
ಮುಂಬೈ: ಹಿಂದಿ ಕಿರುತೆರೆಯ ಖ್ಯಾತ ಹಾಸ್ಯ ರಿಯಾಲಿಟಿ ಶೋ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಖ್ಯಾತಿಯ ಕಪಿಲ್ ಶರ್ಮಾ ಇದೀಗ ಬೆಳ್ಳಿ ಪರದೆಯತ್ತ ಹೆಜ್ಜೆ ಇಟ್ಟಿದ್ದಾರೆ.
ಇಷ್ಟು ದಿನ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ನಕ್ಕುನಲಿಸುತ್ತಿದ್ದ 'ಕಾಮಿಡಿ ಶರ್ಮಾ' ಇದೀಗ ದೊಡ್ಡ ಪರದೆಯ ಮೇಲೆ ತಮ್ಮ ಹಾಸ್ಯದ ಹೊನಲನ್ನು ಹರಿಸಲು ಸಜ್ಜಾಗಿದ್ದಾರೆ. ಕಪಿಲ್ ಶರ್ಮಾ ದೊಡ್ಡ ಪರದೆಯಲ್ಲಿ ಮಿಂಚುವ ಕುರಿತು ಈ ಹಿಂದೆಯೇ ಸುದ್ದಿ ಪ್ರಸಾರವಾಗಿತ್ತಾದರೂ, ಅಧಿಕೃತವಾಗಿ ಕಪಿಲ್ ಶರ್ಮಾ ಅವರ ಸಿನಿಮಾ ಎಂದು ಸೆಟ್ಟೇರಲಿದೆ ಎಂಬುದು ತಿಳಿದಿರಲಿಲ್ಲ. ಆದರೆ ಆ ಎಲ್ಲ ಗೊಂದಲಗಳಿಗೆ ಅವರೇ ತೆರೆ ಎಳೆದಿದ್ದು, ಮುಂಬೈನಲ್ಲಿ ಇಂದು ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಕಾಮಿಡಿ ಶರ್ಮಾ ಪಾಲ್ಗೊಂಡಿದ್ದಾರೆ.
ಬಾಲಿವುಡ್ ನಟ ಮತ್ತು ನಿರ್ದೇಶಕ ಅರ್ಬಾಜ್ ಖಾನ್ ಅವರು ಕಪಿಲ್ ಶರ್ಮಾಗೆ ಸಾಥ್ ನೀಡುತ್ತಿದ್ದು, ಚಿತ್ರದಲ್ಲಿ ಅರ್ಬಾಜ್‌ಗೆಂದೇ ವಿಶೇಷ ಪಾತ್ರ ರಚನೆ ಮಾಡಲಾಗಿದೆಯಂತೆ. ಇನ್ನು ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಕಾಮಿಡಿ ಶರ್ಮಾರ ಚೊಚ್ಚಲ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ, ಬಾಲಿವುಡ್ ದೊಡ್ಡ ಮಟ್ಟದ ತಾರೆಯರು ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ. ಇನ್ನು ಕಪಿಲ್ ಶರ್ಮಾ ಅವರ ಮೊಟ್ಟ ಮೊದಲ ಚಿತ್ರಕ್ಕೆ ಬಾಲಿವುಡ್ ದಿಗ್ಗಜ ನಿರ್ದೇಶಕರೇ ಸಾರಥ್ಯ ವಹಿಸಿದ್ದು, ಅಬ್ಬಾಸ್-ಮಸ್ತಾನ್ ಎಂಬ ಖ್ಯಾತ ನಿರ್ದೇಶಕರು ನಿರ್ದೇಶನದ ಜಂಟಿ ಸಾರಥ್ಯ ವಹಿಸಿಕೊಂಡಿದ್ದಾರೆ.
ಈ ಹಿಂದೆ ಇದೇ ಜಂಟಿ ನಿರ್ದೇಶಕರೊಂದಿಗೆ ಅರ್ಬಾಜ್ ಖಾನ್ ಅವರು 1996ರಲ್ಲಿ 'ಡರಾರ್' ಎಂಬ ಚಿತ್ರವನ್ನು ಮಾಡಿದ್ದರು. ಈ ಚಿತ್ರದ ಮೂಲಕವೇ ಅರ್ಬಾಜ್ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಥ್ರಿಲ್ಲರ್ ಕಥೆ ಹೊಂದಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವುದರಲ್ಲಿ ವಿಫಲವಾಯಿತಾದರೂ, ಚಿತ್ರ ಮಾತ್ರ ಯಶಸ್ಸಿನ ಪಟ್ಟಿಗೆ ಸೇರಿತು. ಅಲ್ಲದೆ ಚಿತ್ರದಲ್ಲಿ ಅರ್ಬಾಜ್ ಅವರ ಪೊಸೆಸಿವ್ ಗಂಡನ ಪಾತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ಸತತ 18 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗುತ್ತಿದ್ದು, ಕಾಮಿಡಿ ಶರ್ಮಾ ಮೂಲಕ ಮತ್ತೆ ಮ್ಯಾಜಿಕ್ ಮಾಡಲು ಸಜ್ಜಾಗಿದೆ.
ಇನ್ನು ತಮ್ಮ ಮೊದಲ ಚಿತ್ರದ ಚಿತ್ರೀಕರಣದ ಖುಷಿಯಲ್ಲಿರುವ ಕಪಿಲ್ ಶರ್ಮಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಮೊದಲ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಿಮ್ಮ ಆಶೀರ್ವಾದ ಬೇಕು ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರೀಕರಣ ಕುರಿತಂತೆ ನಟ ಅರ್ಬಾಜ್ ಖಾನ್ ಕೂಡ ಟ್ವೀಟ್ ಮಾಡಿದ್ದು, ಖ್ಯಾತ ಜಂಟಿ ನಿರ್ದೇಶಕರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ತಮಗೆ ಖುಷಿ ನೀಡಿದೆ ಎಂದು ಟ್ವೀಟಿಸಿದ್ದಾರೆ.
Advertisement