ಪರಂಪರೆಯನ್ನು ಬಿಟ್ಟುಹೋದ 'ಟ್ರ್ಯಾಜಿಡಿ ಕಿಂಗ್' ದಿಲೀಪ್ ಕುಮಾರ್: ಹುಟ್ಟು, ಬಾಲ್ಯ, ಬಣ್ಣದ ಬದುಕಿನ ಕಿರು ಪರಿಚಯ 

'ಲೆಜೆಂಡರಿ ಕಿಂಗ್', 'ಟ್ರ್ಯಾಜಿಡಿ ಕಿಂಗ್' ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಯಲ್ಪಡುವ ಬಾಲಿವುಡ್ ನ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ತಮ್ಮ 98 ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ದಿಲೀಪ್ ಕುಮಾರ್
ದಿಲೀಪ್ ಕುಮಾರ್

ಮುಂಬೈ: 'ಲೆಜೆಂಡರಿ ಕಿಂಗ್', 'ಟ್ರ್ಯಾಜಿಡಿ ಕಿಂಗ್' ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಯಲ್ಪಡುವ ಬಾಲಿವುಡ್ ನ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ತಮ್ಮ 98 ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ನಸುಕಿನ ಜಾವ ಮುಂಬೈಯ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಬಾಲಿವುಡ್ ನ ಯುಗವೊಂದು ಅಂತ್ಯವಾಗಿದೆ.

5 ದಶಕಗಳಿಗೂ ಅಧಿಕ ಸುದೀರ್ಘ ವೃತ್ತಿಜೀವನವನ್ನು ಬಾಲಿವುಡ್ ನಲ್ಲಿ ಕಳೆದ ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಸುವರ್ಣ ಯುಗವನ್ನು ಕಂಡವರು. 65ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚಿತ್ರಪ್ರೇಮಿಗಳ ಮನದಲ್ಲಿ ಅಜರಾಮರರಾದರು.

ಜನನ: ಬಾಲಿವುಡ್ ನ ಮೊದಲ ಖಾನ್ ಎಂದೇ ದಿಲೀಪ್ ಕುಮಾರ್ ಜನಪ್ರಿಯ. ಈಗಿನ ಪಾಕಿಸ್ತಾನದ ಪೇಶಾವರದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಇವರ ಬಾಲ್ಯದ ಹೆಸರು ಮೊಹಮ್ಮದ್ ಯೂಸಫ್ ಖಾನ್. ನಂತರ ಚಿತ್ರರಂಗಕ್ಕೆ ಬಂದ ಮೇಲೆ ದಿಲೀಪ್ ಕುಮಾರ್ ಆದರು.

1922ರ ಡಿಸೆಂಬರ್ 11ರಂದು ಜನಿಸಿದ ದಿಲೀಪ್ ಕುಮಾರ್ ಅವರಿಗೆ 12 ಮಂದಿ ಒಡಹುಟ್ಟಿದವರು. ನಾಶಿಕ್ ನ ದಿಯೊಲಾಲಿಯ ಬರ್ನ್ಸ್ ಶಾಲೆಯಲ್ಲಿ ಶಾಲಾ ಹಂತದ ಶಿಕ್ಷಣ ಮುಗಿಸಿದ್ದರು. ಬಾಲಿವುಡ್ ನ ದಂತಕಥೆ ರಾಜ್ ಕಪೂರ್ ದಿಲೀಪ್ ಕುಮಾರ್ ಅವರ ಬಾಲ್ಯದ ಗೆಳೆಯ, ಕೊನೆಗೆ ಚಿತ್ರಗಳಲ್ಲಿಯೂ ಸಹೋದ್ಯೋಗಿಗಳಾದರು.

ಬಾಲ್ಯ: 1943ರಲ್ಲಿ ಪುಣೆಯ ಆರ್ಮಿ ಕ್ಲಬ್ ನ  ಸ್ಯಾಡ್ ವಿಚ್ ಸ್ಟಾಲ್ ನಡೆಸುತ್ತಿದ್ದರು. ಅವರ ತಂದೆ ಪೇಶಾವರದಲ್ಲಿ ಭೂಮಿ ಹೊಂದಿದ್ದರು, ಹಣ್ಣಿನ ವ್ಯಾಪಾರ ಕೂಡ ಮಾಡುತ್ತಿದ್ದರು. ತಂದೆ ನಡೆಸುತ್ತಿದ್ದ ಸಣ್ಣಮಟ್ಟದ ಉದ್ಯಮವನ್ನು ಕಂಡು ನಂತರ ದಿಲೀಪ್ ಕುಮಾರ್ ಮುಂಬೈಗೆ ವಲಸೆ ಬಂದು ಅಲ್ಲಿ ಕೂಡ ಉದ್ಯಮ ಆರಂಭಿಸಿ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶ ಹೊಂದಿದ್ದರು.

