ನಸೀರುದ್ದೀನ್ ಶಾ
ನಸೀರುದ್ದೀನ್ ಶಾ

ನಾನು ನೋಡೋಕೆ ಚೆನ್ನಾಗಿಲ್ಲ ಅದಕ್ಕೆ ಸಿನಿಮಾದಲ್ಲಿ ಚಾನ್ಸ್ ಸಿಕ್ತು

"ನಾನು ನೋಡೋಕೆ ಚೆನ್ನಾಗಿಲ್ಲ ಎಂಬ ಕಾರಣದಿಂದೇಲ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು " ಹೀಗಂತ ಹೇಳಿದ್ದು...

"ನಾನು ನೋಡೋಕೆ ಚೆನ್ನಾಗಿಲ್ಲ ಎಂಬ ಕಾರಣದಿಂದೇಲ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು " ಹೀಗಂತ ಹೇಳಿದ್ದು ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ. ಶಾ ನಟಿಸಿದ ಮೊದಲ ಚಿತ್ರ ನಿಶಾಂತ್. ಈ ಚಿತ್ರವನ್ನು ನಿರ್ದೇಶಿಸಿದ್ದು ಶ್ಯಾಂ ಬೆನೆಗಲ್.

ನಾನು ನೋಡಲು ಚೆನ್ನಾಗಿಲ್ಲ ಎಂದು ನನ್ನ ಗರ್ಲ್‌ಫ್ರೆಂಡ್ ಬಿಟ್ಟುಹೋದಳು ಆದರೆ ನೋಡೋಕೆ ಚೆನ್ನಾಗಿಲ್ಲ ಎಂಬ ಕಾರಣದಿಂದಲೇ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿತು.

ಜೈಪುರ್ ಲಿಟರೇಚರ್ ಫೆಸ್ಟಿವಲ್‌ನ ಮೊದಲ ದಿನ ಗಿರೀಶ್ ಕಾರ್ನಾಡ್‌ರ ಜತೆಗೆ ನಡೆದ And 'Then One Day' ಸಂವಾದ ಕಾರ್ಯಕ್ರಮದಲ್ಲಿ 65ರ ಹರೆಯದ ಶಾ ತಮ್ಮ ಸಿನಿಮಾರಂಗದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸಂವಾದದಲ್ಲಿ ಭಾಗವಹಿಸಿದ ಕಾರ್ನಾಡ್ ಮತ್ತು ನಸೀರುದ್ದೀನ್ ಶಾ ಅವರ ನಡುವಿನ ಬಾಂಧವ್ಯದ ಬಗ್ಗೆ ದೊಡ್ಡ ಕತೆಯೇ ಇದೆ. ಅದೇನಪ್ಪಾ ಅಂದ್ರೆ, ಕಾರ್ನಾಡ್ ಅವರ ಪ್ರತಿಷ್ಠಿತ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಡೈರೆಕ್ಟರ್ ಆಗಿದ್ದ ಕಾಲದಲ್ಲಿ ನಸೀರುದ್ದೀನ್ ಶಾ ಅಲ್ಲಿನ ವಿದ್ಯಾರ್ಥಿಯಾಗಿದ್ದರು. ಆವಾಗ ಬೆನೆಗಲ್ ತಮ್ಮ ಸಿನಿಮಾದಲ್ಲಿ ನಟಿಸಲು ನಟನೊಬ್ಬನಿಗೆ ಹುಡುಕಾಟ ನಡೆಸುತ್ತಿದ್ದರು. ಚಾಕ್ಲೇಟಿ ಬಾಯ್ ಲುಕ್ ಇಲ್ಲದೇ ಇರುವ ಒಬ್ಬ ಹುಡುಗನನ್ನು ಸೂಚಿಸಿ ಎಂದು ಬೆನೆಗಲ್ ಕಾರ್ನಾಡ್ ಅವರಿಗೆ ಹೇಳಿದ್ದು,  ಕಾರ್ನಾಡ್ ಶಾ ಅವರ ಹೆಸರನ್ನು ಸೂಚಿಸಿದ್ದರು.

