ಚಕ್‍ದೇ ಹುಡುಗಿಯರು ಈಗೆಲ್ಲಿದ್ದಾರೆ?

ನಮ್ಮ ವನಿತೆಯರ ಹಾಕಿ ತಂಡಕ್ಕೆ ಒಲಿಂಪಿಕ್ಸಿಗೆ ಅರ್ಹತೆ ಸಿಕ್ಕಿರುವಾಗ, `ಚಕ್ ದೇ ಇಂಡಿಯಾ' ಸಿನಿಮಾದ ಹುಡುಗಿಯರು ನೆನಪಾದರು. ಈಗವರು ಏನ್ಮಾಡ್ತಿದ್ದಾರೆ?...
ಚಕ್‍ದೇ ಹುಡುಗಿಯರು ಈಗೆಲ್ಲಿದ್ದಾರೆ?
ಚಕ್‍ದೇ ಹುಡುಗಿಯರು ಈಗೆಲ್ಲಿದ್ದಾರೆ?
Updated on

ನಮ್ಮ ವನಿತೆಯರ ಹಾಕಿ ತಂಡಕ್ಕೆ ಒಲಿಂಪಿಕ್ಸಿಗೆ ಅರ್ಹತೆ ಸಿಕ್ಕಿರುವಾಗ, `ಚಕ್ ದೇ ಇಂಡಿಯಾ' ಸಿನಿಮಾದ ಹುಡುಗಿಯರು ನೆನಪಾದರು. ಈಗವರು ಏನ್ಮಾಡ್ತಿದ್ದಾರೆ?

ನಡೆಯುತ್ತಾ ರಿಯಲ್ ಚಕ್ ದೇ ಇಂಡಿಯಾ? 36 ವರ್ಷದ ನಂತರ ಭಾರತದ ವನಿತೆಯರ ಹಾಕಿ ತಂಡದ ಕನಸು ಈಗ ರೆಕ್ಕೆಬಡಿದು ಹಾರಿದೆ. ಮುಂದಿನ ರಿಯೋ ಒಲಿಂಪಿಕ್ಸಿನಲ್ಲಿ ನಮ್ಮ ಹುಡುಗಿಯರು ಹಾಕಿ ಸ್ಟಿಕ್ ಹಿಡಿಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಮುಂದಿನದ್ದೆಲ್ಲವೂ `ಚಕ್ ದೇ ಇಂಡಿಯಾ' ಸಿನಿಮಾದಂತೆ ಆಗಲಿಯೆಂಬ ಹಾರೈಕೆ. ತೆರೆಯ ಮೇಲೆ ಸ್ಪೂರ್ತಿ ತುಂಬಿದ ಕಬೀರ್ ಖಾನ್‍ನಂಥ ಕೋಚ್ ಮತ್ತೆ ಸಿಗಲಿಯೆಂಬ ಪುಟ್ಟ ಪ್ರಾರ್ಥನೆ. ಚಕ್‍ದೇ ತಂಡದಂತೆ ಈ ಹುಡುಗಿಯರೂ ಚಾಣಾಕ್ಷರಾದರೆ ಎಷ್ಟು ಚೆನ್ನ!

ಆ ಸಿನಿಮಾ ಇಷ್ಟರಮಟ್ಟಿಗೆ ನಮ್ಮೊಳಗೆ ಸ್ಪೂರ್ತಿ, ಕನಸನ್ನು ತುಂಬಿಬಿಟ್ಟಿದೆ. ಅಲ್ಲಿನ ಕೋಚ್ ಕಬೀರ್ ಬಿಡಿ, ನಮ್ಮೆದುರು ದೈತ್ಯ ನಟ ಶಾರೂಖ್ ಖಾನ್ ಆಗಿ ನಿತ್ಯವೂ ಕಾಣಿಸುತ್ತಾನೆ. ಆದರೆ, ಕಬೀರನ ಕಣ್ಮುಂದೆ ಕಲಿತು ಆಡಿದ ಆ ಹುಡುಗಿಯರು ಈಗೇನು ಮಾಡ್ತಿದ್ದಾರೆ? ಈಗಿನ ಹಾಕಿ ತಂಡದ ಸಾಧನೆಯ ಸಂಭ್ರಮ ಆ ಚಕ್ ದೇ ಹುಡುಗಿಯರ ಕಣ್ಣಲ್ಲಿ ಹೇಗೆ ಆಚರಣೆಗೊಳ್ಳುತ್ತಿರಬಹುದು? ಎಂಬ ಪ್ರಶ್ನೆಯೂ ಜೊತೆಜೊತೆಗೇ ಬರುತ್ತಿದೆ.

