'ಪೊನ್ನಿಯಿನ್ ಸೆಲ್ವನ್: 1' ನಿಂದ ಸ್ಫೂರ್ತಿ ಪಡೆದ ಕತ್ರಿನಾ ಕೈಫ್; ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವ ಆಸೆ

ಸದ್ಯ ತನ್ನ ಮುಂಬರುವ ಹಾರರ್-ಕಾಮಿಡಿ ಸಿನಿಮಾ 'ಫೋನ್ ಭೂತ್' ಬಿಡುಗಡೆಗೆ ಕಾಯುತ್ತಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್, ದಕ್ಷಿಣ ಭಾರತದ ಚಲನಚಿತ್ರಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಕತ್ರಿನಾ ಕೈಫ್
ಕತ್ರಿನಾ ಕೈಫ್

ಮುಂಬೈ: ಸದ್ಯ ತನ್ನ ಮುಂಬರುವ ಹಾರರ್-ಕಾಮಿಡಿ ಸಿನಿಮಾ 'ಫೋನ್ ಭೂತ್' ಬಿಡುಗಡೆಗೆ ಕಾಯುತ್ತಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್, ದಕ್ಷಿಣ ಭಾರತದ ಚಲನಚಿತ್ರಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

2004ರಲ್ಲಿ ಬಿಡುಗಡೆಯಾದ ತೆಲುಗಿನ 'ಮಲ್ಲಿಸ್ವರಿ' ಮತ್ತು 2005 ರಲ್ಲಿ ಬಿಡುಗಡೆಯಾದ 'ಅಲ್ಲರಿ ಪಿಡುಗು' ಮತ್ತು ಮಲಯಾಳಂ ಚಿತ್ರ 'ಬಲರಾಮ್‌ ವರ್ಸಸ್ ತಾರಾದಾಸ್' ನಂತಹ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕತ್ರಿನಾ ನಟಿಸಿದ್ದಾರೆ.

ಸುದ್ದಿಸಂಸ್ಥೆ ಐಎಎನ್ಎಸ್ ಜೊತೆಗೆ ಮಾತನಾಡಿರುವ ಕತ್ರಿನಾ, 'ಮುಂದೆ ಎಂದಾದರೂ ಸಾಕಷ್ಟು ಉತ್ತಮ ಮತ್ತು ಬಲಿಷ್ಠ ಪಾತ್ರವನ್ನು ಹೊಂದಿರುವ ಸ್ಕ್ರಿಪ್ಟ್ ಇದ್ದರೆ, ಭಾಷೆ ಯಾವುದಾದರೂ ನನಗೆ ಅಡ್ಡಿಯಾಗುವುದಿಲ್ಲ. ನಾವು ಹೊಂದಿರುವ ಕೆಲವು ಅದ್ಭುತ ನಿರ್ದೇಶಕರು ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಅವರು ಮಣಿರತ್ನಂ ಮತ್ತು ಅವರ ಇತ್ತೀಚಿಗೆ ಬಿಡುಗಡೆಯಾದ 'ಪೊನ್ನಿಯಿನ್ ಸೆಲ್ವನ್: 1' ಸಿನಿಮಾವನ್ನು ಹೊಗಳಿದರು.

'ಅತ್ಯುತ್ತಮ ಮತ್ತು ಇತ್ತೀಚಿನ ಉದಾಹರಣೆ ಎಂದರೆ ಮಣಿರತ್ನಂ ಸರ್ ಅವರ 'ಪೊನ್ನಿಯಿನ್ ಸೆಲ್ವನ್: 1'. ಅಂತಹ ಭವ್ಯತೆ, ಸುಂದರವಾದ ದೃಶ್ಯಗಳು ಮತ್ತು ಸಂಗೀತವನ್ನು ಒಳಗೊಂಡಿರುವ ಅದೊಂದು ಅದ್ಭುತ ಚಿತ್ರವಲ್ಲವೇ? ಅವರ ಜೀವನದ ಈ ಹಂತದಲ್ಲಿ ಇಷ್ಟು ದೊಡ್ಡ ಮಟ್ಟದ ಚಲನಚಿತ್ರವನ್ನು ಮಾಡುವುದೆಂದರೆ, ಇದು ಅವರ ಅಪ್ರತಿಮ ನಿರ್ದೇಶಕನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ' ಎಂದು ಕತ್ರಿನಾ ತಿಳಿಸಿದ್ದಾರೆ.

ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಅವರ ಮೊದಲ ಚಿತ್ರ 'ಫೋನ್ ಭೂತ್' ಬಿಡುಗಡೆಗೆ ಸಿದ್ಧವಾಗಿದ್ದು, ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಈ ಚಿತ್ರವು ನವೆಂಬರ್ 4ರಂದು ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com