
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಮದುವೆಗೆ ಭಾರತೀಯ ಚಿತ್ರರಂಗ ಘಟಾನುಘಟಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಇದೇ ನವೆಂಬರ್ 21ರಂದು ನಡೆಯಲಿರುವ ಅರ್ಪಿತಾ ಮತ್ತು ಉದ್ಯಮಿ ಆಯುಷ್ ಶರ್ಮಾ ಅವರ ಮದುವೆಗೆ ಕಾರ್ಯಕ್ರಮಕ್ಕೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಸಿನಿ ಗಣ್ಯರು ಸೇರಿ ಬಹುತೇಕ ಎಲ್ಲ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು, ಉಧ್ಯಮಿಗಳು ಮತ್ತು ಕ್ರೀಡಾ ತಾರೆಯರು ಸೇರಿದಂತೆ ದೇಶದ ಹಲವು ಖ್ಯಾತ ನಾಮರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆಯಂತೆ.
ಪ್ರಮುಖವಾಗಿ ಬಾಲಿವುಡ್‌ನ ಹೆಸರಾಂತ ಕುಟುಂಬಗಳಾದ ಬಚ್ಚನ್ ಕುಟುಂಬ, ಕಪೂರ್ ಕುಟುಂಬಕ್ಕೆ ಆಹ್ವಾನ ನೀಡಲಾಗಿದ್ದು, ಸಲ್ಮಾನ್ ಖಾನ್ ಅವರ ಆಪ್ತವಲಯದಲ್ಲಿ ಗುರಿತಿಸಿಕೊಂಡಿರುವ ನಟ ಸಂಜಯ್ ದತ್ ಕುಟುಂಬಕ್ಕೂ ಕೂಡ ಆಹ್ವಾನ ನೀಡಲಾಗಿದೆಯಂತೆ.
ಶಾರುಖ್ ಖಾನ್ ತಲುಪಿದ ಆಹ್ವಾನ ಪತ್ರಿಕೆ
ಇನ್ನು ಬಾಲಿವುಡ್‌ನಲ್ಲಿ ಪರಸ್ಪರ ವಿರೋಧಿಗಳಂದೇ ಹೆಸರಾಗಿರುವ ಬಾಲಿವುಡ್ ಬಾದ್‌ಷಾ ನಟ ಶಾರುಖ್ ಖಾನ್‌ಗೆ ಕೂಡ ಆಹ್ವಾನ ನೀಡಲಾಗಿದ್ದು, ಶಾರುಖ್ ಖಾನ್ ಕೂಡ ಮದುವೆಗೆ ಆಗಮಿಸುವ ಸಾಧ್ಯತೆ ಇದೆ. ಇನ್ನು ಉಧ್ಯಮಿಗಳ ಸಾಲಿನಲ್ಲಿ ರಿಲಯನ್ಸ್, ಅದಾನಿ ಸಂಸ್ಥೆಗಳು ಸೇರಿದಂತೆ ಹಲವು ಖ್ಯಾತ ನಾಮ ಉಧ್ಯಮಿಗಳಿಗೆ ಆಹ್ವಾನ ನೀಡಲಾಗಿದೆ. ಕ್ರೀಡಾ ಕ್ಷೇತ್ರದ ಪಟ್ಟಿಯಲ್ಲಿ ದೊಡ್ಡ ದೊಡ್ಡ ಹೆಸರುಗಳೇ ಇದ್ದು, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮಿಲ್ಕಾಸಿಂಗ್, ಕಪಿಲ್ ದೇವ್ ಸೇರಿದಂತೆ ಹಲವು ಖ್ಯಾತ ಕ್ರೀಡಾಳುಗಳಿಗೆ ಆಹ್ವಾನ ಪತ್ರಿಕೆ ರವಾನೆ ಮಾಡಲಾಗಿದೆ.
ಆರತಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ..?
ಇನ್ನು ರಾಜಕಾರಣಗಳಿಗೂ ಕೂಡ ಸಲ್ಮಾನ್‌ಖಾನ್ ಆಹ್ವಾನ ಪತ್ರಿಕೆ ರವಾನೆ ಮಾಡಿದ್ದು, ಪ್ರಮುಖವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಪಿತಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಮಾನ್ ಖಾನ್ ಅವರು ಆಹ್ವಾನ ನೀಡಿದ್ದಾರೆಯೇ ಇಲ್ಲವೇ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಉಳಿದಂತೆ ದೇಶದ ಬಹುತೇಕ ಅಗ್ರಗಣ್ಯ ರಾಜಕಾರಣಿಗಳಿಗೆ ಆಹ್ವಾನ ಪತ್ರಿಕೆ ರವಾನೆ ಮಾಡಲಾಗಿದೆಯಂತೆ.
ಒಟ್ಟಾರೆ ಹೈದರಾಬಾದಿನಲ್ಲಿ ನಡೆಯಲಿರುವ ತಮ್ಮ ತಂಗಿ ಅರ್ಪಿತಾ ಅವರ ಮದುವೆಗೆ ಸಲ್ಮಾನ್ ಖಾನ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ದೇಶದ ಅಗ್ರಗಣ್ಯ ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ.
Advertisement