
ಮುಂಬೈ: ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿರುವಂತೆಯೇ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಸುಶಾಂತ್ ಸಿಂಗ್ ಪಾರ್ಥೀವ ಶರೀರವನ್ನು ಆಸ್ಪತ್ರೆಗೆ ತಂದಾಗ ಅವರ ಕಾಲು ಮುರಿದಿತ್ತು, ದೇಹದ ಮೇಲೆ ಗಾಯದ ಗುರುತುಗಳಿತ್ತು, ಅದು ಕೊಲೆ ಅಂತಾ ವೈದ್ಯರು ಹೇಳುತ್ತಿದ್ದನ್ನು ಕೇಳಿದ್ದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದು,ಇದನ್ನು ನ್ಯೂಸ್ ನೇಷನ್ ವರದಿ ಮಾಡಿದೆ. ಈ ವಿಡಿಯೋವನ್ನು ಸುಶಾಂತ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕಿರ್ತಿ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಹಿರಿಯ ವೈದ್ಯರು ಅದು ಕೊಲೆ ಅಂತಾ ಹೇಳಿದರು. ಆದರೆ, ಪೊಲೀಸರು ಆತ್ಮಹತ್ಯೆ ಅಂತಾ ಘೋಷಿಸಿದ್ದಾರೆ. ಕಾಲುಗಳನ್ನು ಮುರಿದಿರುವುದನ್ನು ಡಾಕ್ಟರ್ ಕೂಡಾ ಒಪ್ಪಿಕೊಂಡಿದ್ದಾರೆ ಆದರೆ, ಕೇಸ್ ನಲ್ಲಿ ಅದನ್ನು ಬಿಂಬಿಸಿಲ್ಲ ಅಂತಾ ಅವರು ಹೇಳುತ್ತಾರೆ.
ಪ್ರಸ್ತುತ ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ಸುಶಾಂತ್ ಮಾಜಿ ಗೆಳತಿ ರೀಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌಕಿ ಚಕ್ರವರ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಇಡಿ ಮತ್ತು ಮಾದಕ ದ್ರವ್ಯ ನಿಗ್ರಹ ದಳ ಕೂಡಾ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿವೆ.
Advertisement