ತೆರೆ ಕಂಡು 15 ವರ್ಷಗಳಾದರೂ ದೂರದರ್ಶನದಲ್ಲಿ ಪ್ರದರ್ಶನ ಕಾಣದ ಅಂಬೇಡ್ಕರ್ ಚಿತ್ರ!

ಜಬ್ಬಾರ್ ಪಟೇಲ್ ನಿರ್ದೇಶಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಚಿತ್ರ ತೆರೆಕಂಡು 15 ವರ್ಷಗಳಾಗಿದೆ. ಆದರೆ ರಾಷ್ಟ್ರೀಯ ಪ್ರಶಸ್ತಿ...
ಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಚಿತ್ರ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿತ್ರ
ನವದೆಹಲಿ: ನಿನ್ನೆ ದೇಶದಾದ್ಯಂತ ಸಂವಿಧಾನ ದಿನ ಆಚರಿಸಿ, ದಿನದ ಮಹತ್ವದ ಬಗ್ಗೆ ಚರ್ಚೆಗಳು ನಡೆದಿತ್ತಾದರೂ, ಸಂವಿಧಾನ ಶಿಲ್ಪಿ ಭಾರತ ರತ್ನ ಅಂಬೇಡ್ಕರ್ ಬಗ್ಗೆ ಇರುವ ಸಿನಿಮಾವೊಂದನ್ನು ದೂರದರ್ಶನ ಇದುವರೆಗೆ ಪ್ರಸಾರ ಮಾಡಿಲ್ಲ!!
ಜಬ್ಬಾರ್ ಪಟೇಲ್ ನಿರ್ದೇಶಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಚಿತ್ರ ತೆರೆಕಂಡು 15 ವರ್ಷಗಳಾಗಿದೆ. ಆದರೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಪಟ್ಟಿಯಲ್ಲಿಯೋ, ಸಾಮಾಜಿಕ ನ್ಯಾಯ ಸಾರುವ ಸಿನಿಮಾಗಳ ಪಟ್ಟಿಯಲ್ಲಿ ಸೇರಿಸಿಯೋ ಈ ಚಿತ್ರವನ್ನು ದೂರದರ್ಶನ ಪ್ರಸಾರ ಮಾಡಲಿಲ್ಲ.
1999ರಲ್ಲಿ ಮಮ್ಮೂಟ್ಟಿಗೆ ಶ್ರೇಷ್ಠ ನಟ ಪ್ರಶಸ್ತಿ ತಂದು ಕೊಟ್ಟ ಸಿನಿಮಾ ಡಾ ಬಾಬಾ ಸಾಹೇಬ್ ಅಂಬೇಡ್ಕರ್. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿತ್ತು. 2000 ಡಿಸೆಂಬರ್ 15 ರಂದು ಈ ಸಿನಿಮಾ ಮಹಾರಾಷ್ಟ್ರದಲ್ಲಿ ತೆರೆ ಕಂಡಿತ್ತು. ಆದಾಗ್ಯೂ, ತದನಂತರ ಬಂದ ಸಿನಿಮಾಗಳು ದೂರದರ್ಶನದಲ್ಲಿ ಪ್ರದರ್ಶನಗೊಂಡರೂ ಅಂಬೇಡ್ಕರ್ ಸಿನಿಮಾಗೆ ಆ ಭಾಗ್ಯ ಲಭಿಸಲೇ ಇಲ್ಲ.