ಅಚ್ಚರಿ ಅಂದ್ರೆ ಈ ಸಿನಿಮಾದಲ್ಲಿ ಶಾರೂಖ್ ಬಿಟ್ಟರೆ ಬೇರಾವ ಪರಿಚಿತ ಮುಖಗಳೇ ಕಾಣಸಿಗಲ್ಲ. ಚಕ್ ದೇ ಗೂ ಮುನ್ನ ಪರಿಚಯವೇ ಇರದ ಈ 16 ಹುಡುಗಿಯರಲ್ಲಿ ಬಹುತೇಕರು ಯಾವತ್ತೂ ಹಾಕಿ ಆಡ್ದೋರಲ್ಲ. ಆ್ಯಕ್ಟಿಂಗೂ ಗೊತ್ತಿದ್ದೋರಲ್ಲ. ಈ ಸಿನಿಮಾಕ್ಕಾಗಿ ಟ್ರೈನರ್ ನಿಂದ 6 ತಿಂಗಳು ಹಾಕಿ ಹೇಳಿಸಿಕೊಂಡಿದ್ದಾರೆ. ಹಾಕಿಯ ಮಧ್ಯದಲ್ಲಿ ನಟನೆಯನ್ನೂ ಹೇಳಿಕೊಡಲು ನಿರ್ದೇಶಕ ಶಿಮಿತ್ ಅಮಿನ್ ಭಾರಿ ಕಷ್ಟಪಟ್ಟಿದ್ದಾರೆ.

ಚಕ್ ದೇ ಯಲ್ಲಿ  ಸ್ಪೂರ್ತಿದಾಯಕವಾಗಿ ಆಡಿದ ಹುಡುಗಿಯರ ಪೈಕಿ ಕೆಲವರ ಈಗಿನ ಕಥೆ ಬೇರೆಯದ್ದೇ ಇದೆ. ತಾನ್ಯ ಅಬ್ರೋಲ್ ತೀರಾ ಶಾರ್ಟ್‍ಟೆಂಪರಿನ ಹುಡುಗಿಯಂತೆ ನಟಿಸಿದ ಈಕೆ ಸಿನಿಮಾದಲ್ಲಿ ಪರ್ಮಿಂದರ್ ಕೌರ್. ಪಂಜಾಬಿ ಹುಡುಗಿ. `ಚಕ್ ದೇ'ಯಲ್ಲಿ ಹುಡುಗನೊಬ್ಬ ಹಿಂದಿನಿಂದ ಬಂದು ಅಟ್ಯಾಕ್ ಮಾಡಲೆತ್ನಿಸಿದಾಗ `ಗಂಡ್ಸಾದರೆ ಮುಂದೆ ಬಂದು ಎದುರಿಸು'
ಅಂದವಳು. ಅಲ್ಲಿ ಸಿಕ್ಕಾಪಟ್ಟೆ ದಢೂತಿ ಕ್ಯಾರೆಕ್ಟರ್. ಈಗ ತುಂಬಾ ಸ್ಲಿಮಾ್ಮಗಿ, ಅಲ್ಲಿಂದ ನಟನೆಯನ್ನೇ ವೃತ್ತಿ ಮಾಡಿಕೊಂಡಳು. ಕೆಲವು ಟಿವಿ ಸೀರಿಯಲ್ಲುಗಳಲ್ಲಿ ಚಾನ್ಸೂ ಸಿಕ್ಕಿತು. ಈಗಿವಳು ಸೋನಿಯಲ್ಲಿ ಬರುತ್ತಿರುವ `ಸಿಐಡಿ' ಸೀರೀಸ್‍ನಲ್ಲಿ ಜಯವಂತಿ ಶಿಂಧೆಯ ಪಾತ್ರಧಾರಿ.