ಆದರೆ ಅವರ ಹಣೆಯಲ್ಲಿ ಬರೆದಿದ್ದೇ ಬೇರೆ, ಮುಂಬೈಯ ಚರ್ಚ್ ಗೇಟ್ ಸ್ಟೇಷನ್ ನಲ್ಲಿ ಡಾ ಮಸಲಿ ಎಂಬುವವರನ್ನು ಭೇಟಿ ಮಾಡಿದ್ದರು, ಅವರು ದಿಲೀಪ್ ಕುಮಾರ್ ಅವರನ್ನು ನಟಿ ದೇವಿಕಾ ರಾಣಿಗೆ ಪರಿಚಯಸಿದರು. ಆಗ ದೇವಿಕಾ ರಾಣಿಯವರು ಮಲಾಡ್ ನ ಬಾಂಬೆ ಟಾಕೀಸ್ ನಲ್ಲಿ ಫಿಲ್ಮ್ ಸ್ಟುಡಿಯೊ ನಡೆಸುತ್ತಿದ್ದರು. ಅದೀಗ ಮುಚ್ಚಿಹೋಗಿದೆ.

ಹಲವು ಪ್ರಶಸ್ತಿಗಳ ಸರದಾರ: ರೊಮ್ಯಾನ್ಸ್ ಕಿಂಗ್ ಎಂದು ಚಿತ್ರಪ್ರೇಮಿಗಳಿಂದ ಕರೆಯಲ್ಪಡುತ್ತಿದ್ದ ದಿಲೀಪ್ ಕುಮಾರ್ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. 8 ಬಾರಿ ಗಳಿಸುವ ಮೂಲಕ ಅತಿಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಲ್ಲದೆ ಫಿಲ್ಮ್ ಫೇರ್ ಅವಾರ್ಡ್ ಗಳಿಸಿದ್ದ ಮೊದಲ ನಟ. ಹಿಂದಿ ಸಿನೆಮಾ ಜಗತ್ತಿಗೆ ತಾಂತ್ರಿಕವಾಗಿ ನಟನಾ ಶೈಲಿಯನ್ನು ಕೂಡ ಪರಿಚಯಿಸಿದ್ದರು.

ಬಾಲಿವುಡ್ ಗೆ ದಿಲೀಪ್ ಕುಮಾರ್ ಅವರು ಪಾದಾರ್ಪಣೆ ಮಾಡಿದ್ದು 'ಜ್ವಾರ್ ಭಾಟಾ' ಚಿತ್ರದ ಮೂಲಕ. ಅದು ಬಿಡುಗಡೆಯಾಗಿದ್ದು 1944ರಲ್ಲಿ. ಪ್ರೇಕ್ಷಕರ ಮನಗೆದ್ದಿರಲಿಲ್ಲ. ನಂತರ 1947ರಲ್ಲಿ ಜುಗ್ನು ಸಿನೆಮಾ ಬಂತು. ಅದು ಹಿಟ್ ಆಗಿತ್ತು.