ಇಂಗ್ಲೀಷ್ ಮತ್ತು ಹಿಂದಿ ಈ ಎರಡು ಭಾಷೆಗಳಲ್ಲಿ ಅಂಬೇಡ್ಕರ್ ಜೀವನವನ್ನು ತೆರೆ ಮೇಲೆ ತರಲಾಗಿತ್ತು. ಆದರೆ ತಮಿಳಿನ ಪುದಿಗೈ ಹೊರತು ಪಡಿಸಿ ಬೇರ್ಯಾವುದೇ ನ್ಯಾಷನಲ್ ಚಾನೆಲ್ಗಳು ಇದನ್ನು ಪ್ರದರ್ಶಿಸಿಲ್ಲ. 2012 ಡಿಸೆಂಬರ್ 6 ರಂದು  ಪುದಿಗೈ ವಾಹಿನಿ ಈ ಸಿನಿಮಾ ಪ್ರಸಾರ ಮಾಡಿತ್ತು.  ತಮಿಳು, ತೆಲುಗು, ಮರಾಠಿ, ಪಂಜಾಬಿ, ಬಂಗಾಳಿ, ಗುಜರಾತಿ, ಒರಿಯಾ ಮೊದಲಾದ ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಗಿದೆ.
ಎನ್ ಎಫ್ ಡಿಸಿಎಲ್ ಈ ಸಿನಿಮಾದ ಸ್ಯಾಟಲೈಟ್, ವೀಡಿಯೋ, ಬಿಡುಗಡೆ ಹಕ್ಕುಗಳನ್ನು ಭಾಗ್ಯಶ್ರೀ ಎಂಟರ್ಪ್ರೈಸೆಸ್ ಮತ್ತು ಎಂಟರ್ಟೇನ್ಮೆಂಟ್ ಲಿಮಿಟೆಡ್ಗೆ ನೀಡಿತ್ತು. ಒಪ್ಪಂದದಂತೆ 6 ಕೋಟಿ ರು.ವನ್ನು ಕಂಪನಿಗೆ ಪಾವತಿಸಲಾಗದೇ ಇದ್ದ ಕಾರಣ ಭಾಗ್ಯಶ್ರೀ ಕಂಪನಿಗೆ ಸಿನಿಮಾ ಮೇಲೆ ಅರ್ಧ ಹಕ್ಕು ಅಷ್ಟೇ ಇದೆ. ಕೇಬಲ್ ಟಿವಿ, ವೀಡಿಯೋ ಹಕ್ಕು ಗಳ ಕಾಲಾವಧಿ 7 ವರ್ಷವಾಗಿತ್ತು. ಇದು ಕಳೆದ ನಂತರವೂ 2010ರ ವರೆಗೆ ಕಾಲಾವಧಿ ವಿಸ್ತರಿಸಲಾಗಿತ್ತು. ಸದ್ಯ, ಯಾರಿಗೂ ಪ್ರಸಾರದ ಹಕ್ಕು ಇಲ್ಲದೇ ಇರುವ ಕಾರಣ ಸಿನಿಮಾ ಪ್ರಸಾರ ಮಾಡುವಂತಿಲ್ಲ.
ಇತ್ತ ಈ ಸಿನಿಮಾದ ಪ್ರತಿಗಳು ಯೂಟ್ಯೂಬ್ನಲ್ಲಿ ಲಭ್ಯವಾಗುತ್ತಿವೆ. ನಕಲಿ ಸಿಡಿ, ಡಿವಿಡಿಗಳೂ ಮಾರುಕಟ್ಟೆಯಲ್ಲಿವೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ಆತ್ಮಕಥೆಯನ್ನಾಧರಿಸಿದ ಒಂದೊಳ್ಳೆ ಚಿತ್ರವಾಗಿದೆ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಚಿತ್ರ ಬಿಡುಗಡೆಯಾಗಿ 15 ವರ್ಷವಾದರೂ ದೂರದರ್ಶನದಲ್ಲಿ ಇಂಥಾ ಉತ್ತಮ ಚಿತ್ರವನ್ನು ಪ್ರದರ್ಶನ ಮಾಡಲು ಆಗದೇ ಇರುವ ಸ್ಥಿತಿ ನಿಜವಾಗಿಯೂ ದುರದೃಷ್ಟಕರ ಎಂದು ಹೇಳಲೇ ಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com