ಬೆಂಗಳೂರು: ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರತೀಯರು ಹೂಡಿಕೆ ಮಾಡಲು ನೆರವಾಗುವ ಬೆಂಗಳೂರು ಮೂಲದ ಜಾಗತಿಕ ಹೂಡಿಕೆ ಫಿನ್ಟೆಕ್ ಪ್ಲಾಟ್ಫಾರ್ಮ್ ಸ್ಟಾಕಲ್ನಲ್ಲಿ ನಡೆದಿರುವ ₹100 ಕೋಟಿಗೂ ಅಧಿಕ ಮೊತ್ತದ ಕಡಲದಾಟದ ಷೇರು ಹಗರಣವು ಭಾರತೀಯ ಹೂಡಿಕೆದಾರರಲ್ಲಿ ಭಾರಿ ಆತಂಕ ಮೂಡಿಸಿದೆ. ಸುಮಾರು 30 ಕ್ಕೂ ಹೆಚ್ಚು ಭಾರತೀಯ ಚಿಲ್ಲರೆ ಹೂಡಿಕೆದಾರರು ತಮ್ಮ ಅನುಮತಿಯಿಲ್ಲದೆಯೇ ತಮ್ಮ ಖಾತೆಯಲ್ಲಿದ್ದ ಆಪಲ್ ಮತ್ತು ಎನ್ವಿಡಿಯೋದಂತಹ ಬ್ಲೂ-ಚಿಪ್ ಯುಎಸ್ ಷೇರುಗಳನ್ನು ಮಾರಾಟ ಮಾಡಿ, ಆ ಹಣವನ್ನು ಚೀನಾದ ಸಣ್ಣ ಕಂಪನಿಯೊಂದರ ಷೇರುಗಳಿಗೆ ವರ್ಗಾಯಿಸಿ ನಷ್ಟ ತಂದಿಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅಸಲಿಗೆ ನಡೆದಿದ್ದೇನು?
ಅಕ್ಟೋಬರ್ 15 ರಂದು ಹೂಡಿಕೆದಾರರ ಒಪ್ಪಿಗೆ ಅಥವಾ ಯಾವುದೇ ಒಟಿಪಿ ಇಲ್ಲದೆಯೇ ಅವರ ಪೋರ್ಟ್ಫೋಲಿಯೊದಲ್ಲಿದ್ದ ಆಪಲ್, ಎನ್ವಿಡಿಯಾ, ಅಮೆಜಾನ್, ಟೆಸ್ಲಾ ಮತ್ತು ಆಲ್ಫಾಬೆಟ್ ಕಂಪನಿಗಳ ಅತ್ಯಂತ ಸುರಕ್ಷಿತ ಷೇರುಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಮಾರಾಟ ಮಾಡಲಾಗಿದೆ. ಅದರಲ್ಲೂ, ಹೀಗೆ ಷೇರು ಮಾರಾಟ ಮಾಡಿ ಬಂದ ಕೋಟ್ಯಂತರ ರೂಪಾಯಿ ಹಣವನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ, ಹೆಚ್ಚು ವ್ಯಾಪಾರವಾಗದ ಜಿಬಾವೋ ಟೆಕ್ನಾಲಜಿ ಎಂಬ ಚೀನಾದ ಪೆನ್ನಿ ಸ್ಟಾಕ್ ಕಂಪನಿಗೆ ಹೂಡಿಕೆ ಮಾಡಲಾಗಿದೆ.
60% ರಷ್ಟು ಕುಸಿದ ಷೇರು ಮೌಲ್ಯ!
