ಪಾಕ್ ಕಲಾವಿದರೊಂದಿಗೆ ನಟಿಸುವುದಿಲ್ಲ, ವೇದಿಕೆ ಹಂಚಿಕೊಳ್ಳುವುದಿಲ್ಲ: ಅಜಯ್ ದೇವ್ಗನ್

ಬಾಲಿವುಡ್ ನಟ ಅಜಯ್ ದೇವ್ಗನ್ ಸದ್ಯದ ಪರಿಸ್ಥಿತಿಯಲ್ಲಿ ಪಾಕ್ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅಜಯ್ ದೇವ್ಗನ್
ಅಜಯ್ ದೇವ್ಗನ್

ಮುಂಬೈ: ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದಾಗಿನಿಂದ ಭಾರತದಲ್ಲಿರುವ ಪಾಕ್ ಕಲಾವಿದರ ಪರ- ವಿರೋಧ ಚರ್ಚೆಗಳು ನಡೆಯುತ್ತಿದ್ದು, ಬಾಲಿವುಡ್ ನಟ ಅಜಯ್ ದೇವ್ಗನ್ ಸದ್ಯದ ಪರಿಸ್ಥಿತಿಯಲ್ಲಿ ಪಾಕ್ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕ್ ಕಲಾವಿದರನ್ನು ಬಹಿಷ್ಕರಿಸುವುದನ್ನು ವಿರೋಧಿಸಿದ್ದ ನಿರ್ದೇಶಕ ಕರಣ್ ಜೋಹಾರ್ ನಿರ್ದೇಶನದ ಸಿನಿಮಾ ಎ ದಿಲ್ ಹೈ ಮುಷ್ಕಿಲ್ ಚಿತ್ರದ ಬಿಡುಗಡೆಯ ವೇಳೆಯಲ್ಲೇ ಅಜಯ್ ದೇವ್ಗನ್ ನಟನೆಯ ಶಿವಾಯ್ ಸಿನಿಮಾ ಸಹ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಜಯ್ ದೇವ್ಗನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಜಯ್ ದೇವ್ಗನ್ ತಮ್ಮ ಸಿನಿಮಾ ಶಿವಾಯ್ ಪಾಕಿಸ್ತಾನದಲ್ಲಿ ನಿಷೇಧಗೊಂಡರೂ ಚಿಂತೆ ಇಲ್ಲ ಎಂದು ಹೇಳಿದ್ದು, ದೇಶ ಮೊದಲು ಆ ನಂತರ ಸಿನಿಮಾ, ಕಲಾವಿದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎನ್ಎನ್-ನ್ಯೂಸ್ 18 ಗೆ ಸಂದರ್ಶನ ನೀಡಿದ ವೇಳೆ ಪಾಕಿಸ್ತಾನ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಅಜಯ್ ದೇವ್ಗನ್, ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಕಲಾವಿದರೊಂದಿಗೆ ಸಿನಿಮಾ ಮಾಡುವುದಾಗಲಿ ಅಥವಾ ವೇದಿಕೆ ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ಏಕೆಂದರೆ ದೇಶ ಮೊದಲು, ನನ್ನ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ ಚಿಂತೆಯಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಹಣ ಗಳಿಸುತ್ತಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿದ್ದಾರೆ. ಅವರಿಂದ ಭಾರತೀಯರು ಕಲಿಯುವುದು ಇದೆ ಎಂದು ಅಜಯ್ ದೇವ್ಗನ್ ಅಭಿಪ್ರಾಯಪಟ್ಟಿದ್ದಾರೆ. ಸೆ.18 ರಂದು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರು ಪಾಕ್ ಭಯೋತ್ಪಾದನೆಯನ್ನು ಖಂಡಿಸಬೇಕು ಇಲ್ಲವೇ ಭಾರತದಿಂದ ಹೊರ ಹೋಗಬೇಕು, ಇಲ್ಲವೇ ಪಾಕ್ ಕಲಾವಿದರನ್ನು ಬಹಿಷ್ಕರಿಸುತ್ತೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಎನ್ಎಸ್ ಕರೆ ನೀಡಿತ್ತು. ಪರಿಣಾಮ ಪಾಕ್ ಕಲಾವಿದರ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com