ಸಿನಿಮಾ ನನಗೆ ಮುಖ್ಯ ಹೌದು, ಆದರೆ ಆತ್ಮ ಗೌರವಕ್ಕಿಂತ ಹೆಚ್ಚು ಅಲ್ಲ: ಕಂಗನಾ ರನೌತ್

ಸ್ವ ಪ್ರತಿಭೆಯಿಂದ ಬಾಲಿವುಡ್ ನಲ್ಲಿ ಗುರುತಿಸಿಕೊಂಡು ನೆಲೆನಿಂತ ನಟಿ ಕಂಗನಾ ರಾನತ್. ಯಾರ...
ಕಂಗನಾ ರನೌತ್
ಕಂಗನಾ ರನೌತ್
ಸ್ವ ಪ್ರತಿಭೆಯಿಂದ ಬಾಲಿವುಡ್ ನಲ್ಲಿ ಗುರುತಿಸಿಕೊಂಡು ನೆಲೆನಿಂತ ನಟಿ ಕಂಗನಾ ರನೌತ್. ಯಾರ ಬಗ್ಗೆಯಾಗಲಿ ಅಥವಾ ಯಾವುದರ ಬಗ್ಗೆಯಾಗಲಿ ತಮ್ಮ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ, ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಮುಕ್ತವಾಗಿ ಮಾತನಾಡುವ ದಿಟ್ಟ ಯುವತಿ.
ಇಂದು ಅವರ ನಟನೆಯ ಸಿಮ್ರನ್ ಚಿತ್ರ ತೆರೆ ಕಂಡಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಲ್ಲಿ ಅವರ ರೂಪಾಂತರ, ಬೆಳವಣಿಗೆ ಅವರ ಸುತ್ತ ಸುತ್ತಿಕೊಂಡಿರುವ ವಿವಾದಗಳ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆಗೆ ಮುಕ್ತವಾಗಿ ಮಾತನಾಡಿದಾಗ...
ನೀವು ನಿಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ಮಾತನಾಡುತ್ತೀರಿ, ವಿವಾದಗಳನ್ನು ಎಬ್ಬಿಸುತ್ತೀರಿ ಎಂಬ ಆರೋಪವಿದೆಯಲ್ಲವೇ?
ಅದು ಸುಳ್ಳು. ನನಗೆ ಅನಿಸಿದ್ದನ್ನು ನೇರವಾಗಿ ಯಾವಾಗಲೂ ಹೇಳುತ್ತೇನೆ. ನನ್ನ ಬಗ್ಗೆ ನನಗೆ ಹೆಮ್ಮೆಯಿರುವ ಹೆಣ್ಣು ಮಗಳು ನಾನು. ಚಿತ್ರದ ಬಾಕ್ಸ್ ಆಫೀಸ್ ಯಶಸ್ಸು, ಅದರ ಬ್ಯುಸಿನೆಸ್ ಬಗ್ಗೆ ನಾನು ಯೋಚಿಸುವವಳಾಗಿದ್ದರೆ, ಖಾನ್ ಗಳ ಜೊತೆ ಚಿತ್ರದಲ್ಲಿ ನಟಿಸಲು ಇಲ್ಲ ಎನ್ನುತ್ತಿರಲಿಲ್ಲ ಮತ್ತು ಕರಣ್ ಜೋಹರ್ ಅವರನ್ನು ಎದುರು ಹಾಕಿಕೊಳ್ಳುತ್ತಿರಲಿಲ್ಲ. ಸಿನಿಮಾ ನನ್ನ ಪಾಲಿಗೆ ಮುಖ್ಯ ಹೌದು, ಆದರೆ ನನ್ನ ಸ್ವಂತ ಘನತೆಗಿಂತ ದೊಡ್ಡದಲ್ಲ.
ನೀವು ಕಥೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ?