ಅದರಲ್ಲೂ, ಹೂಡಿಕೆದಾರರ ಖಾತೆಯಿಂದ ಬಲವಂತವಾಗಿ ಚೀನಾ ಕಂಪನಿಯ ಷೇರು ಖರೀದಿಸಿದ ಕೆಲವೇ ದಿನಗಳಲ್ಲಿ, ಆ ಕಂಪನಿಯ ಷೇರು ಮೌಲ್ಯ ಶೇ. 60 ರಷ್ಟು ಪಾತಾಳಕ್ಕೆ ಕುಸಿತ ಕಂಡಿತು. ಇದರ ಪರಿಣಾಮವಾಗಿ ಹೂಡಿಕೆದಾರರು ಭಾರಿ ಪ್ರಮಾಣದ ಬಂಡವಾಳ ಕಳೆದುಕೊಂಡಿದ್ದಾರೆ. ಈ ಪೈಕಿ ಒಬ್ಬರೇ ಹೂಡಿಕೆದಾರರು ಬರೋಬ್ಬರಿ ₹29 ಕೋಟಿ ಕಳೆದುಕೊಂಡಿರುವ ಉದಾಹರಣೆಯೂ ವರದಿಯಾಗಿದೆ. ಏತನ್ಮಧ್ಯೆ, ಈ ಹೂಡಿಕೆದಾರರಲ್ಲಿ ಹಲವರು ಈ ಹಿಂದೆ ಎಚ್ಡಿಎಫ್ಸಿ ಸೆಕ್ಯುರಿಟೀಸ್ ಮೂಲಕ ಸ್ಟಾಕಲ್ ಪ್ಲಾಟ್ಫಾರ್ಮ್ಗೆ ಪರಿಚಯಿಸಲ್ಪಟ್ಟಿದ್ದರು. ಆದರೆ, ಎಚ್ಡಿಎಫ್ಸಿ ಸೆಕ್ಯುರಿಟೀಸ್ ಈ ಪಾಲುದಾರಿಕೆಯು ಜುಲೈ 2024 ರಲ್ಲೇ ಕೊನೆಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಮುಂದುವರೆದು, ಸ್ಟಾಕಾಲ್ ಸಂಸ್ಥೆಯ ಮಾತೃಸಂಸ್ಥೆಯಾದ ಬಾರ್ಡರ್ಲೆಸ್, ಇದು ಪ್ಲಾಟ್ಫಾರ್ಮ್ ಹ್ಯಾಕಿಂಗ್ ಅಲ್ಲ, ಬದಲಿಗೆ ಹೂಡಿಕೆದಾರರ ಇಮೇಲ್ ಫಿಶಿಂಗ್ ಮೂಲಕ ವಂಚಕರು ಲಾಗಿನ್ ವಿವರಗಳನ್ನು ಪಡೆದು ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿಸಿದೆ. ಅದರಂತೆ, ಸ್ಟಾಕಾಲ್ ಮತ್ತು ಅದರ ಅಮೆರಿಕ ಮೂಲದ ಕ್ಲಿಯರಿಂಗ್ ಬ್ರೋಕರ್ ಸಂಸ್ಥೆಯಾದ ಡ್ರೈವ್ ವೆಲ್ತ್ ಈ ಭದ್ರತಾ ಲೋಪಕ್ಕೆ ಯಾರು ಹೊಣೆ ಎಂಬ ವಿಷಯದಲ್ಲಿ ಪರಸ್ಪರ ದೂಷಿಸಿಕೊಳ್ಳುತ್ತಿವೆ. ಇದರೊಂದಿಗೆ, ಈ ಅಕ್ರಮ ವಹಿವಾಟಿನ ವಿರುದ್ಧ ಬೆಂಗಳೂರಿನಲ್ಲಿ ಸ್ಟಾಕಾಲ್, ಡ್ರೈವ್ ವೆಲ್ತ್ ಹಾಗೂ ಎಚ್ಡಿಎಫ್ಸಿ ಸೆಕ್ಯುರಿಟೀಸ್ (ಸ್ಟಾಕಾಲ್ನ ಹೂಡಿಕೆದಾರ ಸಂಸ್ಥೆ) ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೂಡಿಕೆದಾರರು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಮತ್ತು ಅಮೆರಿಕದ ಎಸ್ಇಸಿಗೆ ತನಿಖೆ ನಡೆಸುವಂತೆ ಅಧಿಕೃತ ದೂರು ನೀಡಿದ್ದಾರೆ.