ಸಾಗರೀಕಾ ಘಾಟ್ಗೆ
ಪ್ರೀತಿ ಸಬರ್‍ವಾಲ್ ಆಗಿ ನಟಿಸಿದ ಸಾಗರೀಕಳಿಗೆ ಆಗ ಹಾಕಿಯೂ ಗೊತ್ತಿರಲಿಲ್ಲ. ಆದರೆ, ನ್ಯಾಶನಲ್ ಅಥ್ಲೀಟ್ ಈಕೆ. ಚಕ್ ದೇಯಲ್ಲಿ ಕ್ರಿಕೆಟ್ ಒಂದೇ ಆಟ ಎಂದು ಭಾವಿಸಿದ ಹುಡುಗನನ್ನು ತಿರಸ್ಕರಿಸಿ ಗಮನ ಸೆಳೆದಾಕೆ. ಅಲ್ಲಿಯ ತನಕ ಮಾಡೆಲ್ ಆಗಿದ್ದವಳು, ಚಕ್ ದೇ ಮುಗಿದ ಮೇಲೆ ಮರಾಠಿ ಮತ್ತು ಹಿಂದಿ ಸಿನಿಮಾದಲ್ಲಿ ನಟಿಸಿದಳು. `ಖತ್ರೋನ್ ಕಿ ಕಿಲಾಡಿ 6'ನ ಫೈನಲಿಸ್ಟ್. ಈಗಿವಳ ಮುಂದಿನ ಪಂಜಾಬಿ ಸಿನಿಮಾ `ದಿಲ್ದಾರಿಯಾನ್'.

ಚಿತ್ರಾಶಿ ರಾವತ್

ಈಕೆಗೆ ಹಾಕಿ ತಂಡದಲ್ಲಿ ಆಡಿದ ಅನುಭವ ಇತ್ತು. ಉತ್ತರ ಖಂಡ ರಾಜ್ಯದ ಸ್ಟ್ರೈಕರ್ ಆಗಿದ್ದಂಥವಳು `ಚಕ್ ದೇ'ಯಲ್ಲಿ ಕೋಮಲ್ ಚೌಟಾಲ ಆದಳು. ಆ ಸಿನಿಮಾ ನಂತರ ಮತ್ತೆ ಈಕೆ ಹಾಕಿ ಆಡಲಿಲ್ಲ. `ಫ್ಯಾಶನ್', `ಲಕ್'ನಂಥ ಸಿನಿಮಾಗಳಲ್ಲಿ ನಟಿಸಿ, ಸೀರಿಯಲ್ ಜಗತ್ತಿಗೂ ಬಂದಳು. ಸ್ಟಾರ್‍ಪ್ಲಸ್‍ನಲ್ಲಿ ಬರುತ್ತಿರುವ `ತೂ ಮೇರಾ ಹೀರೋ' ಕಾಮಿಡಿ ಸೀರಿಯಲ್ಲಿನಲ್ಲಿ ಈಕೆಯ ಹೆಸರು ರಜನಿಗಂಧ.

ಆರ್ಯ ಮೆನನ್

ಚಕ್ ದೇಯಲ್ಲಿ ಏಕೈಕ ಮುಸ್ಲಿಂ ಹುಡುಗಿ, ಗುಲ್ ಇಕ್ಬಾಲ್ ಆಗಿ ಕಾಣಿಸಿಕೊಂಡ ಆರ್ಯಳ ಮೂಲ ಉತ್ತರ ಪ್ರದೇಶ. ಈ ಸಿನಿಮಾ ಮೂಲಕ ಗ್ಲ್ಯಾಮರ್ ಹುಚ್ಚುಹಿಡಿದು, ಅವಕಾಶಕ್ಕೆ ಕಾದಳು. ಸಿಗಲಿಲ್ಲ. ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. ಈಗ ಜಾಹೀರಾತುಗಳನ್ನು ನಿರ್ಮಿಸುವಷ್ಟು ಶ್ರೀಮಂತೆ.