ದಿಲೀಪ್ ಕುಮಾರ್ ಬಾಲಿವುಡ್ ಪಯಣ: ಉರ್ದು ಭಾಷೆ ಚೆನ್ನಾಗಿ ತಿಳಿದಿದ್ದ ದಿಲೀಪ್ ಕುಮಾರ್ ಆರಂಭದಲ್ಲಿ ಕಥೆ ಬರೆಯಲು, ಸಾಹಿತ್ಯ ಬರೆಯಲು ಸಹಾಯ ಮಾಡುತ್ತಿದ್ದರಂತೆ. ಸಿನೆಮಾ ಮೇಲಿನ ಪ್ರೀತಿ, ಇವರ ಪ್ರತಿಭೆಯನ್ನು ಆರಂಭದಲ್ಲಿ ಗುರುತಿಸಿದವರೇ ದೇವಿಕಾ ರಾಣಿ. ಅವರ ಮನವಿ ಮೇರೆಗೆ ಸಿನೆಮಾದಲ್ಲಿ ತಮ್ಮ ಮೊಹಮ್ಮದ್ ಯೂಸಫ್ ಖಾನ್ ಎಂಬ ಹೆಸರನ್ನು ದಿಲೀಪ್ ಕುಮಾರ್ ಎಂದು ಬದಲಿಸಿಕೊಂಡರಂತೆ. ನಂತರ ಬಾಂಬೆ ಟಾಕೀಸ್ ನಲ್ಲಿ ಜ್ವಾರ್ ಭಾಟಾ ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಅವರು ಆರಂಭಿಸಿದ್ದು.

ಆರಂಭದ ದಿನಗಳಲ್ಲಿ ಕ್ಯಾಮರಾ ಮುಂದೆ ನಿಂತುಕೊಂಡು ಏನು ಮಾಡಬೇಕು, ಹೇಗೆ ನಟನೆ ಮಾಡಬೇಕೆಂದು ಕೂಡ ದಿಲೀಪ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವಂತೆ, ನಟನೆ ಎಂಬುದು ಕಲಿತು, ಅಧ್ಯಯನ ಮಾಡಿ, ಅಭ್ಯಾಸ ಮಾಡುವುದರಿಂದಲೇ ಬರುತ್ತದೆ ಎಂದು ತಮ್ಮ ಆತ್ಮಚರಿತ್ರೆ 'ದ ಸಬ್ಸ್ಟೆನ್ಸ್ ಅಂಡ್ ದ ಶ್ಯಾಡೊ' ಪುಸ್ತಕದಲ್ಲಿ ಬರೆದಿದ್ದಾರೆ.

ಬಾಂಬೆ ಟಾಕೀಸ್ ನಲ್ಲಿದ್ದಾಗಲೇ ಆಗಿನ ಖ್ಯಾತ ಸ್ಟಾರ್ ನಟ ಅಶೋಕ್ ಕುಮಾರ್ ಅವರ ಭೇಟಿ ಮಾಡಿದರು. ಅವರಿಂದಲೇ ದಿಲೀಪ್ ಕುಮಾರ್ ನಟನೆಯ ಪಟ್ಟುಗಳನ್ನು ಕಲಿತುಕೊಂಡಿದ್ದಂತೆ. ಜುಗ್ನು ಚಿತ್ರ ಹಿಟ್ ಆಯಿತು, ನಂತರ ದಿಲೀಪ್ ಕುಮಾರ್ ಹಿಂತಿರುಗಿ ನೋಡಲೇ ಇಲ್ಲ, ಸಾಲು ಸಾಲು ಚಿತ್ರಗಳು ಬಂದವು, ಹಿಟ್ ಕೂಡ ಆದವು, ಅವುಗಳಲ್ಲಿ ಪ್ರಮುಖವಾದವು 'ಶಹೀದ್', 'ಮೇಲ', ನಂತರ ಬಂದ ಮತ್ತೊಂದು ಸೂಪರ್ ಹಿಟ್ ಚಿತ್ರವೇ ಮೆಹಬೂಬ ಖಾನ್ ಅವರ 'ಅಂದಾಜ್'.