ಒಂದು ದಿನ ನಸೀರ್ ನನ್ನ ಬಳಿ ಬಂದು, ನಾನು ಮುಸ್ಲಿ ಆಗಿರುವುದರಿಂದ ನನ್ನ ನಟನಾ ವೃತ್ತಿಗೆ ತಡೆಯೇನಾದರೂ ಉಂಟಾಗಬಹುದೆ? ಎಂದು ಕೇಳಿದ್ದರು. ಅದಕ್ಕೆ ನಾನು ದಿಲೀಪ್ ಕುಮಾರ್ ಕೂಡಾ ಮುಸ್ಲಿಂ. ಅವರನ್ನು ತುಂಬಾ ಜನರು ಇಷ್ಟ ಪಡುತ್ತಾರೆ ಎಂದು ಉತ್ತರಿಸಿದ್ದೆ ಎಂದು ಕಾರ್ನಾಡ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನನಗೆ ಮೊದಲ ಸಿನಿಮಾವೇ ಹೆಸರು ತಂದುಕೊಟ್ಟಿತ್ತು. ಆದರೆ ಕೆಲಸವಿಲ್ಲದ ದಿನಗಳಲ್ಲಿ ಒದ್ದಾಡಿ ನಂತರ ದಿಢೀರನೆ ಹೆಸರು ಗಳಿಸುವ ಕಷ್ಟ ಹೇಗಿತ್ತು ಎಂಬುದನ್ನು ನಾನು ಬಲ್ಲೆ ಎಂದು ಶಾ ಹೇಳಿದ್ದಾರೆ.

ಆದಾಗ್ಯೂ, ಬೆನೆಗಲ್ ಅವರ ಮಂಥನ್ ಸಿನಿಮಾದಲ್ಲಿಯೂ ಕಾರ್ನಾಡ್ ಮತ್ತು ಶಾ ಜತೆಯಾಗಿ ನಟಿಸಿದ್ದರು. ತದನಂತರ ಶಾ, ಸ್ಪರ್ಶ್, ಆಕ್ರೋಶ್, ಮಂಡಿ ಮೊದಲಾದ ಸಿನಿಮಾಗಳಲ್ಲಿ ಶಾ ಅದ್ಭುತ ನಟನೆಯ ಮೂಲಕ ಗಮನ ಸೆಳೆದರು.

ತಾನೊಬ್ಬ 'ಸ್ಟಾರ್‌' ಎಂದು ಗುರುತಿಸಿಕೊಳ್ಳಲಿಲ್ಲ ಎಂಬ ಬೇಸರ ನನಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕಲಾತ್ಮಕ ಚಿತ್ರಗಳನ್ನು ಮಾತ್ರ ಮಾಡಲು ಈ ರಂಗಕ್ಕೆ ಬಂದಿಲ್ಲ ಎಂದು ಹೇಳುವ ಶಾ, ತನ್ನ ಆರ್ಡಿನರಿ ಲುಕ್ ಬಗ್ಗೆ ಹೇಳಿದ್ದು ಹೀಗೆ:

ನಾನು ನನ್ನ ಮುಖಯನ್ನು ನೋಡಿದೆ. ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು ಎಂದೆನಿಸಿತು. ನಾನು 15-16 ವರ್ಷದವನಿರುವಾಗ ನಾನು ಗಡ್ಡ ಬೆಳಸುತ್ತಿದ್ದೆ. ಆವಾಗ ನನ್ನ ಅಮ್ಮನಿಗೆ ನನ್ನನ್ನು ಬೇಗ ಕಂಡುಹಿಡಿಯಲು ಆಗುತ್ತಿರಲಿಲ್ಲ ಎಂಬುದೇ ನನ್ನ ದೊಡ್ಡ ಸಾಧನೆಯಾಗಿತ್ತು.

ನಸೀರುದ್ದೀನ್ ಶಾ ಸ್ಟಾರ್ ಅಲ್ಲದೇ ಇದ್ದರೂ ಜನರು ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ಸಿಕ್ಕಿದ ಸ್ವಾಗತ ಅದ್ಭುತವಾಗಿತ್ತು. ಜನರು ಚಪ್ಪಾಳೆ ತಟ್ಟುತ್ತಾ ನಟನನ್ನು ಆದರದಿಂದ ಬರಮಾಡಿಕೊಂಡಿದ್ದರು. ಇದನ್ನೆಲ್ಲಾ ನೋಡಿದರೆ, ಜನರು ಆರ್ಡಿನರಿ ಲುಕ್ ಇರುವ ಓರ್ವ ನಟನನ್ನು, ಸ್ಟಾರ್ ಪಟ್ಟ ಇಲ್ಲದೇ ಇರುವ ಓರ್ವ ನಟನನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದು ಅಲ್ಲಿ ಸ್ಪಷ್ಟವಾಗುತ್ತಿತ್ತು. ನಸೀರುದ್ದೀನ್ ಶಾ ಅವರ ಲುಕ್‌ಗೆ ಅಲ್ಲ ಅವರ ನಟನೆಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಈ ಸಾಹಿತ್ಯೋತ್ಸವದ ಸಂಭ್ರಮ ಸಾಕ್ಷಿಯಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com