ಅನೈತಾ ನಾಯರ್
ಬೆಂಗಳೂರಿನ ಮಲಯಾಳಿ ಹುಡುಗಿ. ಸಿನಿಮಾದಲ್ಲಿ ಬೆಂಗಾಲಿ ಆಟಗಾರ್ತಿ ಆಲಿಯಾ ಬೋಸ್. ಈಕೆ ರಂಗ ಕಲಾವಿದೆ. ಚಕ್‍ದೇ ನಂತರ `ಐಜಿ' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿ, ಹಿಂದಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಳು. ಈಗಿವಳು ಹಾಂಕಾಂಗ್ ವಾಸಿ. ಮದ್ವೆಯಾಗಿ, ಒಂದು ಹೆಣ್ಮಗುವೂ ಇದೆ. ಈ ಮಗುವಿನ ಹೆಸರನ್ನು ಗೆಸ್ ಮಾಡಿ... `ಆಲಿಯಾ'!

ಸ್ಯಾಂಡಿಯಾ ಫಟ್ರ್ಯಾಡೋ
ಚಕ್ ದೇಯಲ್ಲಿ ನೇತ್ರಾ ರೆಡ್ಡಿ ಆಗಿದ್ದ ಸ್ಯಾಂಡಿ, ಮುಂಬೈನವಳು. ರಾಷ್ಟ್ರೀಯ ತಂಡದಲ್ಲಿ ಹಾಕಿ ಆಡಿದ ಅನುಭವವೂ ಇತ್ತು. ಆದರೆ, ಸಿನಿಮಾ ನಂತರ ಈಕೆ ಮತ್ತೆ ಸ್ಟಿಕ್ ಹಿಡಿಯಲಿಲ್ಲ. ಹಾಕಿಯಿಂದಲೇ ದೂರವುಳಿದು ಈಗ ಪಿಆರ್‍ಒ ಆಗಿದ್ದಾಳೆ.

ಶಿಲ್ಪ ಶುಕ್ಲಾ

ಈ ಬಿಹಾರದ ಬೆಡಗಿ ಚಕ್‍ದೇಯಲ್ಲಿ ಬಿಂದಿಯಾ ನಾಯಕ್. ಈ ಸಿನಿಮಾಕ್ಕೂ ಮುಂಚೆ ಬಾಲಿವುಡ್‍ನಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪ, 2013ರಲ್ಲಿ `ಬಿಎ ಪಾಸ್' ಚಿತ್ರದಲ್ಲಿನ ನಟನೆಗಾಗಿ ಅವಾರ್ಡ್ ಪಡೆದವಳು. ಮುಂಬೈನ ಪ್ರಭಾವಿ ಡಾನ್ ಕುರಿತು ಈಕೆ ಮಾಡಿದ `ರಾಜು ಬೆನ್ ಡಾಕ್ಯೂಮೆಂಟರಿ ಈಗ ಟಿವಿ ಲೋಕದಲ್ಲಿ ದೊಡ್ಡ ಮೆಚ್ಚುಗೆಗಳಿಸುತ್ತಿದೆ.

ವಿದ್ಯಾ ಮಾಲ್ವಾಡೆ

ವಿದ್ಯಾ ಶರ್ಮಾ ಆಗಿ ಕಾಣಿಸಿಕೊಂಡ ಮಾಲ್ವಾಡೆ ಚಕ್‍ದೇಯಲ್ಲಿ ಗೋಲ್‍ಕೀಪರ್ ಮತ್ತು ಕ್ಯಾಪ್ಟನ್. ಚಕ್‍ದೇಗೂ ಬರೋಕ್ಕೆ ಮುಂಚೆ ಈಕೆಯ ಬಾಳಲ್ಲಿ ಬಿರುಗಾಳಿಯೇ ಎದ್ದಿತ್ತು. ಏರ್ ಇಂಡಿಯಾದ ಪೈಲಟ್ ಆಗಿದ್ದ ಈಕೆಯ ಗಂಡ ವಿಮಾನ ದುರಂತದಲ್ಲಿ ಮಡಿದಿದ್ದ. ಚಕ್ ದೇಯ ನಂತರ ಹಲವು ಚಿತ್ರಗಳಲ್ಲಿ ನಟಿಸಿದಳು. ಎರಡನೇ ಮದುವೆಯೂ ಆಗಿದೆ. `ಲಗಾನ್'ಗೆ ಸ್ಕ್ರೀನ್‍ಪ್ಲೇ ರೈಟರ್ ಆಗಿದ್ದ ಸಂಜಯ್ ದಯ್ಮಾನ ಕೈ ಹಿಡಿದಿದ್ದಾಳೆ. ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com