ಟ್ರ್ಯಾಜಿಡಿ ಕಿಂಗ್: 1949ರಲ್ಲಿ ತೆರೆಗೆ ಬಂದ ಅಂದಾಜ್ ಚಿತ್ರದಲ್ಲಿ ಬಾಲಿವುಡ್ ನ ಮತ್ತಿಬ್ಬ ದಂತಕಥೆ ಪರಿಚಯವಾದರು ಅವರೇ ರಾಜ್ ಕಪೂರ್ ಮತ್ತು ನರ್ಗಿಸ್. 1940ರಲ್ಲಿ ಕೆಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದ ದಿಲೀಪ್ ಕುಮಾರ್, 1950ರ ದಶಕದಲ್ಲಿ ನಿಜವಾದ ಯಶಸ್ಸು ಕಂಡರು. ಹಿಟ್ ಚಿತ್ರಗಳಾದ ಬಬುಲ್, ದೇವದಾಸ್, ಹಲ್ ಚಲ್, ಯಹುದಿ, ದಾಗ್, ಸೈರಾಟ್, ನಯ ದೌರ್, ದೀದರ್ ಇವೆಲ್ಲಾ ಕ್ಲಾಸಿಕ್ ದುರಂತ ಅಂತ್ಯದ ಕಥೆಯನ್ನು ಹೊಂದಿದ್ದ ಚಿತ್ರಗಳು. ಈ ಚಿತ್ರಗಳು ಅದ್ಬುತ ಯಶಸ್ಸು ಕಂಡದ್ದಲ್ಲದೆ ದಿಲೀಪ್ ಕುಮಾರ್ ಅವರ ಹೆಸರ ಜೊತೆ ಶಾಶ್ವತವಾಗಿ ಟ್ರ್ಯಾಜಿಡಿ ಕಿಂಗ್ ಎಂಬ ಅಡ್ಡಹೆಸರು ಹುಟ್ಟಿಕೊಂಡಿತು.

ಸಾಲು ಸಾಲು ದುರಂತ ಕಥೆಯ ಚಿತ್ರಗಳನ್ನು ಮಾಡಿ ಯಶಸ್ಸು ಗಳಿಸಿದ್ದ ದಿಲೀಪ್ ಕುಮಾರ್ ಅವರ ವೈಯಕ್ತಿಕ ಜೀವನದ ಮೇಲೆ ಮನಸ್ಸಿನ ಮೇಲೆ ದುರಂತದ ವಿಷಯಗಳು ಪ್ರಭಾವ ಬೀರಿ ಅವರು ಮನಃಶಾಸ್ತ್ರಜ್ಞರ ಮೊರೆಯನ್ನು ಹೋಗಿದ್ದರಂತೆ. ನಂತರ ಸರಳ ಮನರಂಜನ ಚಿತ್ರಗಳನ್ನು ಮಾಡಬೇಕೆಂದು ಬಯಸಿ 'ಅನ್' ಚಿತ್ರವನ್ನು ಮಾಡಿದ್ದರು. ಟ್ರ್ಯಾಜಿಡಿ ಕಿಂಗ್ ನಾಮಧೇಯದಿಂದ ಹೊರಬರಲು ದಿಲೀಪ್ ಕುಮಾರ್ ಪ್ರಯತ್ನಿಸಿ ವಿವಿಧ ಶೈಲಿಯ ಚಿತ್ರಗಳನ್ನು ಮಾಡಲು ಹೊರಟಿದ್ದರು. ಅನೇಕ ಪ್ರಯೋಗಗಳನ್ನು ಮಾಡಿದ್ದರು.

ಕೊನೆಗೆ ಬಂದು ನಿಂತಿದ್ದೇ 1960ರಲ್ಲಿ ಆಗಿನ ಕಾಲದ ಬಿಗ್ ಬಜೆಟ್ ಸಿನೆಮಾ 'ಮೊಘಲ್ ಇ ಅಜಮ್'. ಈ ಚಿತ್ರ ಹಿಂದಿ ಸಿನಿಮಾರಂಗದಲ್ಲಿ ಎಷ್ಟು ಹಿಟ್ ಆಯಿತೆಂದರೆ 2004ರಲ್ಲಿ  ಮೂಲಚಿತ್ರ ಬಂದು 44 ವರ್ಷಗಳ ನಂತರ ಕಲರ್ ಸಿನೆಮಾ ರೂಪದಲ್ಲಿ ತೆರೆಗೆ ಬಂತು.

