ಪಣಜಿ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಬಾಲಿವುಡ್ ಚಿತ್ರ 'ಪದ್ಮಾವತ್' ಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿದ್ದರೆ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ನಮ್ಯ ಅಭ್ಯಂತರ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
'ಅವರ ಬಳಿ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಇದ್ದರೆ ನಮ್ಮ ಆಕ್ಷೇಪ ಇಲ್ಲ. ಆದರೆ ಚಿತ್ರ ಪ್ರದರ್ಶನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದಾದರೆ, ಆ ಕುರಿತು ಪರಿಶೀಲಿಸಲಾಗುವುದು' ಎಂದು ಪರಿಕ್ಕರ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಮತ್ತು ರಾಣಿ ಪದ್ಮಾವತಿ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಗೋವಾ ಮಹಿಳಾ ಬಿಜೆಪಿ ಘಟಕ ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಗೋವಾ ಬಿಜೆಪಿ ಸೇರಿದಂತೆ ದೇಶಾದ್ಯಂತ ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಚಿತ್ರದ ಹೆಸರು ಪದ್ಮಾವತ್ ಎಂದು ಬದಲಾವಣೆ ಮಾಡಿದ ನಂತರ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.