ಪಾಕ್ ನಲ್ಲಿ 'ಯು' ಪ್ರಮಾಣ ಪತ್ರ; ಕತ್ತರಿ ಪ್ರಯೋಗವಿಲ್ಲದೇ 'ಪದ್ಮಾವತ್' ತೆರೆಗೆ

ಭಾರತದಲ್ಲಿ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಗಾಗದೇ 'ಯು' ಪ್ರಮಾಣ ಪತ್ರ ಪಡೆದು ಯಶಸ್ವಿಯಾಗಿ ತೆರೆಗೆ ಬರಲು ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತದಲ್ಲಿ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಗಾಗದೇ 'ಯು' ಪ್ರಮಾಣ ಪತ್ರ ಪಡೆದು ಯಶಸ್ವಿಯಾಗಿ ತೆರೆಗೆ ಬರಲು ಸಜ್ಜಾಗಿದೆ.
ಈ ಬಗ್ಗೆ ಸ್ವತಃ ಪಾಕಿಸ್ತಾನ ಸೆನ್ಸಾರ್ ಮಂಡಳಿ ಮುಖ್ಯಸ್ಥ ಮೊಬಷೀರ್ ಹಸನ್ ಅವರು ಹೇಳಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಭಾರತೀಯ ನಟ-ನಟಿಯರ ಅಭಿನಯದ ಪದ್ಮಾವತ್ ಚಿತ್ರಕ್ಕೆ ಪಾಕಿಸ್ತಾನ ಸೆನ್ಸಾರ್ ಮಂಡಳಿ 'ಯು' ಪ್ರಮಾಣ ಪತ್ರ ನೀಡಿದ್ದು, ಚಿತ್ರದ ಯಾವುದೇ ದೃಶ್ಯಗಳಿಗೂ ಕತ್ತರಿ ಹಾಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಚಿತ್ರವನ್ನು ನಿಷ್ಪಕ್ಷಪಾತ, ಸೃಜನಶೀಲ ಕಲೆ ಮತ್ತು ಆರೋಗ್ಯಕರ ಮನರಂಜನೆಯ ಚಿತ್ರ ಎಂದು ಬಣ್ಣಿಸಿದ್ದಾರೆ.
ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನ ಸಿಬಿಎಫ್ ಸಿ ಕಚೇರಿ ಪದ್ಮಾವತ್ ಚಿತ್ರವನ್ನು ವೀಕ್ಷಣೆ ಮಾಡಿದ್ದು, ಚಿತ್ರದ ಯಾವೊಂದು ದೃಶ್ಯಕ್ಕೂ ಕತ್ತರಿ ಹಾಕಿಲ್ಲ ಎಂದು ತಿಳಿದುಬಂದಿದೆ. ಭಾರತದಲ್ಲಿ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸಿಬಿಎಫ್ ಸಿ ಮಂಡಳಿ ಚಿತ್ರ ವೀಕ್ಷಣೆಗಾಗಿ ಖೈದ್ ಇ ಅಜಮ್ ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವಖಾರ್ ಅಲಿ ಶಾ ಅವರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸಿತ್ತು. ಅವರ ಅಭಿಪ್ರಾಯದ ಮೇರೆಗೆ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದಲ್ಲಿ ರಜಪೂತ ರಾಣಿ ಪದ್ಮಾವತಿ ಮತ್ತು ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಲ್ಜಿ ನಡುವಿನ ಸಂಬಂಧದ ಕುರಿತು ಬಿಂಬಿಸಲಾಗಿದೆ ಎಂಬ ಆರೋಪದಿಂದ ಭಾರತದಲ್ಲಿ ಚಿತ್ರಕ್ಕೆ ಕರ್ಣಿ ಸೇನಾ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com