ವಿವಾಹ: 1961ರಲ್ಲಿ ದಿಲೀಪ್ ಕುಮಾರ್ ನಟನೆ ಜತೆಗೆ ನಿರ್ಮಾಪಕರೂ ಆಗಿದ್ದರು. ತಮ್ಮ ಬ್ಯಾನರ್ ನಲ್ಲಿ ಗಂಗಾ ಜಮುನಾ ಚಿತ್ರವನ್ನು ಖ್ಯಾತ ನಟಿ ವೈಜಯಂತಿಮಾಲಾ ಜೊತೆಗೆ ತಯಾರಿಸಿದ್ದರು. ನಂತರ ಯಾವುದೇ ಚಿತ್ರ ನಿರ್ಮಾಣ ಮಾಡಿರಲಿಲ್ಲ. 
1960ರ ದಶಕದಲ್ಲಿ 'ರಾಮ್ ಔರ್ ಶ್ಯಾಮ್', ವಹೀದಾ ರೆಹಮಾನ್ ಅವರ 'ಆದ್ಮಿ', ನಂತರ ಸೂಪರ್ ಹಿಟ್ ಚಿತ್ರ 'ಸಂಘರ್ಷ್' ಚಿತ್ರಗಳು ಬಂದವು, ವೈಜಯಂತಿಮಾಲಾ ಅವರೇ ನಾಯಕಿಯಾಗಿದ್ದರು.

1966ರಲ್ಲಿ ಬಾಲಿವುಡ್ ನಟಿ ತಮಗಿಂತ 22 ವರ್ಷ ವಯಸ್ಸಿಗೆ ಚಿಕ್ಕವರಿದ್ದ ಸಾಯಿರಾ ಬಾನು ಅವರನ್ನು ವಿವಾಹವಾದರು. ಸಾಯಿರಾ ಬಾನು ಜೊತೆ ವಿವಾಹಕ್ಕೆ ಮೊದಲು ದಿಲೀಪ್ ಕುಮಾರ್ ಅವರ ಹೆಸರುಗಳು ಮಧು ಬಾಲಾ, ಕಾಮಿನಿ ಕೌಶಲ್ ಮತ್ತು ವೈಜಯಂತಿ ಮಾಲಾ ಅವರ ಜೊತೆ ಕೇಳಿಬಂದಿದ್ದವು.

ದಿಲೀಪ್ ಕುಮಾರ್ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದರಂತೆ. ಅವರೇ ಅದನ್ನು ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಅವರ ವಿವಾಹ ನಿಶ್ಚಿತಾರ್ಥ ದಿನ ಮತ್ತೊಬ್ಬಳು ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಆ ಹುಡುಗಿಯನ್ನು ಭೇಟಿ ಮಾಡಿ ಸಮಾಧಾನ ಮಾಡಿ ನಂತರ ಹೋಗಿ ಸಾಯಿರಾ ಬಾನು ಜೊತೆ ನಿಶ್ಚಿತಾರ್ಥ ಮಾಡಿಕೊಂಡರಂತೆ.

20 ವರ್ಷಗಳಿಗೂ ಅಧಿಕ ಯಶಸ್ಸನ್ನು ಕಂಡಿದ್ದ ದಿಲೀಪ್ ಕುಮಾರ್ 1970ರ ದಶಕದಲ್ಲಿ ಕೆಲವು ಚಿತ್ರಗಳಲ್ಲಿ ಮಾತ್ರ ಗೆಲುವು ಕಂಡಿದ್ದರು. ಅದರಲ್ಲಿ ಸಾಯಿರಾ ಬಾನು ಜೊತೆ ಮಾಡಿದ್ದ 'ಗೋಪಿ' ಚಿತ್ರ ಪ್ರಮುಖ. 'ಬೈರಾಗ್' ಕೂಡ ಯಶಸ್ವಿಯಾಗಿತ್ತು.

ಕೊನೆಗೆ 1981ರಲ್ಲಿ 'ಕ್ರಾಂತಿ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಅದರಲ್ಲಿ ಶಶಿ ಕಪೂರ್, ಶತ್ರುಘ್ನ ಸಿನ್ಹ, ಮನೋಜ್ ಕುಮಾರ್, ಹೇಮ ಮಾಲಿನಿ ನಟಿಸಿದ್ದರು. 1882ರಲ್ಲಿ 'ವಿದಾತ್' ಚಿತ್ರ ಸುಭಾಷ್ ಘಾಯ್ ನಿರ್ದೇಶನದಲ್ಲಿ ತೆರೆಗೆ ಬಂತು. 1982ರಲ್ಲಿ ಸೂಪರ್ ಹಿಟ್ ಚಿತ್ರ 'ಶಕ್ತಿ'ಯಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದರು. 1984ರಲ್ಲಿ ಸಾಮಾಜಿಕ ಚಿತ್ರ 'ಮಶಾಲ್' ಚಿತ್ರ ತೆರೆಗೆ ಬಂದು ಬಾಕ್ಸ್ ಆಫೀಸ್ ನಲ್ಲಿ ಸೋತಿತು. ಆದರೆ ದಿಲೀಪ್ ಕುಮಾರ್ ನಟನೆಗೆ ಪ್ರಶಂಸೆ ವ್ಯಕ್ತವಾಯಿತು.

