'ನಾನು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ': ನಟ ಅಮೀರ್ ಖಾನ್

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. 
ನಟ ಅಮೀರ್ ಖಾನ್
ನಟ ಅಮೀರ್ ಖಾನ್

ನವದೆಹಲಿ: ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. 

ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಕಳೆದೊಂದು ವಾರಗಳಿಂದ #BoycottLaalSinghChaddha ಹ್ಯಾಶ್ ಟಾಗ್ ಜೋರಾಗಿದೆ. ಅಮೀರ್ ಖಾನ್ ಚಿತ್ರವನ್ನು ನೋಡಬೇಡಿ, ನಿಷೇಧ ಮಾಡಿ ಎಂಬ ಕೂಗು ಬಲಪಂಥೀಯರಿಂದ ಜೋರಾಗಿದೆ.

ಅಮೀರ್ ಖಾನ್ ಕೆಲವು ವರ್ಷಗಳ ಹಿಂದೆ ದೇಶದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಭಾರೀ ಮಟ್ಟದಲ್ಲಿ ಟ್ರೋಲ್ ಮಾಡಲಾಗುತ್ತಿದೆ. 

ತಮ್ಮ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಅಮೀರ್ ಖಾನ್ ಚಿತ್ರದ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಟ್ವಿಟ್ಟರ್ ಮತ್ತು ಇತರ ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರವನ್ನು ಬಹಿಷ್ಕಾರ ಮಾಡಿ ಎಂದು ಹೆಚ್ಚುತ್ತಿರುವ ಟ್ರೋಲ್ ಬಗ್ಗೆ ಪತ್ರಕರ್ತರು ನಟನನ್ನು ಪ್ರಶ್ನಿಸಿದರು. 

ಅದಕ್ಕೆ ಪ್ರತಿಕ್ರಿಯಿಸಿದ ನಟ ಅಮೀರ್ ಖಾನ್, ನಾನು ಯಾರದ್ದಾದರೂ ಭಾವನೆಗಳಿಗೆ ನೋವನ್ನುಂಟುಮಾಡಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನನಗೆ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಇಲ್ಲ. ಯಾರಾದರೂ ನನ್ನ ಚಿತ್ರವನ್ನು ನೋಡಲು ಇಚ್ಛೆ ತೋರದಿದ್ದರೆ ಅವರ ಭಾವನೆಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಆದರೂ ನಾನು ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ಸಿನಿಪ್ರೇಕ್ಷಕರನ್ನು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾವು ಅದನ್ನು ತುಂಬ ಪ್ರೀತಿಯಿಂದ ಮಾಡಿದ್ದೇವೆ. ಬಹಳಷ್ಟು ಜನರು ಕಷ್ಟಪಟ್ಟು ಅದರಲ್ಲಿ ಶ್ರಮ ಹಾಕಿದ್ದಾರೆ. ಜನರು ಚಿತ್ರವನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಲಾಲ್ ಸಿಂಗ್ ಚಡ್ಡಾ ತೆರೆಗೆ ಬರಲು ಸಿದ್ಧವಾಗುತ್ತಿದ್ದಂತೆ ಅಮೀರ್ ಖಾನ್ ನೀಡಿದ್ದ ಭಾರತ ದೇಶ ಅಸಹಿಷ್ಣುತೆಯತ್ತ ಸಾಗುತ್ತಿದೆ ಹೇಳಿಕೆ ಭಾರೀ ಮಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ, ಇಂಟರ್ನೆಟ್ ನಲ್ಲಿ ಹರಿದಾಡಲು ಆರಂಭಿಸಿತು. ಇನ್ನು ಚಿತ್ರದ ನಾಯಕಿ ಕರೀನಾ ಕಪೂರ್ ಖಾನ್ ಎರಡು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ವಿವಾದಿತ ಹೇಳಿಕೆ ಏನು?: 2015ರಲ್ಲಿ ಸಂದರ್ಶನವೊಂದರಲ್ಲಿ ಅಮೀರ್ ಖಾನ್, ನಮ್ಮ ದೇಶ ಬಹಳ ಸಹಿಷ್ಣುತೆಯನ್ನು ಹೊಂದಿರುವ ದೇಶ, ಆದರೆ ಕೆಲವರು ಕೆಟ್ಟ ವಿಷಯಗಳನ್ನು ಹಬ್ಬಿಸುವವರು, ಸೃಷ್ಟಿಸುವವರು ಇರುತ್ತಾರೆ ಎಂದಿದ್ದರು. ಅನ್ನು ಅವರ ಮಾಜಿ ಪತ್ನಿ ಕಿರಣ್ ರಾವ್ ತಮ್ಮ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ದೇಶಬಿಟ್ಟು ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಚಿತ್ರ ನಾಳೆ ತೆರೆಗೆ ಬರುತ್ತಿದೆ, ಏನನ್ನಿಸುತ್ತಿದೆ ಎಂದು ಕೇಳಿದಾಗ ಅಮೀರ್ ಖಾನ್, ಬಹಳ ಆತಂಕಕ್ಕೊಳಗಾಗಿದ್ದೇನೆ. ಕಳೆದ 48 ಗಂಟೆಗಳಿಂದ ನಿದ್ದೆ ಮಾಡಿಲ್ಲ. ನಿದ್ದೆಯೇ ಬರುತ್ತಿಲ್ಲ. ಮೆದುಳು ತುಂಬಾ ಭರ್ತಿಯಾಗಿ ಹೋಗಿದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪುಸ್ತಕ ಓದುತ್ತೇನೆ, ಚೆಸ್ ಆಡುತ್ತೇನೆ, ಆನ್ ಲೈನ್ ನಲ್ಲಿ ಆಟವಾಡುತ್ತೇನೆ. ನಾಳೆ ಚಿತ್ರ ಬಿಡುಗಡೆಯಾದ ನಂತರ ನಿದ್ದೆ ಮಾಡುತ್ತೇನೆ ಎಂದಿದ್ದಾರೆ.

ಅದ್ವೈತ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ 1994ರ ಪ್ರಶಸ್ತಿ ಪಡೆದ ಚಿತ್ರ ಫಾರೆಸ್ಟ್ ಗಂಪ್ ಚಿತ್ರದಿಂದ ಕಥೆ ಆಯ್ದುಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com