

Gratuity Rules 2026: 4 ವರ್ಷ 11 ತಿಂಗಳು ಕಂಪನಿಯಲ್ಲಿ ದುಡಿದೆ. ಆದರೆ, ರಾಜೀನಾಮೆ ಕೊಟ್ಟಾಗ HR ಹೇಳಿದ್ದು - 'ಸಾರಿ ಸರ್, 5 ವರ್ಷ ಆಗಿಲ್ಲ ಹಾಗಾಗಿ ಗ್ರಾಚ್ಯುಟಿ ಇಲ್ಲ' ಅಂತ! 1 ತಿಂಗಳು ಮುಂಚೆ ರಾಜೀನಾಮೆ ಕೊಟ್ಟಿದ್ದಕ್ಕೆ ₹1 ಲಕ್ಷ ನಷ್ಟ ಆಯ್ತಾ? ಹೌದು, ಭಾರತದಲ್ಲಿ ಗ್ರಾಚ್ಯುಟಿಗೆ 5 ವರ್ಷ ಎಂಬ ಕಠಿಣ ನಿಯಮವಿದೆ. ಆದ್ರೆ ಈ ನಿಯಮಕ್ಕೆ 3 ದೊಡ್ಡ ಲೋಪೋಲ್‌ಗಳಿವೆ. ಹೌದು, ಕೆಲವೊಂದು ಸಂದರ್ಭದಲ್ಲಿ ಕೇವಲ ಒಂದೇ ಒಂದು ದಿನ ಕೆಲಸ ಮಾಡಿದರೂ ಕೂಡ ಕಂಪನಿ ಗ್ರಾಚ್ಯುಟಿ ಹಣ ಕೊಡಲೇ ಬೇಕು! ಹಾಗಾದ್ರೆ, ಆ ಸಂದರ್ಭ ಯಾವುದು? ಯಾವ ಕಾರಣಕ್ಕೆ ಕಂಪನಿಯವರು ಗ್ರಾಚ್ಯುಟಿ ಹಣ ಕೊಡ್ತಾರೆ ಗೊತ್ತಾ?
ಏನಿದು ಗ್ರಾಚ್ಯುಟಿ?
ಗ್ರಾಚ್ಯುಟಿ ಎಂದರೆ ಒಬ್ಬ ಉದ್ಯೋಗಿಯು ಒಂದು ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ನಂತರ, ಭಾರತದ ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ಅಡಿಯಲ್ಲಿ ಆ ಉದ್ಯೋಗಿಗೆ ಕಂಪನಿ ನೀಡುವ ಒಂದು ಬಾರಿಯ ಆರ್ಥಿಕ ಭತ್ಯೆವಾಗಿದೆ.
ಗ್ರಾಚ್ಯುಟಿಯ ಮೂಲ ನಿಯಮ ಏನು?
ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಪ್ರಕಾರ: ಯಾವುದೇ ಕಂಪನಿಯಲ್ಲಿ ನಿರಂತರವಾಗಿ 4 ವರ್ಷ 240 ದಿನ ಅಂದರೆ 4 ವರ್ಷ 8 ತಿಂಗಳು ಕೆಲಸ ಮಾಡಿರಬೇಕು. ಆಗ ಮಾತ್ರ ನೀವು ರಾಜೀನಾಮೆ ಕೊಟ್ಟಾಗಲೋ, ರಿಟೈರ್ ಆದಾಗಲೋ ಗ್ರಾಚ್ಯುಟಿ ಪಡೆಯಲು ಅರ್ಹರಾಗುತ್ತೀರಿ.
ಇನ್ನು, ಗ್ರಾಚ್ಯುಟಿಯನ್ನ ಹೀಗೆ ಲೆಕ್ಕ ಹಾಕಲಾಗುತ್ತದೆ:
ಗ್ರಾಚ್ಯುಟಿ ಮೊತ್ತ = (ಕೊನೆಯ ತಿಂಗಳ ಮೂಲ ವೇತನ + DA) × (ಕೆಲಸ ಮಾಡಿದ ಒಟ್ಟು ವರ್ಷಗಳು) × 15 ÷ 26
ಹಾಗಾದ್ರೆ, ಯಾವ ಸಂದರ್ಭದಲ್ಲಿ ಗ್ರಾಚ್ಯುಟಿ ಬೇಗ ಸಿಗುತ್ತದೆ?