ಮಹಿಳಾ ಪ್ರಧಾನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಾನು ಇಷ್ಟಪಡುತ್ತೇನೆ. ಕಥೆಯಲ್ಲಿ ಸಾಮಾಜಿಕ ಸಂದೇಶವಿದ್ದರೆ ಇನ್ನೂ ಇಷ್ಟವಾಗುತ್ತದೆ. ಸಿಮ್ರನ್ ಚಿತ್ರ ಹಾಗೆಯೇ ಇದೆ, ವಿಮೋಚನೆ ಕುರಿತ ಸಂದೇಶ ಈ ಚಿತ್ರದಲ್ಲಿದೆ. ಜೀವನದಲ್ಲಿ ನೀವು ತಪ್ಪು ದಾರಿ ತುಳಿದರೆ, ಅದರಿಂದ ಹೊರಬಂದು ಒಳ್ಳೆಯ ಜೀವನ ಮಾಡಲು ಇನ್ನೊಂದು ದಾರಿ ಇದ್ದೇ ಇರುತ್ತದೆ. ವಲಸಿಗರ ಜೀವನವನ್ನು ಇಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.
ಸಿಮ್ರನ್ ಬಗ್ಗೆ ಇನ್ನಷ್ಟು ಹೇಳಿ?
ಸಿಮ್ರನ್ ಅಲಿಯಾಸ್ ಪ್ರಫುಲ್ ಪಟೇಲ್ ಮುಕ್ತ ಮನೋಭಾವದ ಎನ್ಆರ್ ಐ ಮಹಿಳೆ. ಅಮೆರಿಕದಲ್ಲಿ ವಾಸಿಸುತ್ತಿರುವ ಆಕೆ ಸ್ವತಂತ್ರ ಜೀವನ ನಡೆಸಬೇಕೆಂಬ ಮನೋಭಾವದವಳು. ಅದೊಂದೇ ಅವಳ ಅಭಿಲಾಷೆ. ಜೀವನದ ಅನ್ವೇಷಣೆಯಲ್ಲಿ ಜೂಜಾಟಕ್ಕೆ ಹೇಗೆ ಸಿಲುಕಿಹಾಕಿಕೊಳ್ಳುತ್ತಾಳೆ ಎಂಬುದರ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಕನಸು ಮತ್ತು ಆಕಾಂಕ್ಷೆಗಳನ್ನು ಹೊತ್ತ ಮಹಿಳೆಯ ಕಥೆಯಿದು. ಇದು ನಮ್ಮೆಲ್ಲರ ನಿಜ ಜೀವನಕ್ಕೆ ಹತ್ತಿರವಾಗಿದೆ.
ಚಿತ್ರ ಹೇಗೆ ವಿಭಿನ್ನವಾಗಿದೆ?
ಅಪರಾಧದ ಕಥೆ ಈ ಚಿತ್ರದಲ್ಲಿಲ. ಆದರೆ ಅಪರಾಧಿಯೊಂದರ ಕಥೆ. ಕ್ರಿಮಿನಲ್ ಗಳ ಬಗ್ಗೆ ಬಾಲಿವುಡ್ ನಲ್ಲಿ ಬರುವ ಚಿತ್ರಗಳು ಸಾಮಾನ್ಯವಾಗಿ ಕಪ್ಪು ಅಥವಾ ಬಿಳಿ ಇರುತ್ತದೆ. ಎನ್ಆರ್ ಐ ಮಹಿಳೆಯ ಜೀವನವನ್ನು ಪ್ರಾಮಾಣಿಕವಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಿ ಮಾಡಲಾಗಿದೆ. ಎನ್ಆರ್ ಐ ಎಂದರೆ ಹಾಡುವುದು, ಕುಣಿಯುವುದು, ಮೋಜು-ಮಸ್ತಿ, ಕೈ ತುಂಬಾ ಹಣ ಇರುವವಳು ಎಂದಲ್ಲ.
ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಕಥೆಯೇ ಸಿಮ್ರನ್?
ಅಲ್ಲ.  ಯುರೋಪ್ ನಲ್ಲಿ ನಿಶ್ಶಸ್ತ್ರ ಪುರುಷರು ಮತ್ತು ಮಹಿಳೆಯರಿಂದ ನಡೆಯುವ ಸರಳ ಅಪರಾಧಗಳ ಸಂಕಲನವಾಗಿದೆ.ಯುರೋಪಿಯನ್ನರಿಗೆ ಈ ಬಗ್ಗೆ ಪೂರ್ವಾಗ್ರಹವಿರುತ್ತದೆ. ವಾಸ್ತವವಾಗಿ ಅವರು ನಮಗೆ ಭಯಪಡುತ್ತಾರೆ. ಈ ವಿಷಯ ನಮಗೆ ಹಾಸ್ಯವಾಗಿ ಕಂಡಿತು. ಹೀಗಾಗಿ ನಾನು ಮತ್ತು ಹನ್ಸಲ್ ಅದನ್ನು ಕಥೆಯ ರೂಪದಲ್ಲಿ ಹೇಳುವ ಅಗತ್ಯವಿದೆ ಎಂದು ಆಲೋಚಿಸಿದೆವು.
