

India Post DIGIPIN: ಭಾರತೀಯ ಅಂಚೆ ಇಲಾಖೆಯು ದೇಶದ ಪ್ರತಿಯೊಂದು ಇಂಚು ಭೂಮಿಯನ್ನು ಡಿಜಿಟಲ್ ರೂಪದಲ್ಲಿ ಗುರುತಿಸಲು ಡಿಜಿಪಿನ್ ಎನ್ನುವ ಕ್ರಾಂತಿಕಾರಕ ರಾಷ್ಟ್ರೀಯ ಜಿಯೋ ಕೋಡೆಡ್ ವಿಳಾಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇಷ್ಟು ದಿನಗಳ ಕಾಲ ಸುದೀರ್ಘವಾದ ವಿಳಾಸಗಳನ್ನು ಹುಡುಕಲು ಪರದಾಡುತ್ತಿದ್ದ ಇ ಕಾಮರ್ಸ್ ಮತ್ತು ತುರ್ತು ಸೇವೆಗಳ ಸಂಸ್ಥೆಗಳಿಗೆ ಈ ಹತ್ತು ಅಂಕಿಯ ಕೋಡ್ ಹೊಸ ದಿಕ್ಸೂಚಿಯಾಗಲಿದ್ದು ದೇಶದ ಪ್ರತಿಯೊಂದು ಕಟ್ಟಡಕ್ಕೂ ನಿಖರವಾದ ಡಿಜಿಟಲ್ ಗುರುತನ್ನು ನೀಡಲಿದೆ. ಹಾಗಾಗಿ, ನಿಮ್ಮ ಮನೆ ಅಥವಾ ಕಚೇರಿಯ 10-ಅಂಕಿಯ ಡಿಜಿಪಿನ್ ಕೋಡ್ ಅನ್ನು ಉಚಿತವಾಗಿ ಮತ್ತು ಸುಲಭವಾಗಿ ಪಡೆಯಲು ಹೀಗೆ ಮಾಡಿ...
ವಿಧಾನ 1: ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯುವುದು ಹೇಗೆ?
ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಂಡಿಯಾ ಪೋಸ್ಟ್‌ನ ಅಧಿಕೃತ ಡಿಜಿಪಿನ್ ಪೋರ್ಟಲ್ ಆದ dac.indiapost.gov.in/mydigipin ಗೆ ಭೇಟಿ ನೀಡಿ.
ಲೊಕೇಶನ್ ಅನುಮತಿ ನೀಡಿ: ವೆಬ್‌ಸೈಟ್ ತೆರೆದ ತಕ್ಷಣ ನಿಮ್ಮ ಸಾಧನದ ಜಿಪಿಎಸ್ ಬಳಸಲು ಅನುಮತಿ ಕೇಳುತ್ತದೆ. ಅಲ್ಲಿ 'I Consent' ಅಥವಾ 'Allow' ಎಂಬುದನ್ನು ಕ್ಲಿಕ್ ಮಾಡಿ. (ಗಮನಿಸಿ: ನಿಮ್ಮ ಫೋನ್‌ನಲ್ಲಿ ಜಿಪಿಎಸ್ ಆನ್ ಇರಬೇಕು).
ಮ್ಯಾಪ್‌ನಲ್ಲಿ ಜಾಗ ಗುರುತಿಸಿ: ನೀವು ಪ್ರಸ್ತುತ ಇರುವ ಜಾಗದ ಆಧಾರದ ಮೇಲೆ ಮ್ಯಾಪ್ ನಿಮ್ಮ ನಿಖರವಾದ ಲೊಕೇಶನ್ ತೋರಿಸುತ್ತದೆ. ಒಂದು ವೇಳೆ ನೀವು ಬೇರೆ ವಿಳಾಸದ ಕೋಡ್ ಪಡೆಯಬೇಕಿದ್ದರೆ, ಸರ್ಚ್ ಬಾರ್‌ನಲ್ಲಿ ಆ ವಿಳಾಸವನ್ನು ಟೈಪ್ ಮಾಡಿ ಅಥವಾ ಮ್ಯಾಪ್ ಅನ್ನು ಜೂಮ್ ಮಾಡಿ ಆ ನಿಖರವಾದ ಕಟ್ಟಡ/ಸ್ಥಳದ ಮೇಲೆ ಕ್ಲಿಕ್ ಮಾಡಿ.
ಡಿಜಿಪಿನ್ ಕೋಡ್ ಪಡೆಯಿರಿ: ನೀವು ಜಾಗವನ್ನು ಆಯ್ಕೆ ಮಾಡಿದ ತಕ್ಷಣ, ಪರದೆಯ ಮೇಲೆ 10-ಅಂಕಿಯ ವಿಶಿಷ್ಟ ಡಿಜಿಪಿನ್ ಕೋಡ್ (ಉದಾಹರಣೆಗೆ: 234C-JM7P-FT ಮಾದರಿಯಲ್ಲಿ) ಕಾಣಿಸಿಕೊಳ್ಳುತ್ತದೆ.
