
ನವದೆಹಲಿ: ಇತ್ತೀಚೆಗೆ ಪ್ರಕಟಗೊಂಡ ವಿಶ್ವ ಹಿಂದೂ ಪರಿಷತ್‌ನ ಪತ್ರಿಕೆ 'ಹಿಮಾಲಯ ಧ್ವನಿ'ಯಲ್ಲಿ ಪ್ರಕಟಗೊಂಡಿರುವ ನಟಿ ಕರೀನಾ ಕಪೂರ್ ಅವರ ಭಾವಚಿತ್ರ ಇದೀಗ ಭಾರಿ ಚರ್ಚೆಗೀಡಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಪುನರ್ ಮತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಕರೀನಾ ಕಪೂರ್ ಅವರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿತ್ತು. ಕರೀನಾ ಅವರ ಅರ್ಧ ಮುಖ ಮತ್ತು ಬುರ್ಖಾ ಧರಿಸಿರುವ ಮುಸ್ಲಿಂ ಯುವತಿಯ ಅರ್ಧ ಮುಖವನ್ನು ಸೇರಿಸಿ ಒಂದು ಭಾವಚಿತ್ರವನ್ನಾಗಿ ಮಾಡಲಾಗಿತ್ತು. ಇದು ಇದೀಗ ಸುದ್ದಿಗೆ ಗ್ರಾಸವಾಗುತ್ತಿದ್ದು, ಹಿಮಾಲಯ ಧ್ವನಿ ಪತ್ರಿಕೆಯ ಈ ಮುಖಪುಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪತ್ರಿಕೆಯಲ್ಲಿ ಹಿಂದೂಪರ ಸಂಘಟನೆಗಳು ಆಯೋಜಿಸಿರುವ 'ಘರ್ ವಾಪಸಿ' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಲಾಗಿದೆ. ಲವ್ ಜಿಹಾದ್ ಹೆಸರಲ್ಲಿ ಮುಸ್ಲಿಂ ಯುವಕರನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಹಿಂದೂ ಮಹಿಳೆ ಮತ್ತು ಯುವತಿಯರನ್ನು ಮರುಮಂತಾಂತರದ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ಲೇಖನ ಪ್ರಕಟಿಸಲಾಗಿತ್ತು.
ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ನಟ ಸೈಫ್ ಅಲಿಖಾನ್ ರನ್ನು ಮದುವೆಯಾಗಿದ್ದಾರೆ. ಆದರೂ ಇಬ್ಬರು ಪರಸ್ಪರ ತಮ್ಮ ಧರ್ಮಗಳನ್ನು ಗೌರವಿಸುತ್ತಿದ್ದು, ಇಬ್ಬರು ತಮ್ಮ-ತಮ್ಮ ಧರ್ಮಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ ಎನ್ನುವ ಅರ್ಥದಲ್ಲಿ ಕರೀನಾ ಅವರ ಭಾವಚಿತ್ರವನ್ನು ಬಳಸಲಾಗಿದೆ ಎಂದು ವಿಎಚ್‌ಪಿ ಸಮರ್ಥನೆ ನೀಡಿದೆ.
ಸೈಫ್ ಗರಂ..!
ಆದರೆ ವಿಎಚ್‌ಪಿಯ ಹಿಮಾಲಯ ಧ್ವನಿ ಪತ್ರಿಕೆಯಲ್ಲಿ ತಮ್ಮ ಪತ್ನಿ ಕರೀನಾ ಅವರ ಫೋಟೋ ಬಳಸಿಕೊಂಡಿರುವುದಕ್ಕೆ ಸೈಫ್ ಅಲಿಖಾನ್ ಅವರು ಗರಂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement