಒಮ್ಮೆ ಪ್ಲಾನ್ ಫೈನಲ್ ಮಾಡಿದ ನಂತರ ಅದರಂತೆನೇ ಕೆಲಸ ಮಾಡಿಸಿ. ಇದು 10 ರಿಂದ 15 ಪ್ರತಿಶತ ಖರ್ಚು ಕಡಿಮೆ ಮಾಡುತ್ತದೆ.
ಸರಿಯಾದ ಸಮಯದಲ್ಲಿ ಸಾಲ ತೆಗೋಳ್ಳಿ
ಬಡ್ಡಿ ದರ ಕಡಿಮೆ ಇರುವಾಗ ಹೋಮ್ ಲೋನ್ ತೆಗೆದುಕೊಳ್ಳಿ. ವಿವಿಧ ಬ್ಯಾಂಕ್ ಗಳ ಬಡ್ಡಿ ದರ ಹೋಲಿಕೆ ಮಾಡಿ. ಪ್ರೊಸೆಸಿಂಗ್ ಫೀಸ್ ಮತ್ತು ಇತರ ಚಾರ್ಜ್ ಕಡಿಮೆ ಇರುವ ಬ್ಯಾಂಕ್ ಆಯ್ಕೆ ಮಾಡಿ. ಲೋನ್ ಅವಧಿಯನ್ನು 20 ವರ್ಷದ ಬದಲು 15 ವರ್ಷ ಮಾಡಿದರೆ ಬಡ್ಡಿ ರೂಪದಲ್ಲಿ ಲಕ್ಷಾಂತರ ಉಳಿತಾಯವಾಗುತ್ತದೆ.
ವಿವಿಧ ಬ್ಯಾಂಕ್‌ಗಳ ಬಡ್ಡಿ ದರಗಳನ್ನ ಕಂಪೇರ್ ಮಾಡಿ
ಯಾವುದೇ ಒಂದೇ ಬ್ಯಾಂಕಿನಲ್ಲಿ ಸಾಲದ ಪ್ರಕ್ರಿಯೆಯನ್ನು ಆರಂಭಿಸಬೇಡಿ. ಮಾರುಕಟ್ಟೆಯಲ್ಲಿರುವ ವಿವಿಧ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಹೋಮ್ ಲೋನ್ ಬಡ್ಡಿ ದರಗಳು, ಪ್ರೊಸೆಸಿಂಗ್ ಫೀಸ್ ಮತ್ತು ಇತರ ಗುಪ್ತ ಶುಲ್ಕಗಳನ್ನು ಆನ್‌ಲೈನ್ ಮೂಲಕ ಹೋಲಿಕೆ ಮಾಡಿ ನೋಡಿ. ಕೆಲವು ಬ್ಯಾಂಕ್‌ಗಳು ಹಬ್ಬಗಳ ಸಮಯದಲ್ಲಿ ಪ್ರೊಸೆಸಿಂಗ್ ಫೀಸ್ ಮನ್ನಾ ಮಾಡುತ್ತವೆ. ಇಂತಹ ಆಫರ್‌ಗಳನ್ನು ಬಳಸಿಕೊಳ್ಳುವುದರಿಂದ ಆರಂಭಿಕ ವೆಚ್ಚಗಳನ್ನು ಉಳಿಸಬಹುದು.
ಸ್ಥಳೀಯ ಸಾಮಗ್ರಿ ಬಳಸಿ
ಹೊರಗಿನಿಂದ ದುಬಾರಿ ಟೈಲ್ಸ್ ಮತ್ತು ಫಿಟ್ಟಿಂಗ್ ತರುವ ಬದಲು ಸ್ಥಳೀಯವಾಗಿ ಸಿಗುವ ಉತ್ತಮ ಗುಣಮಟ್ಟದ ಸಾಮಗ್ರಿ ಬಳಸಿ. ಸಾಗಾಣಿಕೆ ಖರ್ಚು ಕಡಿಮೆಯಾಗುತ್ತದೆ. ಗುತ್ತಿಗೆದಾರನಿಗೆ ಒಟ್ಟು ಕಾಂಟ್ರಾಕ್ಟ್ ಕೊಡುವ ಬದಲು ಹಂತ ಹಂತವಾಗಿ ಕೆಲಸ ಕೊಟ್ಟರೆ ಕಮಿಷನ್ ಉಳಿಸಬಹುದು.
ಸರ್ಕಾರಿ ಸಬ್ಸಿಡಿ ಯೋಜನೆ ಬಳಸಿಕೊಳ್ಳಿ
PMAY ಯೋಜನೆಯಡಿ ಮೊದಲ ಮನೆ ಕಟ್ಟುವವರಿಗೆ ಬಡ್ಡಿ ಸಬ್ಸಿಡಿ ಸಿಗುತ್ತದೆ. ಇದರಿಂದ ಲೋನ್ ಬಡ್ಡಿ ಕಡಿಮೆಯಾಗುತ್ತದೆ. ನೀವು ಅರ್ಹರಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಇದರಿಂದ EMI ಕೂಡ ಕಡಿಮೆಯಾಗುತ್ತದೆ.
ಹೆಚ್ಚುವರಿ ಹಣ ಸಿಕ್ಕಾಗ ಪ್ರಿಪೇಮೆಂಟ್ ಮಾಡಿ
ಬೋನಸ್ ಅಥವಾ ಇತರ ಮೂಲದಿಂದ ಹಣ ಬಂದಾಗ ಲೋನ್ ನ ಪ್ರಿನ್ಸಿಪಲ್ ಮೊತ್ತವನ್ನು ಮುಂಗಡವಾಗಿ ಕಟ್ಟಿ. ವರ್ಷಕ್ಕೆ ಒಮ್ಮೆ ಪ್ರಿಪೇಮೆಂಟ್ ಮಾಡಿದರೂ ಬಡ್ಡಿ ಬಹಳ ಕಡಿಮೆಯಾಗುತ್ತದೆ ಮತ್ತು ಲೋನ್ ಬೇಗ ಮುಗಿಯುತ್ತದೆ.