ಸಿಮ್ರನ್ ಚಿತ್ರಕ್ಕೆ ನೀವು ಸಹ ಬರಹಗಾರ್ತಿಯಾಗಿರುವುದರಿಂದ, ನಿಮ್ಮನ್ನೇ ನೀವು ಸ್ವಲ್ಪ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದೀರಾ?
ಚಿತ್ರದ ಬರವಣಿಗೆಯಲ್ಲಿ ನಾನು ಅಪೂರ್ವ ಅಸ್ರಾಣಿಯವರ ಜೊತೆ ಕೆಲಸ ಮಾಡಿದ್ದೇನೆ. ಯಾವುದು ನನ್ನ ಜೀವನಕ್ಕೆ ಪ್ರೇರೇಪಿಸಲ್ಪಟ್ಟಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಇದರಲ್ಲಿ ನನ್ನ ಅನುಭವದ ಸ್ವಲ್ಪ ಭಾಗಗಳಿವೆ ಮುಖ್ಯವಾಗಿ ನನ್ನ ತಂದೆಯ ಜೊತೆಗೆ ನನ್ನ ಅನುಭವ.
ಇಷ್ಟು ವರ್ಷಗಳಲ್ಲಿ ಬಾಲಿವುಡ್ ನಲ್ಲಿ ನೀವು ಹೇಗೆ ಬದಲಾವಣೆ ಕಂಡಿದ್ದೀರಿ?
ಸಣ್ಣ ವಯಸ್ಸಿನಲ್ಲಿಯೇ ಬಾಲಿವುಡ್ ಚಿತ್ರರಂಗಕ್ಕೆ ಬಂದವಳು ನಾನು. ಬದಲಾವಣೆ ಅನಿವಾರ್ಯ. ಬಾಲಿವುಡ್ ಎಂಬ ಚಿತ್ರ ಜಗತ್ತು ಸವಾಲಾಗಿದ್ದು, ತುಂಬಾ ಪರೀಕ್ಷೆ ಒಡ್ಡುತ್ತದೆ. ಇಂತಹ ಪರಿಸರದಲ್ಲಿ ನೆಲೆನಿಂತು ನಮ್ಮತನವನ್ನು ತೋರಿಸುವುದು ಒಂದು ಸವಾಲು. ಇದೊಂದು ವಿಚಿತ್ರ ಜಾಗ. ಇದರೊಟ್ಟಿಗೆ ನೀವು ಬದಲಾಗುತ್ತಾ ಬೆಳೆಯುತ್ತಾ ಹೋದರೆ ನೀವು ಪ್ರಬುದ್ಧರಾಗುತ್ತೀರಿ.
ನಿಮ್ಮ ಚೊಚ್ಚಲ ನಿರ್ದೇಶನ ಚಿತ್ರದ ಬಗ್ಗೆ ಹೇಳಿ
ಅದರ ಬಗ್ಗೆ ಮಾತನಾಡುವುದು ಈ ಹಂತದಲ್ಲಿ ಬಹಳ ಬೇಗವಾಗುತ್ತದೆ ಎನಿಸುತ್ತದೆ.ವೃದ್ಧ ಮಹಿಳೆ ಮತ್ತು ಮಗುವಿನ ಬಗ್ಗೆ ಇರುವ ಸಂತೋಷದ ಚಿತ್ರವದು..ಇದು ಕಾಲ್ಪನಿಕ-ರೀತಿಯಲ್ಲಿ, ಅಲಂಕಾರಿಕ ಚಿತ್ರವಾಗಿರುತ್ತದೆ. ಮಣಿಕಾರ್ಣಿಕ ಚಿತ್ರ ಮುಗಿಸಿದ ಬಳಿಕ ನಾನು ಈ ಬಗ್ಗೆ ಹೆಚ್ಚು ಮಾತನಾಡುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com