

ನವದೆಹಲಿ: ದುಬಾರಿ ಮೊಬೈಲ್ ರೀಚಾರ್ಜ್‌ಗಳಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ರಿಲೀಫ್ ನೀಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ಟೆಲಿಕಾಂ ಕಂಪನಿಗಳ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕಗಳನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರಿಂದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಗ್ರಾಹಕರ ಮಾಸಿಕ ರೀಚಾರ್ಜ್ ದರಗಳು ಶೇ. 10 ರಿಂದ 15 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆ ಕುರಿತ ವರದಿ ಇಲ್ಲಿದೆ:
ಯಾಕೆ ಈ ನಿರ್ಧಾರ?
ದೂರಸಂಪರ್ಕ ಸಚಿವಾಲಯ ಹಾಗೂ ನೀತಿ ಆಯೋಗದ ವರದಿಗಳ ಪ್ರಕಾರ, ಮೊಬೈಲ್ ಸೇವೆಗಳನ್ನು ಜನರಿಗೆ ಕೈಗೆಟುಕುವಂತೆ ಮಾಡಲು ಸರ್ಕಾರ ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ. ಪ್ರಸ್ತುತ ಭಾರತದಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಒಟ್ಟು ವರಮಾನದ ಸುಮಾರು 8 ಪ್ರತಿಶತದಷ್ಟು ಮೊತ್ತವನ್ನು ಲೈಸೆನ್ಸ್ ಶುಲ್ಕ ಮತ್ತು ಸ್ಪೆಕ್ಟ್ರಮ್ ಬಳಕೆಯ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸುತ್ತಿವೆ. ಈ ಭಾರೀ ಶುಲ್ಕವನ್ನು ಶೇಕಡಾ 3 ರಿಂದ 4 ಕ್ಕೆ ಇಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದರ ಜೊತೆಗೆ, ಗ್ರಾಮೀಣ ಇಂಟರ್ನೆಟ್ ನಿಧಿಗೆ ಮೀಸಲಿಟ್ಟಿರುವ 5 ಪ್ರತಿಶತ ಶುಲ್ಕವನ್ನು ಸದ್ಯಕ್ಕೆ ನಿಲ್ಲಿಸುವ ಅಥವಾ ಕಡಿತಗೊಳಿಸುವ ಸಾಧ್ಯತೆ ಇದೆ. ಕಂಪನಿಗಳಿಗೆ ಈ ತೆರಿಗೆ ಹೊರೆ ಕಡಿಮೆಯಾದರೆ, ಆ ಲಾಭ ನೇರವಾಗಿ ಗ್ರಾಹಕರಿಗೆ ಸಿಗಲಿದೆ.
ಅದರಲ್ಲೂ, ಈ ಹಿಂದೆ ಟೆಲಿಕಾಂ ಕಂಪನಿಗಳು ಮೊಬೈಲ್ ಸುಂಕವನ್ನು ಶೇ. 15 ರಿಂದ 25 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದವು. ಇದರಿಂದಾಗಿ ಗ್ರಾಮೀಣ ಮತ್ತು ಬಡ ವರ್ಗದ ಬಳಕೆದಾರರು ರೀಚಾರ್ಜ್ ಮಾಡಿಸುವುದನ್ನೇ ನಿಲ್ಲಿಸುವ ಅಥವಾ ಸಿಮ್ ಕಾರ್ಡ್‌ಗಳನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ, ಸೋಶಿಯಲ್ ಮೀಡಿಯಾದಿಂದ ಹಿಡಿದು ಸಂಸತ್ತಿನವರೆಗೂ ಈ ದುಬಾರಿ ರೀಚಾರ್ಜ್ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮಧ್ಯಪ್ರವೇಶಿಸಿ ಈ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿವೆ.
ಹಾಗಾದ್ರೆ, ಇದರಿಂದ ಸಾಮಾನ್ಯ ಗ್ರಾಹಕರಿಗೆ ಲಾಭವೇನು?
ತಜ್ಞರ ಅಂದಾಜಿನಂತೆ, ಸರ್ಕಾರದ ಶುಲ್ಕ ಕಡಿತ ಜಾರಿಗೆ ಬಂದರೆ ಕಂಪನಿಗಳು ರೀಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಶೇಕಡಾ 10 ರಿಂದ 15 ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. ಉದಾಹರಣೆಗೆ, ಪ್ರಸ್ತುತ 299 ರೂಪಾಯಿ ಇರುವ ಮಾಸಿಕ ಯೋಜನೆಯು 250 ರಿಂದ 260 ರೂಪಾಯಿಗೆ ಇಳಿಕೆಯಾಗಬಹುದು. ಅದರಲ್ಲೂ, ವಾರ್ಷಿಕ ಪ್ಲಾನ್‌ಗಳಲ್ಲಿ ಗ್ರಾಹಕರಿಗೆ ಸುಮಾರು 300 ರಿಂದ 400 ರೂಪಾಯಿವರೆಗೆ ಉಳಿತಾಯವಾಗಲಿದೆ.
ಮುಂದುವರೆದು, ಇಂಟರ್ನೆಟ್ ಬಳಸದ, ಕೇವಲ ಕರೆ ಮತ್ತು ಎಸ್‌ಎಮ್‌ಎಸ್ ಬಯಸುವ ಫೀಚರ್ ಫೋನ್ ಬಳಕೆದಾರರಿಗಾಗಿ ಪ್ರತ್ಯೇಕ ಅಗ್ಗದ ವಾಯ್ಸ್-ಓನ್ಲಿ ಪ್ಲಾನ್‌ಗಳನ್ನು ಕಡ್ಡಾಯಗೊಳಿಸಲು ಟ್ರಾಯ್ ಸೂಚಿಸಿದೆ. ಇದರೊಂದಿಗೆ, ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾದ ತೊಂದರೆಯನ್ನು ತಪ್ಪಿಸಲು, ಇಡೀ ತಿಂಗಳ (30 ದಿನಗಳು) ಮಾನ್ಯತೆ ನೀಡುವ ಕನಿಷ್ಠ ಒಂದು ಪ್ಲಾನ್ ಆದರೂ ಕಡ್ಡಾಯವಾಗಿ ಲಭ್ಯವಿರಬೇಕು ಎಂದು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.
ಒಟ್ಟಾರೆಯಾಗಿ, ಕೇಂದ್ರ ಸರ್ಕಾರದ ಈ ಲೈಸೆನ್ಸ್ ಶುಲ್ಕ ಕಡಿತದ ನಿರ್ಧಾರ ಅಧಿಕೃತವಾಗಿ ಜಾರಿಗೆ ಬಂದರೆ, ಮುಂಬರುವ ದಿನಗಳಲ್ಲಿ ಜಿಯೋ, ಏರ್‌ಟೆಲ್ ಬಳಕೆದಾರರ ರೀಚಾರ್ಜ್ ಬಿಲ್ ಗಣನೀಯವಾಗಿ ತಗ್ಗಲಿದೆ.