ನಂತರ 1984ರಲ್ಲಿ ಶಶಿ ಕಪೂರ್ ಜೊತೆ 'ದುನಿಯಾ', ಜಿತೇಂದ್ರ ಜೊತೆ 'ಧರ್ಮ್' ಅಧಿಕಾರಿ ಚಿತ್ರದಲ್ಲಿ 1986ರಲ್ಲಿ ನಟಿಸಿದ್ದರು. ಮತ್ತೊಮ್ಮೆ ಸುಭಾಷ್ ಘಾಯ್ ನಿರ್ದೇಶನದ 'ಕರ್ಮ' ಸಿನೆಮಾದಲ್ಲಿ 1986ರಲ್ಲಿ ನಟಿಸಿದರು. 1989ರಲ್ಲಿ 'ಕನೂನ್ ಅಪ್ನ ಅಪ್ನ' ಚಿತ್ರದಲ್ಲಿ ಕಾಣಿಸಿಕೊಂಡರು.1991ರಲ್ಲಿ ಸುಭಾಷ್ ಘಾಯ್ ಜೊತೆ ಕೊನೆಯದಾಗಿ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡ ದಿಲೀಪ್ ಕುಮಾರ್ ಚಿತ್ರ 'ಸೌದಗರ್'.

5 ದಶಕಗಳ ಕಾಲ ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ 1994ರಲ್ಲಿ ದಿಲೀಪ್ ಕುಮಾರ್ ಅವರಿಗೆ ಜೀವಿತಾವಧಿ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ಅದೇ ವರ್ಷ ದಾದಾ ಸಾಹೇಬ್ ಫಾಲ್ಕೆ ಮತ್ತು 2015ರಲ್ಲಿ ಪ್ರತಿಷ್ಠಿತ ಪದ್ಮ ವಿಭೂಷಣ ಒಲಿದು ಬಂತು.ದಿಲೀಪ್ ಕುಮಾರ್ ಅವರು ಕೊನೆಯ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು 1998ರಲ್ಲಿ 'ಕ್ವಿಲಾ' ಚಿತ್ರ.

ಚಿತ್ರರಂಗದಲ್ಲಿ ಸೇವೆ ಮುಗಿಸಿದ್ದ ದಿಲೀಪ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ 2000ದಿಂದ 2006ರವರೆಗೆ ರಾಜ್ಯಸಭೆಗೆ ನಾಮಾಂಕಿತ ಮಾಡಿತ್ತು. ರಾಜಕೀಯ, ಚಿತ್ರರಂಗ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿದ್ದ ದಿಲೀಪ್ ಕುಮಾರ್ ಎಂಪಿಲ್ಯಾಡ್ ಫಂಡ್ ನಿಂದ ಹಲವು ಕೆಲಸಗಳನ್ನು, ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.

ತಮ್ಮ ವೈವಾಹಿಕ ಜೀವನ, 1993ರಲ್ಲಿ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ್ದು ಬಿಟ್ಟರೆ ಸಮಾಜದಲ್ಲಿ, ನಾಗರಿಕರಲ್ಲಿ, ಅಭಿಮಾನಿಗಳಲ್ಲಿ ದಿಲೀಪ್ ಕುಮಾರ್ ಅವರ ಬಗ್ಗೆ ಅಪಾರ ಗೌರವ, ಅಭಿಮಾನವನ್ನು ಉಳಿಸಿಕೊಂಡು ಹೋಗಿದ್ದಾರೆ. 

ಇಂದು ಅವರ ಅಗಲಿಗೆ ಚಿತ್ರರಂಗದ ಕಲಾವಿದರಿಗೆ, ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ನಿಜ. ಅವರ ನಿಧನ ಮೂಲಕ ಬಾಲಿವುಡ್ ನಲ್ಲಿ ಕಲೆಯ ಪರಂಪರೆಯ ಕೊಂಡಿಯೊಂದು ಕಳಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com