5 ವರ್ಷಕ್ಕಿಂತ ಕಡಿಮೆ ಇದ್ದರೂ ಗ್ರಾಚ್ಯುಟಿ ಸಿಗುವ 3 ಸಂದರ್ಭಗಳು:
ಕೆಲಸದ ಸಮಯದಲ್ಲಿ ಮರಣವಾದರೆ:
ಉದ್ಯೋಗಿ ಎಷ್ಟು ದಿನ ಕೆಲಸ ಮಾಡಿದ್ದಾರೆ ಎಂಬ ಲೆಕ್ಕವೇ ಇಲ್ಲ. 6 ತಿಂಗಳು ಕೆಲಸ ಮಾಡಿದ್ದರೂ ಅವರ ಕುಟುಂಬ/ನಾಮಿನಿಗೆ ಪೂರ್ಣ ಗ್ರಾಚ್ಯುಟಿ ಹಣ ಸಿಗುತ್ತದೆ. ಇದು ಕಡ್ಡಾಯವಾಗಿದ್ದು, ಯಾವುದೇ ಕಂಪನಿ ನಿರಾಕರಿಸುವಂತಿಲ್ಲ.
ಕೆಲಸದ ಸಮಯದಲ್ಲಿ ಅಂಗವೈಕಲ್ಯವಾದರೆ:
ಕೆಲಸದ ವೇಳೆಯಲ್ಲಿ ಅಪಘಾತ ಅಥವಾ ಕಾಯಿಲೆಯಿಂದ ಕೆಲಸ ಮಾಡಲು ಆಗದೇ ಶಾಶ್ವತವಾಗಿ ಅಂಗವೈಕಲ್ಯವಾದರೆ ಆಗಲೂ 5 ವರ್ಷದ ನಿಯಮ ಅನ್ವಯವಾಗುವುದಿಲ್ಲ
ಉದಾ: ಫ್ಯಾಕ್ಟರಿಯಲ್ಲಿ ಅಪಘಾತವಾಗಿ ಕೈ ಕಳೆದುಕೊಂಡರೆ, ತಕ್ಷಣ ಗ್ರಾಚ್ಯುಟಿ ಸಿಗುತ್ತದೆ.
ಗುತ್ತಿಗೆ ಆಧಾರಿತ ನೌಕರರು:
ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಕಾನೂನಿನ ಪ್ರಕಾರ, ಫಿಕ್ಸ್ಡ್-ಟರ್ಮ್ ಅಥವಾ ಒಪ್ಪಂದದ ಆಧಾರದ ಮೇಲೆ ನೇಮಕಗೊಳ್ಳುವ ಉದ್ಯೋಗಿಗಳಿಗೆ 5 ವರ್ಷಗಳ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ. ಇಂತಹ ನೌಕರರು ಸಂಸ್ಥೆಯಲ್ಲಿ ಕೇವಲ 1 ವರ್ಷದ ಸೇವೆ ಪೂರ್ಣಗೊಳಿಸಿದ್ದರೆ, ಅವರು ಕೆಲಸ ಮಾಡಿದ ಅವಧಿಗೆ ಅನುಗುಣವಾಗಿ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ.
ನೆನಪಿರಲಿ...
ನಿಮ್ಮ ಕಂಪನಿಯಲ್ಲಿ ಕನಿಷ್ಠ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳು ಇದ್ದರೆ ಮಾತ್ರ ಆ ಸಂಸ್ಥೆಗೆ ಗ್ರಾಚ್ಯುಟಿ ಕಾಯ್ದೆ ಅನ್ವಯ. ಏತನ್ಮಧ್ಯೆ, ಕಂಪನಿಯು ನಷ್ಟದಲ್ಲಿದೆ ಅಥವಾ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂಬ ಕಾರಣ ನೀಡಿ ಗ್ರಾಚ್ಯುಟಿ ಹಣವನ್ನ ನಿರಾಕರಿಸುವಂತಿಲ್ಲ.