ಕ್ಯೂಆರ್ ಕೋಡ್ ಮತ್ತು ಡೌನ್‌ಲೋಡ್: ಅದರ ಕೆಳಗೆ 'QR Code' ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಡಿಜಿಟಲ್ ವಿಳಾಸದ ಕ್ಯೂಆರ್ ಕೋಡ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು.
ವಿಧಾನ 2: 'DIGIPIN' ಮೊಬೈಲ್ ಆ್ಯಪ್ ಮೂಲಕ ಪಡೆಯುವುದು ಹೇಗೆ?
ಆ್ಯಪ್ ಡೌನ್‌ಲೋಡ್ ಮಾಡಿ: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಇಂಡಿಯಾ ಪೋಸ್ಟ್‌ನ ಅಧಿಕೃತ "DIGIPIN by India Post" ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಲೊಕೇಶನ್ ಆನ್ ಮಾಡಿ: ಆ್ಯಪ್ ತೆರೆದು ನಿಮ್ಮ ಫೋನ್‌ನ ಜಿಪಿಎಸ್ ಲೊಕೇಶನ್‌ಗೆ ಅನುಮತಿ ನೀಡಿ.
ಕೋಡ್ ವೀಕ್ಷಿಸಿ: ಆ್ಯಪ್ ಸ್ವಯಂಚಾಲಿತವಾಗಿ ನೀವು ನಿಂತಿರುವ 4x4 ಮೀಟರ್ ಜಾಗದ 10-ಅಂಕಿಯ ಕೋಡ್ ಅನ್ನು ಪರದೆಯ ಮೇಲೆ ಪ್ರದರ್ಶಿಸುತ್ತದೆ. ಅದನ್ನು ನೀವು ಕಾಪಿ ಮಾಡಿಕೊಳ್ಳಬಹುದು.
ಡಿಜಿಪಿನ್ ಬಳಕೆಯಿಂದ ಆಗುವ ಲಾಭಗಳೇನು?
ನಿಖರವಾದ ವಿಳಾಸ: ಹಳೆಯ 6-ಅಂಕಿಯ ಪಿನ್‌ಕೋಡ್ ಇಡೀ ಏರಿಯಾವನ್ನು ಸೂಚಿಸಿದರೆ, ಈ 10-ಅಂಕಿಯ ಡಿಜಿಪಿನ್ ನಿಮ್ಮ ಮನೆಯ ಇಂಟರ್‌ಲಾಕ್ ಅಥವಾ ಗೇಟ್ ಎಲ್ಲಿದೆ ಎಂಬುದನ್ನು 3.8 ಮೀಟರ್ ನಿಖರತೆಯಲ್ಲಿ ತೋರಿಸುತ್ತದೆ.
ತಪ್ಪು ವಿತರಣೆ ಇರುವುದಿಲ್ಲ: ಆನ್‌ಲೈನ್ ಶಾಪಿಂಗ್ (ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ) ಮತ್ತು ಕೊರಿಯರ್ ಎಕ್ಸಿಕ್ಯೂಟಿವ್‌ಗಳು ಯಾವುದೇ ಗೊಂದಲವಿಲ್ಲದೆ ನೇರವಾಗಿ ನಿಮ್ಮ ಮನೆಗೆ ಬರಬಹುದು.
ತುರ್ತು ಸೇವೆಗಳಿಗೆ ಸಹಕಾರಿ: ಆಂಬ್ಯುಲೆನ್ಸ್, ಫೈರ್ ಬ್ರಿಗೇಡ್ ಅಥವಾ ಪೊಲೀಸರಿಗೆ ಈ 10 ಅಂಕಿಯ ಕೋಡ್ ನೀಡಿದರೆ, ಅವರು ಯಾವುದೇ ವಿಳಾಸ ಹುಡುಕುವ ಅಗತ್ಯವಿಲ್ಲದೆ ಜಿಪಿಎಸ್ ಮೂಲಕ ತಕ್ಷಣ ಸ್ಥಳಕ್ಕೆ ತಲುಪಬಹುದು.
ಆಫ್‌ಲೈನ್‌ನಲ್ಲೂ ಕೆಲಸ ಮಾಡುತ್ತದೆ: ಒಮ್ಮೆ ನೀವು ನಿಮ್ಮ ಕೋಡ್ ತಿಳಿದುಕೊಂಡರೆ, ಇಂಟರ್ನೆಟ್ ಇಲ್ಲದಿದ್ದಾಗಲೂ ಈ ಕೋಡ್ ಅನ್ನು ವಿಳಾಸ ಗುರುತಿಸಲು ಬಳಸಬಹುದು.