ದಂಗಲ್ ಖ್ಯಾತಿಯ ಝೈರಾ ವಾಸಿಮ್ ಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ
ದಂಗಲ್ ಖ್ಯಾತಿಯ ಬಾಲಿವುಡ್ ನಟಿ ಝೈರಾ ವಾಸಿಮ್ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ನವದೆಹಲಿ: ದಂಗಲ್ ಖ್ಯಾತಿಯ ಬಾಲಿವುಡ್ ನಟಿ ಝೈರಾ ವಾಸಿಮ್ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಸ್ವತಃ ನಟಿ ಝೈರಾ ಅವರೇ ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ ಕಣ್ಣೀರಿಡುತ್ತಾ ಬಹಿರಂಗಪಡಿಸಿದ್ದಾರೆ. ನಟಿ ಹೇಳಿಕೊಂಡಿರುವಂತೆ ಇತ್ತೀಚೆಗೆ ದೆಹಲಿಯಿಂದ ಮುಂಬೈಗೆ ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂಬಂದಿಯ ಸೀಟ್ ನಲ್ಲಿ ಕುಳಿತಿದ್ದ ಮಧ್ಯವಯಸ್ಕ ಪುರುಷನೊಬ್ಬ ತನ್ನ ದೇಹದ ಭಾಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ವಿಡಿಯೋದ ಕೊನಯಲ್ಲಿ 'ನನಗೆ ನೋವಾಗಿದೆ. ಇದೇ ಏನು ನೀವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ?' ಎಂದು 17 ವರ್ಷದ ನಟಿ ಝೈರಾ ಕಣ್ಣೀರಿಟ್ಟಿದ್ದಾರೆ.
"ನಾನು ಮಲಗಿದ್ದ ವೇಳೆ ಆ ವ್ಯಕ್ತಿ ನನ್ನ ಕತ್ತಿನ ಭಾಗವನ್ನು ಸ್ಪರ್ಶಿಸುತ್ತಿದ್ದ. ಆದರೆ ನಾನು ವಿಡಿಯೋ ಚಿತ್ರೀಕರಿಸಲು ಮಂದ ಬೆಳಕು ಅಡ್ಡಿ ಪಡಿಸಿತು.ಆದರೂ ನಾನು ಆತನ ಕೆಲ ಫೋಟೋಗಳನ್ನು ಕ್ಲಿಕ್ಕಿಸಿದೆ' ಎಂದು ನಟಿ ಹೇಳಿಕೊಂಡಿದ್ದಾರೆ.
ಇನ್ನು ವಿಮಾನದಿಂದ ಇಳಿಯುತ್ತಿದ್ದಂತೆ ತನ್ನ ಮೇಲಾದ ದೌರ್ಜನ್ಯವನ್ನು ನಟಿ ವಿಮಾನದ ಸಿಬ್ಬಂದಿಗಳ ಗಮನಕ್ಕೆ ತಂದಿದ್ದು, ವಿಮಾನಯಾನ ಸಂಸ್ಥೆ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. ಪ್ರಸ್ತುತ ಝೈರಾ ಅವರು ನೀಡಿರುವ ಮಾಹಿತಿ ಮೇರೆಗೆ ಶಂಕಿತ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಮತ್ತು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.