
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೇವಲ ಹಾಲಿವುಡ್ ನಲ್ಲಷ್ಟೇ ತಮ್ಮ ಬೇರುಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಬದಲಾಗಿ ತಮ್ಮ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಜಾಗತಿಕವಾಗಿ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅಮೆರಿಕಾದ ಶ್ವೇತ ಭವನದಲ್ಲಿ ಮಾಧ್ಯಮ ವಕ್ತಾರರಿಗೆ ಆಯೋಜಿಸಲಾಗುವ ವಾರ್ಷಿಕ ಔತಣ ಕೂಟಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಆಹ್ವಾನ ಪಡೆದಿದ್ದಾರೆ. ಈ ವಾರ್ಷಿಕ ಮಾಧ್ಯಮ ವಕ್ತಾರರ ಔತಣಕೂಟವನ್ನು ಈ ತಿಂಗಳ ಕೊನೆಗೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಆಯೋಜಿಸಿದ್ದಾರೆ.
ಹಾಲಿವುಡ್ ನಟರಾದ ಬ್ರಾಡ್ಲಿ ಕೂಪರ್, ಗ್ಲಾಡಿಸ್ ನೈಟ್, ಜೇನ್ ಫಂಡಾ ಮತ್ತು ಲೂಸಿ ಲಿಯೂ ಇವರ ಜೊತೆ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯ ಪ್ರಕಾರ 'ಶ್ವೇತ ಭವನದ ಮಾಧ್ಯಮ ವಕ್ತಾರರ ಔತಣಕೂಟವನ್ನು ಪಾರಂಪಾರಿಕವಾಗಿ ಮಾಧ್ಯಮ ಬಂಧುಗಳು, ಟಿವಿ ವಾಹಿನಿಗಳು, ಇತರ ಮನರಂಜನಾ ಮಾಧ್ಯಮಗಳಿಗಾಗಿ' ಆಯೋಜಿಸಲಾಗುತ್ತದೆ.
ಸದ್ಯಕ್ಕೆ 'ಕ್ವಾಂಟಿಕೋ' ಧಾರಾವಾಹಿಯ ಹಾಗೂ ಹಾಲಿವುಡ್ ಸಿನೆಮಾ 'ಬೇವಾಚ್' ನ ಚಿತ್ರೀಕರಣದಲ್ಲಿ ನಿರತರಾಗಿರುವ ಪ್ರಿಯಾಂಕ ಇನ್ನೂ ಈ ಔತಣಕೂಟದಲ್ಲಿ ಭಾಗವಹಿಸುವುದರ ಬಗ್ಗೆ ಧೃಢೀಕರಿಸಿಲ್ಲ.
Advertisement